ADVERTISEMENT

ಬಿಜೆಪಿಯನ್ನು ಅಧಿಕಾರದಿಂದ ಕಿತ್ತೊಗಯಲು ವಿಪಕ್ಷ ನಾಯಕರ ಕರೆ

ತೆಲಂಗಾಣದಲ್ಲಿ ಬಹಿರಂಗ ಸಭೆ: ಬಿಜೆಪಿ–ಕಾಂಗ್ರೆಸೇತರ ಮುಖ್ಯಮಂತ್ರಿಗಳ ಸಮಾಗಮ

ಪಿಟಿಐ
Published 18 ಜನವರಿ 2023, 16:57 IST
Last Updated 18 ಜನವರಿ 2023, 16:57 IST
ಕಾರ್ಯಕ್ರಮದಲ್ಲಿ (ಎಡದಿಂದ) ಸಮಾಜವಾದಿ ಪಕ್ಷದ ನಾಯಕ ಅಖಿಲೇಶ್‌ ಯಾದವ್‌, ಪಂಜಾಬ್‌ ಮುಖ್ಯಮಂತ್ರಿ ಭಗವಂತ್‌ ಮಾನ್‌, ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್‌, ತೆಲಂಗಾಣ ಮುಖ್ಯಮಂತ್ರಿ ಕೆ.ಚಂದ್ರಶೇಖರ್ ರಾವ್‌ ಮತ್ತು ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್‌ ಅವರು ಒಗ್ಗಟ್ಟು ಪ್ರದರ್ಶಿಸಿದರು–ಪಿಟಿಐ ಚಿತ್ರ 
ಕಾರ್ಯಕ್ರಮದಲ್ಲಿ (ಎಡದಿಂದ) ಸಮಾಜವಾದಿ ಪಕ್ಷದ ನಾಯಕ ಅಖಿಲೇಶ್‌ ಯಾದವ್‌, ಪಂಜಾಬ್‌ ಮುಖ್ಯಮಂತ್ರಿ ಭಗವಂತ್‌ ಮಾನ್‌, ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್‌, ತೆಲಂಗಾಣ ಮುಖ್ಯಮಂತ್ರಿ ಕೆ.ಚಂದ್ರಶೇಖರ್ ರಾವ್‌ ಮತ್ತು ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್‌ ಅವರು ಒಗ್ಗಟ್ಟು ಪ್ರದರ್ಶಿಸಿದರು–ಪಿಟಿಐ ಚಿತ್ರ    

ಖಮ್ಮಂ, ತೆಲಂಗಾಣ: ಭಾರತ ರಾಷ್ಟ್ರ ಸಮಿತಿ (ಬಿಆರ್‌ಎಸ್‌) ವತಿಯಿಂದ ಇದೇ ಮೊದಲ ಬಾರಿಗೆ ಇಲ್ಲಿ ಹಮ್ಮಿಕೊಳ್ಳಲಾಗಿದ್ದ ಬಹಿರಂಗ ಸಭೆಯು ಬಿಜೆಪಿ ಮತ್ತು ಕಾಂಗ್ರೆಸೇತರ ಪಕ್ಷಗಳ ಮುಖ್ಯಮಂತ್ರಿಗಳು ಹಾಗೂ ನಾಯಕರ ಸಮಾಗಮಕ್ಕೆ ಸಾಕ್ಷಿಯಾಯಿತು. ವೇದಿಕೆ ಅಲಂಕರಿಸಿದ್ದ ಗಣ್ಯರೆಲ್ಲರೂ ಆಡಳಿತಾರೂಢ ಬಿಜೆಪಿ ವಿರುದ್ಧ ಹರಿಹಾಯ್ದರು. ಮುಂದಿನ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ ವಿರುದ್ಧ ಮತ ಚಲಾಯಿಸಿ ಮೋದಿ ಸರ್ಕಾರ ಕಿತ್ತೊಗೆಯಿರಿ ಎಂದು ದೇಶದ ನಾಗರಿಕರಿಗೆ ಕರೆ ನೀಡಿದರು.

ಸಭೆ ಉದ್ದೇಶಿಸಿ ಬುಧವಾರ ಮಾತನಾಡಿದ ತೆಲಂಗಾಣ ಮುಖ್ಯಮಂ‌ತ್ರಿ ಹಾಗೂ ಬಿಆರ್‌ಎಸ್‌ ಪಕ್ಷದ ಮುಖ್ಯಸ್ಥ ಕೆ.ಚಂದ್ರಶೇಖರ್‌ ರಾವ್‌ (ಕೆಸಿಆರ್‌), ‘ಮುಂದಿನ ಬಾರಿ ಕೇಂದ್ರದಲ್ಲಿ ಬಿಆರ್‌ಎಸ್‌ ಬೆಂಬಲಿತ ಸರ್ಕಾರ ಅಧಿಕಾರಕ್ಕೆ ಬಂದರೆ ದೇಶದ ಎಲ್ಲಾ ರೈತರಿಗೂ ಉಚಿತವಾಗಿ ವಿದ್ಯುತ್‌ ಕಲ್ಪಿಸಲಾಗುತ್ತದೆ. ಅಗ್ನಿಪ‍ಥ ಯೋಜನೆಯನ್ನೂ ರದ್ದು ಮಾಡಲಾಗುತ್ತದೆ’ ಎಂದು ಘೋಷಿಸಿದ್ದಾರೆ.

‘ಕೇಂದ್ರ ಸರ್ಕಾರದ ಮೇಕ್‌ ಇನ್‌ ಇಂಡಿಯಾ ಅಭಿಯಾನ ಕ್ರಮೇಣ ‘ಜೋಕ್‌ ಇನ್‌ ಇಂಡಿಯಾ’ ಆಗಿ ಬದಲಾಗಿದೆ. ದೇಶದ ಪ್ರತಿ ಬೀದಿಯಲ್ಲೂ ಚೀನಾ ಬಜಾರ್‌ಗಳಿವೆ’ ಎಂದು ವ್ಯಂಗ್ಯವಾಡಿದ್ದಾರೆ.

ADVERTISEMENT

ಬಿಆರ್‌ಎಸ್‌ ಬೆಂಬಲಿತ ಸರ್ಕಾರವು ಅಧಿಕಾರದ ಗದ್ದುಗೆ ಏರಿದರೆ ದೇಶದಾದ್ಯಂತ ‘ರೈತಬಂಧು’ ಕಾರ್ಯಕ್ರಮಗಳನ್ನು ಜಾರಿಗೊಳಿಸುವುದಾಗಿ ಹೇಳಿದ ಅವರು ‘ಅಂತರರಾಜ್ಯ ಜಲ ವಿವಾದಕ್ಕೆ ಬಿಜೆಪಿ ಮತ್ತು ಕಾಂಗ್ರೆಸ್‌ ಪಕ್ಷಗಳೇ ನೇರ ಹೊಣೆ’ ಎಂದು ಹರಿಹಾಯ್ದಿದ್ದಾರೆ.

‘ಬಿಜೆಪಿಯು ದೇಶವನ್ನು ಬದಲಿಸುವ ಬದಲು ನಾಶಪಡಿಸಲು ಹೊರಟಿದೆ. ಇದು ಜನರಿಗೂ ಅರ್ಥವಾಗಿದೆ. ಆ ಪಕ್ಷವನ್ನು ಅಧಿಕಾರದಿಂದ ದೂರ ಇಡುವ ಕಾಲ ಸನ್ನಿಹಿತವಾಗಿದೆ. ಈ ನಿಟ್ಟಿನಲ್ಲಿ ಮುಂಬರುವ ಲೋಕಸಭೆ ಚುನಾವಣೆ ಪ್ರತಿಯೊಬ್ಬರ ಪಾಲಿಗೂ ಮಹತ್ವದ್ದು’ ಎಂದು ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್‌ ಹೇಳಿದ್ದಾರೆ.

‘ಪ್ರಜಾಪ್ರಭುತ್ವ ವ್ಯವಸ್ಥೆ ನಾಶಪಡಿಸಲು ನಿರಂತರ ಪ್ರಯತ್ನ’

‘ಬಿಜೆಪಿ ಸರ್ಕಾರವು ಪ್ರಜಾಪ್ರಭುತ್ವ ವ್ಯವಸ್ಥೆ ನಾಶಪಡಿಸಲು ನಿರಂತರವಾಗಿ ಪ್ರಯತ್ನಿಸುತ್ತಿದೆ. ಬಿಜೆಪಿಯೇತರ ಪಕ್ಷಗಳು ಅಧಿಕಾರದಲ್ಲಿರುವ ರಾಜ್ಯಗಳ ಮೇಲೆ ದಾಳಿ ನಡೆಸಲು ರಾಜ್ಯಪಾಲರ ಕಚೇರಿಯನ್ನು ಬಳಸಿಕೊಳ್ಳುತ್ತಿದೆ’ ಎಂದು ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್‌ ಕಿಡಿಕಾರಿದ್ದಾರೆ.

‘ಕೇಂದ್ರದಲ್ಲಿ ಈಗ ಅಧಿಕಾರದಲ್ಲಿರುವವರು ಈ ಹಿಂದೆ ನಡೆದಿದ್ದ ಸಾಮೂಹಿಕ ಹೋರಾಟದ ಭಾಗವಾಗಿರಲಿಲ್ಲ. ದೇಶವು ಯಾವ ಮೌಲ್ಯಗಳ ಆಧಾರದಲ್ಲಿ ಸಾರ್ವಭೌಮ, ಪ್ರಜಾಪ್ರಭುತ್ವ ಮತ್ತು ಗಣರಾಜ್ಯ ರಾಷ್ಟ್ರವಾಗಿ ನಿರ್ಮಾಣಗೊಂಡಿದೆ ಎಂಬುದರ ಅರಿವೂ ಅವರಿಗಿಲ್ಲ. ಹೀಗಾಗಿ ಅವರು ದೇಶದ ಮೂಲಭೂತ ರಚನೆಯನ್ನೇ ಬದಲಾಯಿಸಲು ಹೊರಟಿದ್ದಾರೆ’ ಎಂದು ಟೀಕಿಸಿದ್ದಾರೆ.

***

ಬಿಜೆಪಿ ತನ್ನ ಕೊನೆಯ ದಿನಗಳನ್ನು ಎಣಿಸುತ್ತಿದೆ. 399 ದಿನಗಳ ನಂತರ ಆ ಪಕ್ಷ ಅಧಿಕಾರ ಕಳೆದುಕೊಳ್ಳಲಿದ್ದು, ನೂತನ ಸರ್ಕಾರ ಅಸ್ತಿತ್ವಕ್ಕೆ ಬರಲಿದೆ

–ಅಖಿಲೇಶ್‌ ಯಾದವ್‌, ಸಮಾಜವಾದಿ ಪಕ್ಷದ ನಾಯಕ

ಸಮಾನ ಮನಸ್ಕ ಪಕ್ಷಗಳೆಲ್ಲಾ ಒಗ್ಗಟ್ಟಾಗಿ ಬಿಜೆಪಿ–ಆರ್‌ಎಸ್‌ಎಸ್‌ ವಿರುದ್ಧ ಹೋರಾಡಬೇಕು. ಮುಂದಿನ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿಯನ್ನು ಸೋಲಿಸಲೇಬೇಕು

–ಡಿ.ರಾಜಾ, ಸಿಪಿಐ ಪ್ರಧಾನ ಕಾರ್ಯದರ್ಶಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.