ADVERTISEMENT

ಮಹಾರಾಷ್ಟ್ರ: ಆನ್‌ಲೈನ್ ಕ್ಲಾಸ್‌ಗಾಗಿ ಪ್ರತಿ ದಿನ 50 ಕಿ.ಮೀ. ದೂರ ಪ್ರಯಾಣಿಸಿದರು!

ಪಿಟಿಐ
Published 22 ಆಗಸ್ಟ್ 2020, 10:32 IST
Last Updated 22 ಆಗಸ್ಟ್ 2020, 10:32 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಮುಂಬೈ: ಕೊರೊನಾ ವೈರಸ್ ಲಾಕ್‌ಡೌನ್ ವೇಳೆ ಹಮ್ಮಿಕೊಂಡ ಆನ್‌ಲೈನ್ ತರಗತಿಗೆ ಹಾಜರಾಗಲು ವಿದ್ಯಾರ್ಥಿಗಳು 50 ಕಿ.ಮೀ. ದೂರ ಕ್ರಮಿಸಬೇಕಾಗಿ ಬಂದಿದೆ! ಮಹಾರಾಷ್ಟ್ರದ ರತ್ನಗಿರಿ ಜಿಲ್ಲೆಯಲ್ಲಿ ವಿದ್ಯಾರ್ಥಿಗಳು ಹೀಗೊಂದು ಸನ್ನಿವೇಶ ಎದುರಿಸಬೇಕಾಗಿ ಬಂದಿದ್ದು, ಕೊನೆಗೆ ವಿದ್ಯಾರ್ಥಿಯೊಬ್ಬ ರಾಷ್ಟ್ರೀಯ ಮಕ್ಕಳ ಹಕ್ಕು ರಕ್ಷಣಾ ಆಯೋಗಕ್ಕೆ (ಎನ್‌ಸಿಪಿಸಿಆರ್) ಪತ್ರ ಬರೆದಿದ್ದಾನೆ.

ಕೊರೊನಾ ಲಾಕ್‌ಡೌನ್‌ ಬೆನ್ನಲ್ಲೇ ನಿಸರ್ಗ ಚಂಡಮಾರುತವೂ ಅಪ್ಪಳಿಸಿದ್ದರಿಂದ ರತ್ನಗಿರಿ ಜಿಲ್ಲೆಯ ಗ್ರಾಮೀಣ ಪ್ರದೇಶವೊಂದರಲ್ಲಿ ಜೂನ್‌ನಲ್ಲಿ ಅಂತರ್ಜಾಲ ಸಂಪರ್ಕವೂ ಕಡಿತಗೊಂಡಿತ್ತು. ಪರಿಣಾಮವಾಗಿ ಅಲ್ಲಿನ 200 ವಿದ್ಯಾರ್ಥಿಗಳುಆನ್‌ಲೈನ್ ಕ್ಲಾಸ್‌ಗೆ ಹಾಜರಾಗಲು ಪ್ರತಿ ದಿನ 50 ಕಿ.ಮೀ. ದೂರ ಪ್ರಯಾಣಿಸಬೆಕಾಗಿ ಬಂದಿತ್ತು.

ಒಂದು ತಿಂಗಳಾದರೂ ಪರಿಸ್ಥಿತಿ ಸುಧಾರಿಸದೇ ಇರುವುದರಿಂದ ವಿದ್ಯಾರ್ಥಿಯೊಬ್ಬ ಎನ್‌ಸಿಪಿಸಿಆರ್‌ಗೆ ಪತ್ರ ಬರೆದು ಅಳಲು ತೋಡಿಕೊಂಡಿದ್ದಾನೆ. ತಕ್ಷಣ ಕಾರ್ಯಪ್ರವೃತ್ತವಾಗಿರುವ ಎನ್‌ಸಿಪಿಸಿಆರ್‌, ಸ್ಥಳೀಯ ದೂರಸಂಪರ್ಕ ಆಪರೇಟರ್‌ಗಳು ಮತ್ತು ಜಿಲ್ಲಾಡಳಿತವನ್ನು ಸಂಪರ್ಕಿಸಿ, ಆದಷ್ಟು ಬೇಗ ಅಂತರ್ಜಾಲ ಸಂಪರ್ಕ ಮರಳಿ ಕಲ್ಪಿಸುವಂತೆ ಸೂಚಿಸಿತ್ತು. ಶೀಘ್ರದಲ್ಲೇ ಸಮಸ್ಯೆ ಬಗೆಹರಿಸುವ ಭರವಸೆಯನ್ನೂ ನೀಡಲಾಗಿದೆ ಎಂದು ಎನ್‌ಸಿಪಿಸಿಆರ್‌ ಅಧ್ಯಕ್ಷ ಪ್ರಿಯಾಂಕ್ ಕಾನೂನಗೋ ತಿಳಿಸಿದ್ದರು.

ADVERTISEMENT

ಜುಲೈ 25ರಂದು ಜಿಲ್ಲಾಧಿಕಾರಿಗೆ ಪತ್ರವನ್ನೂ ಬರೆದಿರುವ ಪ್ರಿಯಾಂಕ್, ಆದಷ್ಟು ಶೀಘ್ರದಲ್ಲಿ ಸಮಸ್ಯೆ ಬಗೆಹರಿಸುವುದನ್ನು ಖಾತರಿಪಡಿಸಬೇಕು ಎಂದೂ ಒತ್ತಿಹೇಳಿದ್ದರು.

ಎನ್‌ಸಿಪಿಸಿಆರ್‌ ನಿರಂತರ ಬೆನ್ನುಬಿದ್ದಿದ್ದರಿಂದಾಗಿ ಕೊನೆಗೂ ಅಧಿಕಾರಿಗಳು ಅಂತರ್ಜಾಲ ಸಂಪರ್ಕ ಕಲ್ಪಿಸಿದ್ದಾರೆ. ಆ ಪ್ರದೇಶದ ಸೆಲ್ಯುಲರ್ ನೆಟ್‌ವರ್ಕ್‌ಗಳ ಪೈಕಿ ಒಂದರ ಮರುಸಂಕರ್ಪ ಯಶಸ್ವಿಯಾಗಿದೆ. ಉಳಿದವರೂ ಆದಷ್ಟು ಬೇಗ ಸಂಪರ್ಕ ಕಲ್ಪಿಸುವುದಾಗಿ ಭರವಸೆ ನೀಡಿದ್ದಾರೆ ಎಂದು ಪ್ರಿಯಾಂಕ್ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.