ADVERTISEMENT

'ಮಹಾರಾಷ್ಟ್ರ ಸರ್ಕಾರ ಸ್ಥಿರ, ಸರ್ಕಾರ ಪತನಕ್ಕೆ ಬಿಜೆಪಿಯ ಪ್ರಯತ್ನ ಫಲಿಸಲ್ಲ'

ಎನ್‌ಸಿಪಿ ಅಧ್ಯಕ್ಷ ಶರದ್‌ ಪವಾರ್ ಹೇಳಿಕೆ

ಪಿಟಿಐ
Published 30 ಡಿಸೆಂಬರ್ 2020, 15:59 IST
Last Updated 30 ಡಿಸೆಂಬರ್ 2020, 15:59 IST
ಎನ್‌ಸಿಪಿ ಅಧ್ಯಕ್ಷ ಶರದ್‌ ಪವಾರ್
ಎನ್‌ಸಿಪಿ ಅಧ್ಯಕ್ಷ ಶರದ್‌ ಪವಾರ್   

ನವದೆಹಲಿ: ‘ಉದ್ಧವ್‌ ಠಾಕ್ರೆ ನೇತೃತ್ವದ ಮಹಾವಿಕಾಸ ಅಘಾಡಿ(ಎಂವಿಎ) ಸರ್ಕಾರವು ಸ್ಥಿರವಾಗಿದ್ದು, ಆಡಳಿತವನ್ನು ಮುಂದುವರಿಸಲಿದೆ. ಸರ್ಕಾರವನ್ನು ಪತನಗೊಳಿಸುವ ಬಿಜೆಪಿಯ ಯಾವುದೇ ಪ್ರಯತ್ನವೂ ಫಲಿಸುವುದಿಲ್ಲ’ ಎಂದು ಎನ್‌ಸಿಪಿ ಅಧ್ಯಕ್ಷ ಶರದ್‌ ಪವಾರ್‌ ಬುಧವಾರ ಹೇಳಿದರು.

ಇದೇ ವೇಳೆ ಆಡಳಿತದಲ್ಲಿರುವ ನಾಯಕರು ಹಾಗೂ ಅವರ ಕುಟುಂಬ ಸದಸ್ಯರ ಮೇಲೆ ಜಾರಿ ನಿರ್ದೇಶನಾಲಯದ (ಇ.ಡಿ) ಕ್ರಮವನ್ನು ಟೀಕಿಸಿದ ಪವಾರ್‌, ‘ಇದು ಅಧಿಕಾರದ ದುರ್ಬಳಕೆ’ ಎಂದು ಆರೋಪಿಸಿದರು.

‘ಠಾಕ್ರೆ ನೇತೃತ್ವದ ಎಂವಿಎ ಸರ್ಕಾರವು ಅಧಿಕಾರವಹಿಸಿ ವರ್ಷ ಕಳೆದಿದೆ. ಎರಡೇ ತಿಂಗಳಲ್ಲಿ ಸರ್ಕಾರವನ್ನು ಪತನಗೊಳಿಸಲು ಬಿಜೆಪಿ ಅವರು ಪ್ರಯತ್ನಿಸಿದ್ದರು. ಆರು ತಿಂಗಳ ನಂತರ ಮತ್ತೆ ಪ್ರಯತ್ನಿಸಿದರು, ಬಳಿಕ ಎಂಟನೇ ತಿಂಗಳಲ್ಲೂ ಪ್ರಯತ್ನಪಟ್ಟರು. ಆದರೆ, ಈ ಸರ್ಕಾರಕ್ಕೆ ಏನೂ ಆಗುವುದಿಲ್ಲ’ ಎಂದು ಸುದ್ದಿ ಸಂಸ್ಥೆಗೆ ನೀಡಿದ ಸಂದರ್ಶನದಲ್ಲಿ ಅವರು ಹೇಳಿದರು.

ADVERTISEMENT

‘ಇ.ಡಿ ಅವರು ನನಗೇ ನೋಟಿಸ್‌ ನೀಡಲು ಪ್ರಯತ್ನಿಸಿದ್ದರು. ನಂತರ ಅದನ್ನು ಹಿಂಪಡೆದರು. ನಾನು ಆ ಬ್ಯಾಂಕ್‌ನ ಸದಸ್ಯನೇ ಆಗಿರಲಿಲ್ಲ. ಆ ಬ್ಯಾಂಕ್‌ನಲ್ಲಿ ಖಾತೆಯೂ ಇರಲಿಲ್ಲ’ ಎಂದು ಪವಾರ್‌ ಹೇಳಿದರು. ಮಹಾರಾಷ್ಟ್ರ ಸಹಕಾರಿ ಕೊಆಪರೇಟಿವ್‌ ಬ್ಯಾಂಕ್‌ನಲ್ಲಿನ ಬಹುಕೋಟಿ ಹಗರಣಕ್ಕೆ ಸಂಬಂಧಿಸಿದಂತೆ ಕಳೆದ ವರ್ಷ ಇ.ಡಿ ಕ್ರಿಮಿನಲ್‌ ಪ್ರಕರಣ ದಾಖಲಿಸಿಕೊಂಡಿತ್ತು. ಈ ಸಂದರ್ಭದಲ್ಲಿ ಶರದ್‌ ಪವಾರ್‌, ಅಜಿತ್‌ ಪವಾರ್‌ ಹಾಗೂ ಇತರರ ಹೆಸರು ಈ ಪ್ರಕರಣದಲ್ಲಿ ಕೇಳಿಬಂದಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.