ADVERTISEMENT

ದೀದಿ ಇದು ಆರಂಭ, ಚುನಾವಣೆ ಸಮಯಕ್ಕೆ ನೀವು ಏಕಾಂಗಿ: ಅಮಿತ್‌ ಶಾ

​ಪ್ರಜಾವಾಣಿ ವಾರ್ತೆ
Published 19 ಡಿಸೆಂಬರ್ 2020, 13:56 IST
Last Updated 19 ಡಿಸೆಂಬರ್ 2020, 13:56 IST
   

ನವದೆಹಲಿ: ಪಶ್ಚಿಮ ಬಂಗಾಳದಲ್ಲಿ ಚುನಾವಣೆ ಸಮೀಪಿಸುವ ವೇಳೆಗೆ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು ಏಕಾಂಗಿಯಾಗಲಿದ್ದಾರೆ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಶನಿವಾರ ತಿಳಿಸಿದರು.

ಇಲ್ಲಿನ ಪಶ್ಚಿಮ ಮಿಡ್ನಾಪುರದಲ್ಲಿ ನಡೆದ ಚುನಾವಣೆ ಸಭೆಯಲ್ಲಿ ಅಮಿತ್‌ ಶಾ ಮಾತನಾಡಿದರು. ಅವರು ಎರಡು ದಿನಗಳ ಕಾಲ ಬಂಗಾಳ ಪ್ರವಾಸದಲ್ಲಿ ಇದ್ದಾರೆ. ಮುಂದಿನ ವರ್ಷ ನಡೆಯಲಿರುವ ವಿಧಾನಸಭೆ ಚುನಾವಣೆ ಸಂಬಂಧ ರಾಜ್ಯ ನಾಯಕರು ಹಾಗೂ ಕಾರ್ಯಕರ್ತರ ಜೊತೆ ಚರ್ಚೆ ನಡೆಸಿದರು.

ಇದೇ ವೇಳೆ ತೃಣಮೂಲ ಕಾಂಗ್ರೆಸ್‌ನ ಹಿರಿಯ ಮುಖಂಡ ಸುವೇಂದು ಅಧಿಕಾರಿ, ಸಂಸದ ಸುನೀಲ್‌ ಮೊಂಡಲ್‌ ಸೇರಿದಂತೆ ವಿವಿಧ ಪಕ್ಷಗಳ 9 ಜನ ಶಾಸಕರು ಅಮಿತ್ ಶಾ ಸಮ್ಮುಖದಲ್ಲಿ ಅಧಿಕೃತವಾಗಿ ಬಿಜೆಪಿಗೆ ಸೇರ್ಪಡೆಯಾದರು.

ADVERTISEMENT

ಮಮತಾ ಬ್ಯಾನರ್ಜಿ ಅವರನ್ನು ತೀವ್ರ ತರಾಟೆಗೆ ತೆಗೆದುಕೊಂಡ ಅಮಿತ್‌ ಶಾ, ಇಷ್ಟೊಂದು ಜನರು ಟಿಎಂಸಿಯನ್ನು ಯಾಕೆ ಬಿಡುತ್ತಿದ್ದಾರೆ ಎಂದರೆ, ನಿಮ್ಮ ದುರಾಡಳಿತ, ಭ್ರಷ್ಟಾಚಾರ ಹಾಗೂ ಸ್ವಜನಪಕ್ಷಪಾತವೇ ಕಾರಣ ಎಂದರು. ದೀದಿ ಇದು ಆರಂಭ ಮಾತ್ರ, ಚುನಾವಣೆ ಸಮೀಪಿಸುವ ವೇಳೆಗೆ ನೀವು ಏಕಾಂಗಿಯಾಗಲಿದ್ದೀರಿ ಎಂದರು.

ಮುಂಬರುವ ಚುನಾವಣೆಯಲ್ಲಿ 200ಕ್ಕೂ ಹೆಚ್ಚು ಸ್ಥಾನಗಳನ್ನು ಗೆದ್ದು ಬಿಜೆಪಿ ಪಶ್ಚಿಮ ಬಂಗಾಳದಲ್ಲಿ ಅಧಿಕಾರಕ್ಕೆ ಬರಲಿದೆ ಎಂದರು.

ಸುವೇಂದು ಅಧಿಕಾರಿ ಮಾತನಾಡಿ, ನನಗೆ ಕೋವಿಡ್‌ ಬಂದಿದ್ದಾಗ ಟಿಎಂಸಿಯ ಯಾರೊಬ್ಬರೂ ನನಗೆ ಕರೆ ಮಾಡಿ ಆರೋಗ್ಯ ವಿಚಾರಿಸಲಿಲ್ಲ. ಆದರೆ ಅಮಿತ್‌ ಶಾ ಎರಡು ಸಲ ಕರೆ ಮಾಡಿ ಯೋಗಕ್ಷೇಮ ವಿಚಾರಿಸಿದರು. ಅವರು ನನಗೆ ಅಣ್ಣನಿದ್ದಂತೆ ಎಂದರು. ಇದೇ ವೇಳೆ ಮಮತಾ ಬ್ಯಾನರ್ಜಿ ಹಾಗೂ ಅಭಿಷೇಕ್‌ ಬ್ಯಾನರ್ಜಿ ವಿರುದ್ಧ ವಾಗ್ದಾಳಿ ನಡೆಸಿದರು.

ಪಶ್ಚಿಮ ಬಂಗಾಳದ ಕೇಂದ್ರ ಸಚಿವರು, ಸಂಘಟನಾ ಕಾರ್ಯದರ್ಶಿಗಳು ಹಾಗೂ ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿಗಳೊಂದಿಗೆ ಚುನಾವಣಾ ನಿರ್ವಹಣಾ ಕಾರ್ಯಗಳ ಬಗ್ಗೆ ಭಾನುವಾರ ಪರಿಶೀಲನಾ ಸಭೆಯನ್ನು ನಡೆಸಲಿದ್ದಾರೆ.

2019ನೇ ಸಾಲಿನಲ್ಲಿ 42 ಲೋಕಸಭಾ ಸ್ಥಾನಗಳಲ್ಲಿ 18 ಸ್ಥಾನಗಳನ್ನು ಗೆದ್ದ ನಂತರ ಪಶ್ಚಿಮ ಬಂಗಾಳ ಗದ್ದುಗೇರಲು ಬಿಜೆಪಿ ಶತ ಪ್ರಯತ್ನ ನಡೆಸುತ್ತಿದೆ. 2014ನೇ ಸಾರ್ವತ್ರಿಕ ಚುನಾವಣೆಯಲ್ಲಿ ಎರಡು ಸ್ಥಾನಗಳನ್ನು ಮಾತ್ರ ಗೆದ್ದಿತ್ತು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.