ಕೋಲ್ಕತ್ತ: ವೋಟ್ ಬ್ಯಾಂಕ್ ರಾಜಕಾರಣ ಮಾಡುತ್ತಿರುವ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ, ನುಸುಳುಕೋರರನ್ನು ರಕ್ಷಿಸುವ ಮೂಲಕ ರಾಷ್ಟ್ರೀಯ ಭದ್ರತೆಯನ್ನು ಅಪಾಯಕ್ಕೆ ದೂಡುತ್ತಿದ್ದಾರೆ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಆರೋಪಿಸಿದ್ದಾರೆ.
ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಪಶ್ಚಿಮ ಬಂಗಾಳದ 42 ಕ್ಷೇತ್ರಗಳ ಪೈಕಿ ಬಿಜೆಪಿ 35 ಕ್ಷೇತ್ರಗಳಲ್ಲಿ ಗೆಲುವು ಸಾಧಿಸಲಿದೆ ಎಂದು ಅವರು ಹೇಳಿದ್ದಾರೆ.
ರಾಜ್ಯ ಬಿಜೆಪಿಯ ಸಾಮಾಜಿಕ ಮಾಧ್ಯಮ ಮತ್ತು ಐಟಿ ವಿಭಾಗದ ಸದಸ್ಯರನ್ನು ಉದ್ದೇಶಿಸಿ ಮಾತನಾಡಿದ ಅವರು, ಟಿಎಂಸಿ ಸರ್ಕಾರದ ವಿರುದ್ಧ ತೀಕ್ಷ್ಣ ವಾಗ್ದಾಳಿ ನಡೆಸಿದರು. ಸ್ಥಳೀಯ ನಾಯಕರು ಇಲ್ಲಿ ವಸೂಲಿ ಮಾಡಿದ ಕಮಿಷನ್ ಹಣದಲ್ಲಿ ವಿದೇಶಗಳಲ್ಲಿ ಐಷಾರಾಮಿ ಬಂಗಲೆಗಳನ್ನು ಖರೀದಿಸುತ್ತಿದ್ದಾರೆ. ಆದರೆ, ಅದೇ ಜನ ಇಲ್ಲಿ ಚಪ್ಪಲಿ ಹಾಕಿಕೊಂಡು ಓಡಾಡುತ್ತಾರೆ ಎಂದು ಟೀಕಿಸಿದರು.
ಹೆಸರನ್ನು ಉಲ್ಲೇಖಿಸದೆ ಮಹುವಾ ಮೋಯಿತ್ರಾ ವಿರುದ್ಧ ವಾಗ್ದಾಳಿ ನಡೆಸಿದ ಶಾ, ಆಕೆ ಉಡುಗೊರೆಗಳನ್ನು ಪಡೆದು ಸಂಸತ್ತಿನ ಪೋರ್ಟಲ್ ಪಾಸ್‌ವರ್ಡ್ ಅನ್ನು ಉದ್ಯಮಿಯೊಂದಿಗೆ ಹಂಚಿಕೊಂಡಿದ್ದರು. ಮುಖ್ಯಮಂತ್ರಿ ಅವರನ್ನು ಸಮರ್ಥನೆ ಮಾಡಕೊಂಡರು ಎಂದು ಟೀಕಿಸಿದರು. ಸಂಸತ್ತಿನಲ್ಲಿ ಬಡವರ ಪರವಾಗಿ ಅವರು ಎಷ್ಟು ಪ್ರಶ್ನೆ ಕೇಳಿದ್ದಾರೆ. ಟಿಎಂಸಿ ಸಂಸದರು ಖಂಡಿತಾ ಬಡವರ ಪರ ಪ್ರಶ್ನೆ ಕೇಳುವುದಿಲ್ಲ. ಏಕೆಂದರೆ, ಅವರಿಂದ ದುಬಾರಿ ಗಿಫ್ಟ್ ಸಿಗುವುದಿಲ್ಲ ಎಂದು ಶಾ ವ್ಯಂಗ್ಯ ಮಾಡಿದರು.
ರಾಜ್ಯಸಭೆ ಸಭಾಪತಿ ಜಗದೀಪ್ ಧನಕರ್ ಅವರನ್ನು ಅಣಕಿಸಿದ ಕಲ್ಯಾಣ್ ಬ್ಯಾನರ್ಜಿ ಅವರ ವಿರುದ್ಧವೂ ವಾಗ್ದಾಳಿ ನಡೆಸಿದ ಶಾ, ಒಬ್ಬ ಸಂಸದ ಮಾಡುವ ಕೆಲಸ ಅದಲ್ಲ ಎಂದು ಟೀಕಿಸಿದರು.
ಅಂತರರಾಷ್ಟ್ರೀಯ ಗಡಿಗಳನ್ನು ತೆರೆದಿಟ್ಟುಕೊಳ್ಳುವ ಮೂಲಕ ವೋಟ್ ಬ್ಯಾಂಕ್ ರಾಜಕಾರಣಕ್ಕಾಗಿ ದೀದಿ(ಸಿಎಂ ಮಮತಾ ಬ್ಯಾನರ್ಜಿ) ರಾಷ್ಟ್ರೀಯ ಭದ್ರತೆಯನ್ನು ಬದಿಗೊತ್ತಿದ್ದಾರೆ ಎಂದು ಟೀಕಿಸಿದರು.
ಈ ಹಿಂದೆ ಪಶ್ಚಿಮ ಬಂಗಾಳವು ಪ್ರತಿಯೊಂದು ಅಂಶದಲ್ಲೂ ರಾಷ್ಟ್ರವನ್ನು ಮುನ್ನಡೆಸುತ್ತಿತ್ತು. ಈಗ ಅದು ಕಮಿಷನ್ ಹಣ, ಸಿಂಡಿಕೇಟ್, ಒಳನುಸುಳುವಿಕೆ, ವಂಶಪಾರಂಪರ್ಯದ ರಾಜಕಾರಣ ಮತ್ತು ಬಾಂಬ್ ಸ್ಫೋಟಗಳಿಂದ ಸುದ್ದಿಯಾಗುತ್ತಿದೆ ಎಂದು ಪ್ರತಿಪಾದಿಸಿದರು.
ಸಚಿವರು ಸೇರಿದಂತೆ ಟಿಎಂಸಿ ನಾಯಕರಿಂದ ₹50 ಕೋಟಿ ಅಕ್ರಮ ಹಣ ವಶಪಡಿಸಿಕೊಳ್ಳಲಾಗಿದೆ. ಆದರೆ, ಮಮತಾ ಬ್ಯಾನರ್ಜಿ ಅವರನ್ನು ತಮ್ಮ ಪಕ್ಷದ ಸೈನಿಕರು ಎಂದು ಕರೆಯುತ್ತಾರೆ ಎಂದು ಮೂಲಗಳು ತಿಳಿಸಿವೆ ಎಂದು ಶಾ ಹೇಳಿದರು.
ಪಶ್ಚಿಮ ಬಂಗಾಳದಲ್ಲಿ ಶೂನ್ಯದಲ್ಲಿದ್ದ ಬಿಜೆಪಿ ಶಾಸಕರ ಸಂಖ್ಯೆ 2021ರ ವಿಧಾನಸಭೆ ಚುನಾವಣೆಯಲ್ಲಿ 77ಕ್ಕೆ ಏರಿದೆ ಮತ್ತು 2019ರ ಲೋಕಸಭೆ ಚುನಾವಣೆಯಲ್ಲಿ 18 ಕ್ಷೇತ್ರಗಳಲ್ಲಿ ಗೆದ್ದಿದ್ದೇವೆ ಎಂದ ಶಾ, 2026ರ ವಿಧಾನಸಭೆ ಚುನಾವಣೆಯಲ್ಲಿ ಪಕ್ಷ ಅಧಿಕಾರಕ್ಕೆ ಬರಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
2011ರಲ್ಲಿ ಬ್ಯಾನರ್ಜಿ, ಎಡಪಕ್ಷಗಳನ್ನು ಅಧಿಕಾರದಿಂದ ಹೊರಗಿಟ್ಟಾಗ ಜನ ಸಂತಸಗೊಂಡಿದ್ದರು ಮತ್ತು ಅಭಿವೃದ್ಧಿಯ ಕನಸು ಕಂಡಿದ್ದರು. ಆದರೆ, ಮಮತಾ ಬ್ಯಾನರ್ಜಿ ಅತ್ಯಂತ ಕೆಟ್ಟ ಆಡಳಿತ ನೀಡಿದರು ಎಂದು ಅವರು ವಾಗ್ದಾಳಿ ನಡೆಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.