ನವದೆಹಲಿ: ಚುನಾವಣೆ ಪ್ರಕ್ರಿಯೆಗೆ ಸಂಬಂಧಿಸಿದ ಸಿ.ಸಿ.ಟಿ.ವಿ ಕ್ಯಾಮೆರಾ ದೃಶ್ಯಾವಳಿ, ವೆಬ್‌ಕಾಸ್ಟಿಂಗ್ ಮತ್ತು ಇತರ ವಿಡಿಯೊಗಳನ್ನು ಚುನಾವಣೆ ನಡೆದ 45 ದಿನಗಳ ಬಳಿಕ ಅಳಿಸಿ ಹಾಕುವಂತೆ ಚುನಾವಣಾ ಆಯೋಗವು (ಇ.ಸಿ) ತನ್ನ ಎಲ್ಲ ರಾಜ್ಯ ಚುನಾವಣಾ ಅಧಿಕಾರಿಗಳಿಗೆ ಸೂಚಿಸಿದೆ.
ಎಲೆಕ್ಟ್ರಾನಿಕ್ ದತ್ತಾಂಶಗಳನ್ನು ಆಯೋಗದ ಬಗ್ಗೆ ‘ದುರುದ್ದೇಶಪೂರಿತ ನಿರೂಪಣೆ’ಗಳನ್ನು ಹರಡಲು ಬಳಸುವ ಸಾಧ್ಯತೆಯಿರುವುದರಿಂದ ಈ ನಿರ್ಧಾರ ತೆಗೆದುಕೊಂಡಿದೆ.
ಚುನಾವಣಾ ಪ್ರಕ್ರಿಯೆಯ ವಿವಿಧ ಹಂತಗಳ ವೆಬ್‌ಕಾಸ್ಟಿಂಗ್, ಫೋಟೊಗ್ರಫಿ ಮತ್ತು ವಿಡಿಯೋ ಚಿತ್ರೀಕರಣ ಮಾಡಬೇಕು ಹಾಗೂ ಸಿ.ಸಿ.ಟಿ.ವಿ ಕ್ಯಾಮೆರಾ ಮೂಲಕ ಸೆರೆ ಹಿಡಿಯಬೇಕು ಎಂದು ಚುನಾವಣಾ ಆಯೋಗವು ಮೇ 30ರಂದು ವಿವಿಧ ರಾಜ್ಯಗಳ ಮುಖ್ಯ ಚುನಾವಣಾ ಅಧಿಕಾರಿಗಳಿಗೆ ಬರೆದ ಪತ್ರದಲ್ಲಿ ಸೂಚಿಸಿತ್ತು.
ಬಹು ಹಂತಗಳ ಸಾಧನ ಬಳಸಿ ಚುನಾವಣಾ ಪ್ರಕ್ರಿಯೆಯ ರೆಕಾರ್ಡಿಂಗ್ ಮಾಡುವುದನ್ನು ಚುನಾವಣಾ ನಿಯಮ ಕಡ್ಡಾಯಗೊಳಿಸಿಲ್ಲ. ಆದರೂ, ಆಯೋಗವು ಚುನಾವಣಾ ಪ್ರಕ್ರಿಯೆಯ ವಿವಿಧ ಹಂತಗಳಲ್ಲಿ ಅವುಗಳನ್ನು ಆಂತರಿಕ ನಿರ್ವಹಣಾ ಸಾಧನವಾಗಿ ಬಳಸುತ್ತದೆ.
‘ಚುನಾವಣಾ ಆಯೋಗದ ಬಗ್ಗೆ ಸಾಮಾಜಿಕ ಮಾಧ್ಯಮಗಳಲ್ಲಿ ತಪ್ಪು ಮಾಹಿತಿ ಹರಡಲು ಕೆಲವರು ಈ ದೃಶ್ಯಾವಳಿಗಳನ್ನು ದುರುಪಯೋಗಪಡಿಸಿಕೊಂಡಿದ್ದಾರೆ’ ಎಂದು ಹೇಳಿದೆ.
ಸಿ.ಸಿ.ಟಿ.ವಿ ಕ್ಯಾಮೆರಾ ದೃಶ್ಯಾವಳಿ, ವೆಬ್‌ಕಾಸ್ಟಿಂಗ್ ದತ್ತಾಂಶ ಮತ್ತು ಚುನಾವಣಾ ಪ್ರಕ್ರಿಯೆಯ ಫೋಟೊಗಳನ್ನು 45 ದಿನಗಳವರೆಗೆ ಮಾತ್ರ ಸಂರಕ್ಷಿಸಿಡಬೇಕು ಎಂದು ಆಯೋಗವು ತನ್ನ ಪತ್ರದಲ್ಲಿ ತಿಳಿಸಿದೆ.
‘ಒಂದು ನಿರ್ದಿಷ್ಟ ಕ್ಷೇತ್ರದ ಚುನಾವಣೆಯ ಫಲಿತಾಂಶವನ್ನು ಪ್ರಶ್ನಿಸಿ ನ್ಯಾಯಾಲಯದಲ್ಲಿ ಯಾವುದೇ ಅರ್ಜಿಗಳು ಸಲ್ಲಿಕೆಯಾಗದಿದ್ದರೆ, ಈ ಎಲ್ಲ ಎಲೆಕ್ಟ್ರಾನಿಕ್ ದತ್ತಾಂಶಗಳನ್ನು ಅಳಿಸಿ ಹಾಕಬೇಕು’ ಎಂದು ಸೂಚಿಸಿದೆ. ಚುನಾವಣಾ ಫಲಿತಾಂಶದ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿ ಯಾವುದೇ ವ್ಯಕ್ತಿ ಸಂಬಂಧಪಟ್ಟ ಹೈಕೋರ್ಟ್‌ನಲ್ಲಿ 45 ದಿನಗಳ ಒಳಗಾಗಿ ಅರ್ಜಿ ಸಲ್ಲಿಸಬಹುದು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.