ADVERTISEMENT

ಸರ್ಕಾರದ ಅಕ್ರಮ ತಿಳಿದಿರುವ ಆಲಾಪನ್ ಅವರನ್ನು ಮಮತಾ ರಕ್ಷಿಸುತ್ತಿದ್ದಾರೆ: ಸುವೇಂದು

ಪಿಟಿಐ
Published 3 ಜೂನ್ 2021, 3:58 IST
Last Updated 3 ಜೂನ್ 2021, 3:58 IST
ಬಿಜೆಪಿ ಮುಖಂಡ ಸುವೇಂದು ಅಧಿಕಾರಿ
ಬಿಜೆಪಿ ಮುಖಂಡ ಸುವೇಂದು ಅಧಿಕಾರಿ   

ಕೋಲ್ಕತ್ತ: ರಾಜ್ಯದಲ್ಲಿ ಕೋವಿಡ್ -19 ನಿರ್ವಹಣೆಯ ‘ಅಕ್ರಮಗಳ’ ಬಗ್ಗೆ ತಿಳಿದಿರುವ ಕಾರಣ ಮಾಜಿ ಮುಖ್ಯ ಕಾರ್ಯದರ್ಶಿ ಆಲಾಪನ್ ಬಂದೋಪಾಧ್ಯಾಯ ಅವರನ್ನು ರಕ್ಷಿಸಲು ಮಮತಾ ಬ್ಯಾನರ್ಜಿ ಸರ್ಕಾರ ಪ್ರಯತ್ನಿಸುತ್ತಿದೆ ಎಂದು ಬಿಜೆಪಿ ಮುಖಂಡ ಸುವೇಂದು ಅಧಿಕಾರಿ ಆರೋಪಿಸಿದ್ದಾರೆ.

ಪ್ರಧಾನಿ ನರೇಂದ್ರ ಮೋದಿ ಅವರು ಕರೆದಿದ್ದ ಸಭೆಯಲ್ಲಿ ಭಾಗವಹಿಸದೆ ವಿಪತ್ತು ನಿರ್ವಹಣಾ ಕಾಯ್ದೆಯನ್ನು ಉಲ್ಲಂಘಿಸಿದ್ದಾರೆ ಎಂಬ ಆರೋಪದ ಮೇಲೆ ಅವರು ನಿವೃತ್ತರಾದ ದಿನ ಮೇ 31 ರಂದು ಕೇಂದ್ರ ಗೃಹ ಸಚಿವಾಲಯವು ಬಂದೋಪಾಧ್ಯಾಯರಿಗೆ ಶೋ-ಕಾಸ್ ನೋಟಿಸ್ ನೀಡಿತ್ತು.

ನಂತರ, ಅವರನ್ನು ಮುಖ್ಯಮಂತ್ರಿಯ ಮುಖ್ಯ ಸಲಹೆಗಾರರಾಗಿ ನೇಮಕ ಮಾಡಿ ಸಿಎಂ ಮಮತಾ ಬ್ಯಾನರ್ಜಿ ಆದೇಶಿಸಿದ್ದರು.

ADVERTISEMENT

ಪಶ್ಚಿಮ ಬಂಗಾಳದ ಜನರಿಗಾಗಿ ಕೆಲಸ ಮಾಡುತ್ತಿರುವುದರಿಂದ ಬಿಜೆಪಿ, ಬಂದೋಪಾಧ್ಯಾಯ ಅವರನ್ನು ಗುರಿಯಾಗಿಸಿತ್ತು ಎಂದು ಟಿಎಂಸಿ ಆರೋಪಿಸಿತ್ತು.

ಟಿಎಂಸಿಗೆ ತಿರುಗೇಟು ನೀಡಿರುವ ಸುವೇಂದು ಅಧಿಕಾರಿ, ಆಲಾಪನ್ ಬಂದೋಪಾಧ್ಯಾಯರಿಗೆ ಟಿಎಂಸಿ ಸರ್ಕಾರದ ಅನೇಕ ಅಕ್ರಮಗಳು ತಿಳಿದಿದ್ದವು. ಅಕ್ರಮಗಳನ್ನು ಕಂಡು ಕಾಣದಂತೆ ಯಾವುದೇ ಕ್ರಮ ಕೈಗೊಳ್ಳದೆ ಅವರು ಸುಮ್ಮನಿದ್ದರು. ಆದ್ದರಿಂದ, ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ, ಬಂದೋಪಾಧ್ಯಾಯರನ್ನು ರಕ್ಷಿಸಲು ಹತಾಶ ಪ್ರಯತ್ನ ನಡೆಸುತ್ತಿದ್ದಾರೆ. ಇದೇವೇಳೆ, ಸಿಎಂ ಮಮತಾ ಬ್ಯಾನರ್ಜಿಯಿಂದ ರಕ್ಷಣೆ ಪಡೆಯಲು ಆಲಾಪನ್, ಅವರಿಗೆ ಅಂಟಿಕೊಂಡು ಕುಳಿತಿದ್ದಾರೆ’ ಎಂದು ಆರೋಪಿಸಿದ್ದಾರೆ.

ಇದಲ್ಲದೆ, ಕಲೈಕುಂದಾ ವಾಯುನೆಲೆಯಲ್ಲಿ ಮೋದಿ ಅಧ್ಯಕ್ಷತೆಯಲ್ಲಿ ನಡೆದ ಚಂಡಮಾರುತ ಪರಿಶೀಲನಾ ಸಭೆಯಲ್ಲಿ ಭಾಗವಹಿಸದ ಮೂಲಕ ಮಾಜಿ ಮುಖ್ಯ ಕಾರ್ಯದರ್ಶಿ, ಸೇವಾ ನಿಯಮಗಳನ್ನು ಮುರಿದು ಪ್ರಧಾನಿಯನ್ನು ಅವಮಾನಿಸಿದ್ದಾರೆ ಎಂದು ಅಧಿಕಾರಿ ಆರೋಪಿಸಿದ್ದಾರೆ.

ಈ ಮಧ್ಯೆ, ಚುನಾವಣೆಯ ನಂತರ ಟಿಎಂಸಿ ನಡೆಸುತ್ತಿರುವ ಹಿಂಸಾಚಾರವು ಕಡಿಮೆಯಾಗುವ ಯಾವುದೇ ಲಕ್ಷಣ ಕಾಣುತ್ತಿಲ್ಲ. ಸಾವಿರಾರು ಬಿಜೆಪಿ ಕಾರ್ಯಕರ್ತರು ಇನ್ನೂ ಮನೆಗೆ ಮರಳಲು ಸಾಧ್ಯವಾಗುತ್ತಿಲ್ಲ ಎಂದು ಅವರು ಹೇಳಿದ್ದಾರೆ.

ಕೋವಿಡ್ ಸಂಬಂಧಿತ ನಿರ್ಬಂಧಗಳನ್ನು ತೆಗೆದುಹಾಕಿದ ನಂತರ ಹಿಂಸಾಚಾರಕ್ಕೆ ಒಳಗಾದ ಸ್ಥಳಗಳಿಗೆ ಭೇಟಿ ನೀಡುವಂತೆ ರಾಜ್ಯಪಾಲರನ್ನು ಒತ್ತಾಯಿಸಿದ್ದೇನೆ ಎಂದು ಅಧಿಕಾರಿ ಹೇಳಿದರು.

ಆದರೆ, ಕಳೆದ ವರ್ಷ ಡಿಸೆಂಬರ್‌ನಲ್ಲಿ ಟಿಎಂಸಿಯಿಂದ ಬಿಜೆಪಿಗೆ ಸೇರ್ಪಡೆಗೊಂಡ ಅಧಿಕಾರಿ, ಹಲವು ಪ್ರಕರಣಗಳಲ್ಲಿ ಆರೋಪಿಯಾಗಿದ್ದರಿಂದ ಮತ್ತು ಸಿಬಿಐನಂತಹ ಕೇಂದ್ರ ಸಂಸ್ಥೆಗಳಿಂದ ತನ್ನನ್ನು ರಕ್ಷಿಸಿಕೊಳ್ಳಲು ಆಡಳಿತ ವರ್ಗ ಮತ್ತು ಅಧಿಕಾರಿಗಳ ವಿರುದ್ಧ ಇಲ್ಲಸಲ್ಲದ ಸುಳ್ಳು ಆರೋಪಗಳನ್ನು ಮಾಡುತ್ತಿದ್ದಾರೆ ಎಂದು ತೃಣಮೂಲ ಕಾಂಗ್ರೆಸ್ ವಕ್ತಾರ ಕುನಾಲ್ ಘೋಷ್ ಆರೋ‍ಪಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.