ADVERTISEMENT

ರಾಜಕೀಯ ಪ್ರೇರಿತ ಹತ್ಯೆಗಳ ಬಗ್ಗೆ ಶ್ವೇತಪತ್ರ ಹೊರಡಿಸಿ: ಅಮಿತ್ ಶಾ ಆಗ್ರಹ

ಸಿಎಎ ಅನುಷ್ಠಾನ ಖಚಿತ: ಪಶ್ಚಿಮ ಬಂಗಾಳದಲ್ಲಿ ಗೃಹ ಸಚಿವ ಅಮಿತ್‌ ಶಾ ಹೇಳಿಕೆ

ಪಿಟಿಐ
Published 6 ನವೆಂಬರ್ 2020, 15:19 IST
Last Updated 6 ನವೆಂಬರ್ 2020, 15:19 IST
ಅಮಿತ್‌ ಶಾ
ಅಮಿತ್‌ ಶಾ   

ಕೋಲ್ಕತ್ತ: ರಾಜ್ಯದಲ್ಲಿ ಸಂಭವಿಸಿದ ರಾಜಕೀಯ ಪ್ರೇರಿತ ಹತ್ಯೆಗಳ ಬಗ್ಗೆ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು ಶ್ವೇತಪತ್ರ ಹೊರಡಿಸಬೇಕು ಎಂದು ಕೇಂದ್ರ ಗೃಹ ಸಚಿವ ಅಮಿತ್‌ ಶಾ ಶುಕ್ರವಾರ ಆಗ್ರಹಿಸಿದರು.

ಎರಡು ದಿನಗಳ ಪಶ್ಚಿಮ ಬಂಗಾಳ ಪ್ರವಾಸದಲ್ಲಿರುವ ಶಾ, ‘2018ರಿಂದ ಪಶ್ಚಿಮ ಬಂಗಾಳವು ಅಪರಾಧದ ಅಂಕಿ ಅಂಶಗಳನ್ನು ರಾಷ್ಟ್ರೀಯ ಅಪರಾಧ ದಾಖಲೆಗಳ ಬ್ಯೂರೊಗೆ (ಎನ್‌ಸಿಆರ್‌ಬಿ) ಕಳುಹಿಸಿಲ್ಲ. ರಾಜಕೀಯ ಪ್ರೇರಿತ ಹತ್ಯೆಗಳ ಬಗ್ಗೆ ಮುಖ್ಯಮಂತ್ರಿ ಶ್ವೇತಪತ್ರ ಹೊರಡಿಸಲಿ. ಪಶ್ಚಿಮ ಬಂಗಾಳದಲ್ಲೇ ಇಂಥ ಹತ್ಯೆಗಳು ಅತಿ ಹೆಚ್ಚು ನಡೆಯುತ್ತಿವೆ’ ಎಂದು ಸುದ್ದಿಗೋಷ್ಠಿಯಲ್ಲಿ ಅವರು ತಿಳಿಸಿದರು.

ಸಿಎಎ ಅನುಷ್ಠಾನ ಖಚಿತ: ‘ಪೌರತ್ವ(ತಿದ್ದುಪಡಿ)ಕಾಯ್ದೆ(ಸಿಎಎ)ಕೇಂದ್ರ ಸರ್ಕಾರದ ಬದ್ಧತೆ. ಇದನ್ನು ಶೀಘ್ರದಲ್ಲೇ ಅನುಷ್ಠಾನಗೊಳಿಸಲಾಗುವುದು. ಅಭಿವೃದ್ಧಿಯ ನೂತನ ಪರ್ವದಲ್ಲಿ ಸದೃಢ ಪಶ್ಚಿಮ ಬಂಗಾಳ ನಿರ್ಮಾಣ ನಮ್ಮ ಗುರಿ. ಆದರೆ, ತಮ್ಮ ಕುಟುಂಬದ ಸದಸ್ಯರೊಬ್ಬರನ್ನೇ ಮುಂದಿನ ಮುಖ್ಯಮಂತ್ರಿಯನ್ನಾಗಿ ಮಾಡುವುದು ಮಮತಾ ಬ್ಯಾನರ್ಜಿ ಗುರಿ’ ಎಂದು ಶಾ ಟೀಕಿಸಿದರು.

ADVERTISEMENT

‘ಇಲ್ಲಿ ಸರ್ಕಾರಿ ಅಧಿಕಾರಿಗಳೂ ರಾಜಕೀಯ ಕೈಗೊಂಬೆಗಳಾಗಿದ್ದಾರೆ ಹಾಗೂ ಅಪರಾಧಿಗಳಾಗಿದ್ದಾರೆ. ಪಶ್ಚಿಮ ಬಂಗಾಳದಲ್ಲಿ ಮೂರು ಕಾನೂನುಗಳಿದ್ದು, ಒಂದು ಕುಟುಂಬದ ಸದಸ್ಯರಿಗೆ ಮತ್ತೊಂದು ಅಲ್ಪಸಂಖ್ಯಾತರರನ್ನು ಒಲಿಸಿಕೊಳ್ಳಲು ಹಾಗೂ ಕೊನೆಯದಾಗಿ ಸಾಮಾನ್ಯ ಜನರಿಗೆ’ ಎಂದು ಶಾ ಆರೋಪಿಸಿದರು.

ರಾಜ್ಯಪಾಲರು ಹಾಗೂ ರಾಜ್ಯ ಸರ್ಕಾರದ ನಡುವಿನ ಭಿನ್ನಾಭಿಪ್ರಾಯದ ಕುರಿತಂತೆ ಮಾತನಾಡಿದ ಶಾ, ‘ರಾಜ್ಯಪಾಲರು ಸಂವಿಧಾನದ ಚೌಕಟ್ಟಿನಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ’ ಎಂದರು.

ಇದಕ್ಕೂ ಮುನ್ನ ದಕ್ಷಿಣೇಶ್ವರ ದೇವಸ್ಥಾನಕ್ಕೆ ಭೇಟಿ ನೀಡಿದ ಸಂದರ್ಭದಲ್ಲಿ ಮಾತನಾಡಿದ್ದ ಶಾ, ‘ರಾಜ್ಯದಲ್ಲಿರುವ ಓಲೈಕೆ ರಾಜಕಾರಣವು ಪಶ್ಚಿಮ ಬಂಗಾಳದ ಅಭಿವೃದ್ಧಿಗೆ ಮಾರಕ. ಜನರು ಎಚ್ಚೆತ್ತುಕೊಂಡು ತಮ್ಮ ಜವಾಬ್ದಾರಿಯನ್ನು ಅರಿತು ರಾಜ್ಯದ ವೈಭವವನ್ನು ಮತ್ತೆ ತರಬೇಕು’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.