ADVERTISEMENT

ಮಹಾರಾಷ್ಟ್ರ: ಶಿಕ್ಷಣ ಸಂಸ್ಥೆಗಳಲ್ಲಿ ಮುಸ್ಲಿಮರಿಗೆ ಸಿಗಲಿದೆ ಶೇ 5ರಷ್ಟು ಮೀಸಲಾತಿ

ಪಿಟಿಐ
Published 28 ಫೆಬ್ರುವರಿ 2020, 13:26 IST
Last Updated 28 ಫೆಬ್ರುವರಿ 2020, 13:26 IST
ನವಾಬ್ ಮಲಿಕ್ (ಸಂಗ್ರಹ ಚಿತ್ರ)
ನವಾಬ್ ಮಲಿಕ್ (ಸಂಗ್ರಹ ಚಿತ್ರ)   

ಮುಂಬೈ: ಶಿಕ್ಷಣ ಸಂಸ್ಥೆಗಳಲ್ಲಿ ಮುಸ್ಲಿಮರಿಗೆ ಶೇ 5ರಷ್ಟು ಮೀಸಲಾತಿ ನೀಡುವ ಪ್ರಸ್ತಾವ ‘ಮಹಾ ವಿಕಾಸ್ ಆಘಾಡಿ’ ಸರ್ಕಾರದ ಮುಂದಿದೆ ಎಂದು ಅಲ್ಪಸಂಖ್ಯಾತ ವ್ಯವಹಾರಗಳ ಸಚಿವ ನವಾಬ್ ಮಲಿಕ್ ಶುಕ್ರವಾರ ತಿಳಿಸಿದ್ದಾರೆ.

ಮೀಸಲಾತಿಗೆ ಸಂಬಂಧಿಸಿದ ಮಸೂದೆಗೆ ಈಗ ನಡೆಯುತ್ತಿರುವ ಬಜೆಟ್ ಅಧಿವೇಶನದಲ್ಲೇ ಅನುಮೋದನೆ ಪಡೆಯಲಾಗುವುದು. ಶಾಲೆಗಳಲ್ಲಿ ಮುಂದಿನ ಶೈಕ್ಷಣಿಕ ವರ್ಷದ ದಾಖಲಾತಿ ಆರಂಭವಾಗುವುದಕ್ಕೂ ಮೊದಲೇ ಈ ನಿಟ್ಟಿನಲ್ಲಿ ಕ್ರಮ ಕೈಗೊಳ್ಳಲಾಗುವುದು ಎಂದೂ ಅವರು ರಾಜ್ಯ ವಿಧಾನ ಪರಿಷತ್ತಿನಲ್ಲಿ ತಿಳಿಸಿದ್ದಾರೆ.

ಕಾಂಗ್ರೆಸ್ ಸದಸ್ಯ ಶರದ್ ರಣ್‌ಪಿಸೆ ಅವರ ಪ್ರಶ್ನೆಗೆ ಉತ್ತರಿಸುವ ವೇಳೆ ಮಲಿಕ್ ಈ ವಿಷಯ ತಿಳಿಸಿದ್ದಾರೆ.

ADVERTISEMENT

ಎನ್‌ಸಿಪಿ ಶಾಸಕರಾಗಿರುವ ಮಲಿಕ್‌ ಅವರು, ಸರ್ಕಾರಿ ಉದ್ಯೋಗದಲ್ಲೂ ಮುಸ್ಲಿಮರಿಗೆ ಶೇ 5ರಷ್ಟು ಮೀಸಲಾತಿ ನೀಡುವ ಪ್ರಸ್ತಾಪವನ್ನು ಮಾಡಿದ್ದಾರೆ. ಈ ಬಗ್ಗೆ ಸರ್ಕಾರವು ಕಾನೂನು ತಜ್ಞರ ಸಲಹೆಯನ್ನು ಪಡೆಯಲು ಮುಂದಾಗಿದೆ.

ಮೀಸಲಾತಿಯ ಒಟ್ಟು ಪ್ರಮಾಣ ಶೇ 50ನ್ನು ಮೀರಬಾರದು ಎಂದು ಸುಪ್ರೀಂ ಕೋರ್ಟ್‌ ಆದೇಶವಿದೆ. ಮಹಾರಾಷ್ಟ್ರದಲ್ಲಿ ಈಗಾಗಲೇ ಮೀಸಲಾತಿ ಪ್ರಮಾಣವು ಶೇ 50 ತಲುಪಿದೆ. ಮರಾಠಾ ಸಮುದಾಯದವರಿಗೆ ಸರ್ಕಾರಿ ಉದ್ಯೋಗ ಹಾಗೂ ಶಿಕ್ಷಣ ಸಂಸ್ಥೆಗಳಲ್ಲಿ ಶೇ 13ರಷ್ಟು ಮೀಸಲಾತಿ ನೀಡುವ ಹಿಂದಿನ ಸರ್ಕಾರದ ತೀರ್ಮಾನವನ್ನು ಬಾಂಬೆ ಹೈಕೋರ್ಟ್‌ ಎತ್ತಿಹಿಡಿದಿತ್ತು. ಸರ್ಕಾರವು ಈ ಸಮುದಾಯಕ್ಕೆ ಶೇ 16ರಷ್ಟು ಮೀಸಲಾತಿ ನೀಡಲು ಮುಂದಾಗಿದ್ದರೂ ಕೋರ್ಟ್‌ ಅದನ್ನು ಶೇ 13ಕ್ಕೆ ಮಿತಿಗೊಳಿಸಿತ್ತು. ಆ ಮೂಲಕ ಮೀಸಲಾತಿ ಪ್ರಮಾಣ ಶೇ 50ಕ್ಕೆ ತಲುಪಿದೆ. ಈಗ ಮತ್ತೆ ಶೇ 5ರಷ್ಟು ಮೀಸಲಾತಿ ನೀಡಲು ಮುಂದಾದರೆ ಅದನ್ನು ಸರಿಹೊಂದಿಸುವುದು ಹೇಗೆ ಎಂಬ ವಿಚಾರವಾಗಿ ಸರ್ಕಾರ ಯಾವುದೇ ಹೇಳಿಕೆಯನ್ನು ನೀಡಿಲ್ಲ.

ನಿರ್ಧಾರವಾಗಿಲ್ಲ: ಸಚಿವ ಶಿಂಧೆ
‘ಶಿಕ್ಷಣ ಸಂಸ್ಥೆಗಳಲ್ಲಿ ಮುಸ್ಲಿಮರಿಗೆ ಶೇ 5ರಷ್ಟು ಮೀಸಲಾತಿ ನೀಡುವ ವಿಚಾರವಾಗಿ ಇನ್ನೂ ಯಾವುದೇ ನಿರ್ಧಾರವಾಗಿಲ್ಲ’ ಎಂದು ಮಹಾರಾಷ್ಟ್ರದ ಸಚಿವ ಏಕನಾಥ್‌ ಶಿಂಧೆ ಸ್ಪಷ್ಟಪಡಿಸಿದ್ದಾರೆ.

ಮೀಸಲಾತಿ ಕುರಿತು ನವಾಬ್‌ ಮಲಿಕ್‌ ಅವರು ಹೇಳಿಕೆ ನೀಡಿದ ಕೆಲವೇ ಕ್ಷಣಗಳಲ್ಲಿ ಶಿವಸೇನಾ ಮುಖಂಡ, ನಗರಾಭಿವೃದ್ಧಿ ಖಾತೆ ಸಚಿವ ಶಿಂಧೆ ಅವರಿಂದ ಈ ಪ್ರತಿಕ್ರಿಯೆ ಬಂದಿದೆ. ‘ಮೀಸಲಾತಿ ಕುರಿತು ಮಲಿಕ್‌ ಅವರು ನೀಡಿರುವ ಹೇಳಿಕೆಯ ಬಗ್ಗೆ ನನಗೆ ಮಾಹಿತಿ ಇಲ್ಲ. ಮಹಾರಾಷ್ಟ್ರ ವಿಕಾಸ ಅಘಾಡಿಯಲ್ಲಿರುವ ಎಲ್ಲಾ ಪಕ್ಷಗಳ ನಾಯಕರು ಸೇರಿ, ಚರ್ಚಿಸಿ ಈ ಕುರಿತ ಅಂತಿಮ ನಿರ್ಧಾರ ಕೈಗೊಳ್ಳುವರು. ಮುಖ್ಯಮಂತ್ರಿ ಉದ್ಧವ್‌ ಠಾಕ್ರೆ ಅವರು ಸರಿಯಾದ ಸಮಯದಲ್ಲಿ ಸೂಕ್ತ ತೀರ್ಮಾನ ಕೈಗೊಳ್ಳುವರು’ ಎಂದು ಶಿಂಧೆ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.