ADVERTISEMENT

ಲೋಕಸಭೆ | ಲಿಖಿತ ಉತ್ತರದ ಉತ್ತರದಾಯಿತ್ವ ಯಾರದು?

ಪಿಟಿಐ
Published 9 ಡಿಸೆಂಬರ್ 2023, 19:30 IST
Last Updated 9 ಡಿಸೆಂಬರ್ 2023, 19:30 IST
<div class="paragraphs"><p>ಲೋಕಸಭೆ ಕಲಾಪ</p></div>

ಲೋಕಸಭೆ ಕಲಾಪ

   

ನವದೆಹಲಿ: ಸಂಸತ್ತಿನಲ್ಲಿ ನೀಡಲಾಗಿದ್ದ ಲಿಖಿತ ಉತ್ತರದಲ್ಲಿ ವಿದೇಶಾಂಗ ಖಾತೆ ರಾಜ್ಯ ಸಚಿವೆ ಮೀನಾಕ್ಷಿ ಲೇಖಿ ಅವರ ಹೆಸರು ಉಲ್ಲೇಖವಾಗಿದ್ದು ಈಗ ವಿವಾದದ ಸ್ವರೂಪ ಪಡೆದಂತೆಯೇ, ‘ತಾಂತ್ರಿಕ ದೋಷ’ವನ್ನು ಸರಿಪಡಿಸಲಾಗುವುದು ಎಂದು ವಿದೇಶಾಂಗ ಸಚಿವಾಲಯ ಶನಿವಾರ ಸ್ಪಷ್ಟನೆ ನೀಡಿದೆ.

ತಾಂತ್ರಿಕ ದೋಷ ಸರಿಪಡಿಸುವ ಕುರಿತಂತೆ ವಿದೇಶಾಂಗ ಸಚಿವಾಲಯದ ವಕ್ತಾರ ಅರಿಂದಮ್‌ ಬಾಗ್ಚಿ ಸ್ಪಷ್ಟನೆ ನೀಡಿದ್ದಾರೆ. ಇದಕ್ಕೂ ಮುನ್ನ ವಿದೇಶಾಂಗ ಖಾತೆ ರಾಜ್ಯ ಸಚಿವೆ ಮೀನಾಕ್ಷಿ ಲೇಖಿ ಅವರು, ‘ಈ ಲಿಖಿತ ಉತ್ತರಕ್ಕೆ ನಾನು ಅನುಮೋದನೆ ನೀಡಿರಲಿಲ್ಲ’ ಎಂದು ಹೇಳಿದ್ದರು.

ADVERTISEMENT

ಲಿಖಿತ ಉತ್ತರವನ್ನು ಲೋಕಸಭೆ, ವಿದೇಶಾಂಗ ಸಚಿವಾಲಯದ ವೆಬ್‌ಸೈಟ್‌ನಲ್ಲಿ ಪ್ರಕಟಿಸಿದ್ದು, ನಿಮ್ಮ ಹೆಸರೇ ಇದೆ ಎಂದು ಗಮನಸೆಳೆದಾಗ ಲೇಖಿ ಅವರು, ‘ತನಿಖೆಯಿಂದ ಅರೋಪಿ ಯಾರು ಎಂದು ತಿಳಿಯಲಿದೆ’ ಎಂದರು.

‘ಹಮಾಸ್‌ ಅನ್ನು ಉಗ್ರರ ಸಂಘಟನೆ ಎಂದು ಘೋಷಿಸಬೇಕು’ ಎಂಬ ಕಾಂಗ್ರೆಸ್‌ ಸಂಸದ ಕುಂಬಕುಡಿ ಸುಧಾಕರನ್‌ ಪ್ರಶ್ನೆಗೆ ನೀಡಿದ್ದ ಉತ್ತರ ಅದಾಗಿತ್ತು. ಹಮಾಸ್‌ ಅನ್ನು ಉಗ್ರ ಸಂಘಟನೆ ಎಂದು ಘೋಷಿಸುವುದು ಕಾನೂನುಬಾಹಿರ ಚಟುವಟಿಕೆ (ನಿಯಂತ್ರಣ) ಕಾಯ್ದೆ ವ್ಯಾಪ್ತಿಗೆ ಬರಲಿದ್ದು, ಸಂಬಂಧಿಸಿದ ಇಲಾಖೆ ಇದನ್ನು ಪರಿಗಣಿಸಲಿದೆ ಎಂದು ಲಿಖಿತ ಉತ್ತರ ನೀಡಲಾಗಿತ್ತು.

ಮೀನಾಕ್ಷಿ ಲೇಖಿ, ವಿ.ಮುರಳೀಧರನ್‌ ಇಬ್ಬರೂ ವಿದೇಶಾಂಗ ಖಾತೆಯ ರಾಜ್ಯ ಸಚಿವರು. ಲೋಕಸಭೆಯಲ್ಲಿ ಪ್ರಶ್ನೆ ಸಂಖ್ಯೆ 980ಕ್ಕೆ ಡಿಸೆಂಬರ್ 8ರಂದು ನೀಡಿದ್ದ ಲಿಖಿತ ಉತ್ತರಕ್ಕೆ ಸಚಿವ ವಿ.ಮುರಳೀಧರನ್‌ ಹೆಸರು ಸೇರಿಸುವ ಕುರಿತು ತಾಂತ್ರಿಕ ತಿದ್ದುಪಡಿ ಅಗತ್ಯವಿದೆ ಎಂದು ಸಚಿವಾಲಯ ವಕ್ತಾರ ಬಾಗ್ಚಿ ಅವರು ತಿಳಿಸಿದ್ದಾರೆ. 

ಪ್ರಶ್ನೆ ಸಂಖ್ಯೆ 980 ಅನ್ನು ಲೋಕಸಭೆ ವೆಬ್‌ಸೈಟ್‌ನಲ್ಲೂ ಅಪ್‌ಲೋಡ್ ಮಾಡಲಾಗಿತ್ತು. ಅದರಲ್ಲಿ ಲೇಖಿ ಅವರೇ ಉತ್ತರಿಸಿದ್ದಾರೆ ಎಂದು ನಮೂದಿಸಲಾಗಿತ್ತು. ‘ಈ ಬಗ್ಗೆ ತಪ್ಪು ಮಾಹಿತಿ ನೀಡಲಾಗಿದೆ. ಈ ಪ್ರಶ್ನೆಗೆ ಸಂಬಂಧಿಸಿದ ಯಾವುದೇ ಕಡತಕ್ಕೆ ನಾನು ಸಹಿ ಹಾಕಿಲ್ಲ’ ಎಂದು ಲೇಖಿ ತಮ್ಮ ‘ಎಕ್ಸ್‌’ ಖಾತೆಯಲ್ಲಿ ಪ್ರತಿಕ್ರಿಯಿಸಿದ್ದರು.

ಲೇಖಿ ಹೇಳಿಕೆಗೆ ‘ಎಕ್ಸ್’ ಖಾತೆಯಲ್ಲಿ ಪ್ರತಿಕ್ರಿಯಿಸಿದ್ದ ಶಿವಸೇನೆಯ (ಉದ್ಧವ್ ಠಾಕ್ರೆ ಬಣ) ರಾಜ್ಯಸಭೆ ಸದಸ್ಯೆ ಪ್ರಿಯಾಂಕಾ ಚತುರ್ವೇದಿ, ‘ಇದು, ನಕಲು ಮಾಡಲಾಗಿರುವ ಉತ್ತರ ಎಂದು ಲೇಖಿ ಪ್ರತಿಪಾದಿಸುತ್ತಿದ್ದಾರೆಯೆ? ಹಾಗಿದ್ದರೆ, ಇದು ಗಂಭೀರವಾದ ಹಕ್ಕುಚ್ಯುತಿ. ನಿಯಮಗಳ ಉಲ್ಲಂಘನೆ. ವಿದೇಶಾಂಗ ಸಚಿವಾಲಯ ಸ್ಪಷ್ಟನೆ ನೀಡಲಿ’ ಎಂದಿದ್ದರು.

ಸಂಸದೆಯೊಬ್ಬರ ಉಚ್ಚಾಟನೆ ಬೆನ್ನಲ್ಲೇ, ಸಂಸತ್ತಿನಲ್ಲಿ ಉತ್ತರ ನೀಡಿದ್ದೇನೆ ಎಂಬುದನ್ನೇ ಸಚಿವೆಯೊಬ್ಬರು ನಿರಾಕರಿಸಿದ್ದಾರೆ. ಇದು, ತನಿಖೆಯಾಗಬೇಕಾದ ವಿಷಯವಲ್ಲವೆ? ಇದಕ್ಕೆ ಉತ್ತರದಾಯಿತ್ವ ಯಾರದು ಎಂದು ಕೇಳಬಾರದೇ? ಎಂದು ಪ್ರಿಯಾಂಕಾ ಪ್ರಶ್ನಿಸಿದ್ದರು. 

ಇನ್ನೊಂದೆಡೆ, ಲೇಖಿ ಅವರ ಪೋಸ್ಟ್‌ಗೆ, ‘ಎಕ್ಸ್‌’ ಖಾತೆಯಲ್ಲಿಯೇ ಪ್ರತಿಕ್ರಿಯಿಸಿರುವ ಕಾಂಗ್ರೆಸ್‌ನ ನಾಯಕ ಅಮಿತಾಬ್‌ ದುಬೆ ಅವರು, ‘ನಿಮ್ಮ ಪರವಾಗಿ ಯಾರು ಲಾಗಿನ್‌ ಮಾಡಿದ್ದಾರೆ’ ಎಂದು ಪ್ರಶ್ನಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.