ADVERTISEMENT

ಕಾಂಗ್ರೆಸ್ ಅಧ್ಯಕ್ಷರ ಚುನಾವಣೆ– ಸಹಮತದ ಅಭ್ಯರ್ಥಿಗೆ ಖರ್ಗೆ ಒಲವು

​ಪ್ರಜಾವಾಣಿ ವಾರ್ತೆ
Published 2 ಅಕ್ಟೋಬರ್ 2022, 21:29 IST
Last Updated 2 ಅಕ್ಟೋಬರ್ 2022, 21:29 IST
ಖರ್ಗೆ
ಖರ್ಗೆ    

ನವದೆಹಲಿ: ಕಾಂಗ್ರೆಸ್ ಅಧ್ಯಕ್ಷ ಹುದ್ದೆಗೆ ಸ್ಪರ್ಧಿಸಲು ನಾಮಪತ್ರ ಸಲ್ಲಿಸಿರುವ ಮಲ್ಲಿಕಾರ್ಜುನ ಖರ್ಗೆ ಅವರು ಸಹಮತದ ಅಭ್ಯರ್ಥಿ ಆಯ್ಕೆಯ ಬಗ್ಗೆ ಒಲವು ವ್ಯಕ್ತಪಡಿಸಿದ್ದಾರೆ. ಇನ್ನೊಬ್ಬ ಅಭ್ಯರ್ಥಿ ಶಶಿ ತರೂರ್ ಇತ್ತೀಚೆಗೆ ಕರೆ ಮಾಡಿದ ಸಂದರ್ಭದಲ್ಲಿ ಖರ್ಗೆ ಅವರು ಈ ವಿಷಯ ಪ್ರಸ್ತಾಪಿಸಿದ್ದಾರೆ. ಆದರೆ ಪ್ರಜಾಸತ್ತಾತ್ಮಕ ಸ್ಪರ್ಧೆ ನಡೆಯಬೇಕು ಎಂದು ತರೂರ್ ಹೇಳಿದ್ದಾರೆ. ತರೂರ್ ಅವರನ್ನು ತಮ್ಮ ಎಂದು ಖರ್ಗೆ ಬಣ್ಣಿಸಿದ್ದಾರೆ.

ನೆಹರೂ–ಗಾಂಧಿ ಕುಟುಂಬ ಮತ್ತು ಜಿ–23 ಗುಂಪಿನ ಹಲವು ಮುಖಂಡರ ಬೆಂಬಲ ಖರ್ಗೆ ಅವರಿಗೆ ಇದೆ. ನೆಹರೂ–ಗಾಂಧಿ ಕುಟುಂಬದ ಸದಸ್ಯರು ಮತ್ತು ಪಕ್ಷದ ಮುಖಂಡರನ್ನು ಭೇಟಿಯಾಗಿ ಸಲಹೆಗಳನ್ನು ಪಡೆದುಕೊಳ್ಳುವುದಾಗಿಯೂ ಖರ್ಗೆ ಹೇಳಿದ್ದಾರೆ. ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸುತ್ತಿರುವವರ ನಡುವೆ ಬಹಿರಂಗ ಚರ್ಚೆ ನಡೆಯಬೇಕು ಎಂದು ತರೂರ್ ಹೇಳಿರುವುದರ ಕುರಿತು ಖರ್ಗೆ ಅವರು ಆಸಕ್ತಿ ವ್ಯಕ್ತಪಡಿಸಿಲ್ಲ. ಆದರೆ, ಕೆಲವರಿಗೆ ಚರ್ಚೆಯ ಕುರಿತ ಮೋಹ ಇದೆ ಎಂದು ಹೇಳಿದ್ದಾರೆ.

ಗಾಂಧಿ ಜಯಂತಿಯಂದು ಖರ್ಗೆ ಅವರು ತಮ್ಮ ಪ್ರಚಾರ ಆರಂಭಿಸಿದ್ದಾರೆ. ರಾಜಘಾಟ್‌ನಲ್ಲಿರುವ ಗಾಂಧಿ ಸ್ಮಾರಕಕ್ಕೆ ಭೇಟಿ ನೀಡಿದ್ದಾರೆ. ಯಾರನ್ನಾದರೂ ವಿರೋಧಿಸುವುದು ತಮ್ಮ ಉದ್ದೇಶವಲ್ಲ, ಪಕ್ಷವನ್ನು ಬಲಪಡಿಸುವುದಕ್ಕಾಗಿ ಚುನಾವಣೆಗೆ ಸ್ಪರ್ಧಿಸಿದ್ದೇನೆ. ಹಲವು ರಾಜ್ಯಗಳ ಹಿರಿಯ ಮತ್ತು ಕಿರಿಯ ಮುಖಂಡರು ಸ್ಪರ್ಧಿಸುವಂತೆ ತಮ್ಮನ್ನು ಉತ್ತೇಜಿಸಿದ್ದಾರೆ ಎಂದು ಅವರು ಹೇಳಿದ್ದಾರೆ. ಚುನಾವಣೆಯು ಇದೇ 17ರಂದು ನಡೆಯಲಿದೆ.

ADVERTISEMENT

ಮತದಾನದ ಹಕ್ಕು ಹೊಂದಿರುವ ಪ್ರತಿನಿಧಿಗಳ ಮೊದಲ ಸಭೆಯನ್ನು ಅವರು ಕರ್ನಾಟಕದಲ್ಲಿ ನಡೆಸಲಿದ್ದಾರೆ. ಹೆಚ್ಚಿನ ರಾಜ್ಯಗಳ ರಾಜಧಾನಿಗಳಿಗೆ ಭೇಟಿ ಕೊಟ್ಟು ಅವರು ಪ್ರತಿನಿಧಿಗಳ ಮತ ಯಾಚಿಸಲಿದ್ದಾರೆ. ‘ಭಾರತ ಜೋಡೊ’ ಯಾತ್ರೆಯ ಭಾಗವಾಗಿ ಬಳ್ಳಾರಿಯಲ್ಲಿ ಇದೇ 15ರಂದು ನಡೆಯಲಿರುವ ಭಾರಿ ಕಾರ್ಯಕ್ರಮದಲ್ಲಿಯೂ ಅವರು ಭಾಗವಹಿಸಲಿದ್ದಾರೆ.

ದೀಪೇಂದರ್‌ ಹೂಡಾ, ಸಯ್ಯದ್ ನಾಸಿರ್ ಹುಸೇನ್‌ ಮತ್ತು ಗೌರವ್‌ ವಲ್ಲಭ್‌ ಅವರೊಂದಿಗೆ ಮಾಧ್ಯಮಗೋಷ್ಠಿ ನಡೆಸಿ ಖರ್ಗೆ ಅವರು ಮಾತನಾಡಿದ್ದಾರೆ. ಹೂಡಾ, ಹುಸೇನ್‌ ಮತ್ತು ವಲ್ಲಭ್‌ ಅವರು ಖರ್ಗೆ ಅವರ ಚುನಾವಣಾ ಏಜೆಂಟ್‌ಗಳಾಗಿ ಕೆಲಸ ಮಾಡಲಿದ್ದಾರೆ.ಈ ಮೂವರೂ ಕಾಂಗ್ರೆಸ್ ವಕ್ತಾರ ಹುದ್ದೆ ತ್ಯಜಿಸಿದ್ದಾರೆ. ಖರ್ಗೆ ಅವರಿಗೆ ಮಾಧ್ಯಮಗೋಷ್ಠಿಯಲ್ಲಿ ಹಲವು ಪ್ರಶ್ನೆಗಳು ಎದುರಾದವು. ಆಯ್ಕೆಯಾದರೆ ಖರ್ಗೆ ಅವರು ನೆಹರೂ–ಗಾಂಧಿ ಕುಟುಂಬದ ಕೈಗೊಂಬೆಯಂತೆ ಕೆಲಸ ಮಾಡಲಿದ್ದಾರೆ ಎಂಬ ಭಾವನೆ ಇದೆಯಲ್ಲ ಮತ್ತು ತರೂರ್‌ ಅವರು ನಾಮಪತ್ರ ವಾಪಸ್‌ ಪಡೆಯುವಂತೆ ಮನವಿ ಮಾಡುವಿರಾ ಎಂಬ ಪ್ರಶ್ನೆಗಳೂ ಇದ್ದವು.

‘ಅದು (ನಾಮಪತ್ರ ಹಿಂದೆಗೆತ) ಅವರಿಗೆ ಬಿಟ್ಟ ವಿಚಾರ. ನಾನು ಯಾರನ್ನೂ ಬಲವಂತ ಮಾಡುವುದಿಲ್ಲ. ನಾನು ನಾಮಪತ್ರ ಸಲ್ಲಿಸಿದ ಬಳಿಕ ನನಗೆ ಅವರು ಕರೆ ಮಾಡಿದ್ದರು. ಅಧ್ಯಕ್ಷ ಹುದ್ದೆಗೆ ಸಹಮತದಲ್ಲಿ ಆಯ್ಕೆಯಾದರೆ ಉತ್ತಮ ಎಂದು ನಾನು
ಹೇಳಿದ್ದೆ. ಆದರೆ, ಪ್ರಜಾ‍ಪ್ರಭುತ್ವ ವ್ಯವಸ್ಥೆಯಲ್ಲಿ ಸ್ಪರ್ಧೆ ಇದ್ದರೆ ಉತ್ತಮ ಎಂದು ಅವರು ಹೇಳಿದರು. ಯಾರಾದರೊಬ್ಬರು
ಚುನಾವಣೆಗೆ ಸ್ಪರ್ಧಿಸಲು ಬಯಸಿದರೆ ಬೇಡ ಎನ್ನಲು ಸಾಧ್ಯವೇ’ ಎಂದು ಖರ್ಗೆ ಪ್ರಶ್ನಿಸಿದ್ದಾರೆ.

ತಾವು ಬದಲಾವಣೆಯ ಪರವಾದ ಅಭ್ಯರ್ಥಿ, ಖರ್ಗೆ ಅವರು ಯಥಾಸ್ಥಿತಿ ಬಯಸುವ ಅಭ್ಯರ್ಥಿ ಎಂದು ತರೂರ್‌ ಹೇಳಿದ್ದಕ್ಕೆ ಖರ್ಗೆ ಪ್ರತಿಕ್ರಿಯೆ ನೀಡಿದ್ದಾರೆ. ಅದು ತರೂರ್ ಅವರ ಅಭಿಪ್ರಾಯ. ಚುನಾವಣೆ ಬಳಿಕ ಸುಧಾರಣೆ ಕುರಿತ ನಿರ್ಧಾರಗಳನ್ನು ಜೊತೆಯಾಗಿ ತೆಗೆದುಕೊಳ್ಳಲಾಗುವುದು. ಇದು ಒಬ್ಬ ವ್ಯಕ್ತಿ ನಿರ್ಧಾರ ಕೈಗೊಳ್ಳುವ ವಿಚಾರ ಅಲ್ಲ ಎಂದರು.

ದಲಿತ ಎಂಬ ಕಾರಣಕ್ಕೆ ಖರ್ಗೆ ಅವರನ್ನು ಆಯ್ಕೆ ಮಾಡಲಾಗಿದೆ ಎಂಬ ಪ್ರಶ್ನೆಗೆ, ‘ನಿಮ್ಮ ಮತ್ತು ನನ್ನ ಮಧ್ಯೆ ಯಾವ ವ್ಯತ್ಯಾಸ ಇದೆ’ ಎಂದು ಅವರು ಪ್ರಶ್ನಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.