ADVERTISEMENT

ಮಹಾರಾಷ್ಟ್ರ: ಮುಸ್ಲಿಮರಿಗೆ ಶೇ 5 ಮೀಸಲಾತಿ ಪ್ರಸ್ತಾವ

ಪಿಟಿಐ
Published 28 ಫೆಬ್ರುವರಿ 2020, 19:52 IST
Last Updated 28 ಫೆಬ್ರುವರಿ 2020, 19:52 IST
ನವಾಬ್‌ ಮಲಿಕ್‌
ನವಾಬ್‌ ಮಲಿಕ್‌   

ಮುಂಬೈ : ‘ಮಹಾರಾಷ್ಟ್ರದ ಶೈಕ್ಷಣಿಕ ಸಂಸ್ಥೆಗಳಲ್ಲಿ ಮುಸ್ಲಿಂ ಸಮುದಾಯದವರಿಗೆ ಶೇ 5ರಷ್ಟು ಮೀಸಲಾತಿ ನೀಡಲಾಗುವುದು’ ಎಂದು ಮಹಾರಾಷ್ಟ್ರದ ಅಲ್ಪಸಂಖ್ಯಾತರ ವ್ಯವಹಾರಗಳ ಖಾತೆ ಸಚಿವ ನವಾಬ್‌ ಮಲಿಕ್‌ ಶುಕ್ರವಾರ ತಿಳಿಸಿದ್ದಾರೆ.

ವಿಧಾನಪರಿಷತ್ತಿನಲ್ಲಿ ಕಾಂಗ್ರೆಸ್‌ ಸದಸ್ಯರೊಬ್ಬರ ಪ್ರಶ್ನೆಗೆ ಪ್ರತಿಕ್ರಿಯೆ ನೀಡಿದ ಅವರು, ‘ಈಗ ನಡೆಯುತ್ತಿರುವ ಬಜೆಟ್‌ ಅಧಿವೇಶನದಲ್ಲೇ ಮೀಸಲಾತಿ ಮಸೂದೆಯನ್ನು ಮಂಡಿಸಿ, ಅಂಗೀಕಾರ ಪಡೆಯಲಾಗುವುದು. ಮುಂದಿನ ಶೈಕ್ಷಣಿಕ ವರ್ಷದ ಪ್ರವೇಶಾತಿ ಆರಂಭವಾಗುವುದಕ್ಕೂ ಮುನ್ನ ಅದನ್ನು ಜಾರಿಗೊಳಿಸಲು ಅಗತ್ಯವಿರುವ ಕ್ರಮ ಕೈಗೊಳ್ಳಲಾಗುವುದು. ಬಿಜೆಪಿ– ಶಿವಸೇನಾ ನೇತೃತ್ವದ ಹಿಂದಿನ ಸರ್ಕಾರವು ಕೋರ್ಟ್‌ ಆದೇಶ ಇದ್ದರೂ ಮುಸ್ಲಿಮರಿಗೆಮೀಸಲಾತಿ ನೀಡಲು ನಿರಾಕರಿಸಿತ್ತು’ ಎಂದರು.

ಎನ್‌ಸಿಪಿ ಶಾಸಕರಾಗಿರುವ ಮಲಿಕ್‌ ಅವರು, ಸರ್ಕಾರಿ ಉದ್ಯೋಗದಲ್ಲೂ ಮುಸ್ಲಿಮರಿಗೆ ಶೇ 5ರಷ್ಟು ಮೀಸಲಾತಿ ನೀಡುವ ಪ್ರಸ್ತಾವವನ್ನು ಮಾಡಿದ್ದಾರೆ. ಈ ಬಗ್ಗೆ ಸರ್ಕಾರವು ಕಾನೂನು ತಜ್ಞರ ಸಲಹೆಯನ್ನು ಪಡೆಯಲು ಮುಂದಾಗಿದೆ.

ADVERTISEMENT

ಮೀಸಲಾತಿಯ ಒಟ್ಟು ಪ್ರಮಾಣ ಶೇ 50 ಮೀರಬಾರದು ಎಂದು ಸುಪ್ರೀಂ ಕೋರ್ಟ್‌ ಆದೇಶವಿದೆ. ಮಹಾರಾಷ್ಟ್ರದಲ್ಲಿ ಈಗಾಗಲೇ ಮೀಸಲಾತಿ ಪ್ರಮಾಣವು ಶೇ 50 ತಲುಪಿದೆ. ಮರಾಠಾ ಸಮುದಾಯದವರಿಗೆ ಸರ್ಕಾರಿ ಉದ್ಯೋಗ ಹಾಗೂ ಶಿಕ್ಷಣ ಸಂಸ್ಥೆಗಳಲ್ಲಿ ಶೇ 13ರಷ್ಟು ಮೀಸಲಾತಿ ನೀಡುವ ಹಿಂದಿನ ಸರ್ಕಾರದ ತೀರ್ಮಾನವನ್ನು ಬಾಂಬೆ ಹೈಕೋರ್ಟ್‌ ಎತ್ತಿಹಿಡಿದಿತ್ತು. ಸರ್ಕಾರವು ಈ ಸಮುದಾಯಕ್ಕೆ ಶೇ 16ರಷ್ಟು ಮೀಸಲಾತಿ ನೀಡಲು ಮುಂದಾಗಿದ್ದರೂ ಕೋರ್ಟ್‌ ಅದನ್ನು ಶೇ 13ಕ್ಕೆ ಮಿತಿಗೊಳಿಸಿತ್ತು. ಆ ಮೂಲಕ ಮೀಸಲಾತಿ ಪ್ರಮಾಣ ಶೇ 50ಕ್ಕೆ ತಲುಪಿದೆ. ಈಗ ಮತ್ತೆ ಶೇ 5ರಷ್ಟು ಮೀಸಲಾತಿ ನೀಡಲು ಮುಂದಾದರೆ ಅದನ್ನು ಸರಿಹೊಂದಿಸುವುದು ಹೇಗೆ ಎಂಬ ವಿಚಾರವಾಗಿ ಸರ್ಕಾರ ಯಾವುದೇ ಹೇಳಿಕೆಯನ್ನು ನೀಡಿಲ್ಲ.

ನಿರ್ಧಾರವಾಗಿಲ್ಲ: ಸಚಿವ ಶಿಂಧೆ

‘ಶಿಕ್ಷಣ ಸಂಸ್ಥೆಗಳಲ್ಲಿ ಮುಸ್ಲಿಮರಿಗೆ ಶೇ 5ರಷ್ಟು ಮೀಸಲಾತಿ ನೀಡುವ ವಿಚಾರವಾಗಿ ಇನ್ನೂ ಯಾವುದೇ ನಿರ್ಧಾರವಾಗಿಲ್ಲ’ ಎಂದು ಮಹಾರಾಷ್ಟ್ರದ ಸಚಿವ ಏಕನಾಥ್‌ ಶಿಂಧೆ ಸ್ಪಷ್ಟಪಡಿಸಿದ್ದಾರೆ.

ಮೀಸಲಾತಿ ಕುರಿತು ನವಾಬ್‌ ಮಲಿಕ್‌ ಅವರು ಹೇಳಿಕೆ ನೀಡಿದ ಕೆಲವೇ ಕ್ಷಣಗಳಲ್ಲಿ ಶಿವಸೇನಾ ಮುಖಂಡ, ನಗರಾಭಿವೃದ್ಧಿ ಖಾತೆ ಸಚಿವ ಶಿಂಧೆ ಅವರಿಂದ ಈ ಪ್ರತಿಕ್ರಿಯೆ ಬಂದಿದೆ. ‘ಮೀಸಲಾತಿ ಕುರಿತು ಮಲಿಕ್‌ ಅವರು ನೀಡಿರುವ ಹೇಳಿಕೆಯ ಬಗ್ಗೆ ನನಗೆ ಮಾಹಿತಿ ಇಲ್ಲ. ಮಹಾರಾಷ್ಟ್ರ ವಿಕಾಸ ಅಘಾಡಿಯಲ್ಲಿರುವ ಎಲ್ಲಾ ಪಕ್ಷಗಳ ನಾಯಕರು ಸೇರಿ, ಚರ್ಚಿಸಿ ಈ ಕುರಿತ ಅಂತಿಮ ನಿರ್ಧಾರ ಕೈಗೊಳ್ಳುವರು. ಮುಖ್ಯಮಂತ್ರಿ ಉದ್ಧವ್‌ ಠಾಕ್ರೆ ಅವರು ಸರಿಯಾದ ಸಮಯದಲ್ಲಿ ಸೂಕ್ತ ತೀರ್ಮಾನ ಕೈಗೊಳ್ಳುವರು’ ಎಂದು ಶಿಂಧೆ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.