ADVERTISEMENT

ಅಪರಾಧಿ ಸಲೀಂ ಸಂಪರ್ಕವಿದ್ದ ವ್ಯಕ್ತಿ ಬಿಜೆಪಿಗೆ

​ಪ್ರಜಾವಾಣಿ ವಾರ್ತೆ
Published 17 ಜೂನ್ 2025, 15:46 IST
Last Updated 17 ಜೂನ್ 2025, 15:46 IST
.
.   

ಮುಂಬೈ: ಭೂಗತ ಪಾತಕಿ ದಾವೂದ್‌ ಇಬ್ರಾಹಿಂ ಗ್ಯಾಂಗ್‌ನ ಸದಸ್ಯ ಹಾಗೂ ಶಾರ್ಪ್‌ ಶೂಟರ್‌ ಸಲೀಂ ಕುತ್ತಾ ಜೊತೆಗೆ ನಂಟು ಹೊಂದಿರುವ ನಾಸಿಕ್‌ನ ರಾಜಕಾರಣಿ ಸುಧಾಕರ್‌ ಬಡಗುಜರ್ ಮಂಗಳವಾರ ಬಿಜೆಪಿಗೆ ಸೇರ್ಪಡೆಯಾದರು.

ರಾಜ್ಯಸಭಾ ಸದಸ್ಯ ಸಂಜಯ್‌ ರಾವುತ್‌ ಆಪ್ತ ವಲಯದಲ್ಲಿ ಗುರುತಿಸಿಕೊಂಡಿದ್ದ, ಉದ್ಯಮಿಯೂ ಆಗಿರುವ ಸುಧಾಕರ್‌ ಶಿವಸೇನೆಯ (ಯುಬಿಟಿ) ನಾಸಿಕ್‌ ಘಟಕದ ಮುಖ್ಯಸ್ಥರಾಗಿದ್ದರು. ಈಚೆಗಷ್ಟೇ ಪಕ್ಷ ವಿರೋಧಿ ಚಟುವಟಿಕೆ ನಡೆಸಿದ್ದಕ್ಕಾಗಿ ಉಚ್ಚಾಟನೆಗೊಂಡಿದ್ದರು.

ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಹಾಗೂ ಕಂದಾಯ ಸಚಿವ ಚಂದ್ರಶೇಖರ್‌ ಬಾವಂಕುಲೆ, ಕಾರ್ಯಾಧ್ಯಕ್ಷ ರವೀಂದ್ರ ಚವಾಣ್‌, ಸಚಿವ ಗಿರೀಶ್‌ ಮಹಾಜನ್ ಸಮ್ಮುಖದಲ್ಲಿ ಸುಧಾಕರ್‌ ಬಿಜೆಪಿಗೆ ಸೇರ್ಪಡೆಗೊಂಡರು. ಮಾಜಿ ಸಚಿವ ಬಬನ್‌ರಾವ್‌ ಘೋಲಾಪ್‌ ಕೂಡ ಇದೇ ಸಂದರ್ಭ ಪಕ್ಷ ಸೇರಿದರು.

ADVERTISEMENT

‘ನಾಸಿಕ್‌ನಲ್ಲಿ ಅಧಿಕಾರಕ್ಕೆ ಬರಬೇಕು. ಅದಕ್ಕಾಗಿ ನಮ್ಮ ಭಿನ್ನಾಭಿಪ್ರಾಯಗಳನ್ನು ಬದಿಗೊತ್ತಿ ಒಟ್ಟಾಗಿ ಕೆಲಸ ಮಾಡಬೇಕು’ ಎಂದು ಬಾವಂಕುಲೆ ಹೇಳಿದರು.

ಸುಧಾಕರ್ ಬಿಜೆಪಿಗೆ ಸೇರ್ಪಡೆ ಆಗುತ್ತಾರೆ ಎಂಬ ಸುದ್ದಿಗಳು ಕೇಳಿಬರುತ್ತಿದ್ದಂತೆ, ನಾಸಿಕ್‌ ಪಶ್ಚಿಮ ವಿಧಾನಸಭಾ ಕ್ಷೇತ್ರದ ಬಿಜೆಪಿ ಶಾಸಕಿ ಸೀಮಾ ಹೀರೆ ಅವರು ಬಡಗುಜರ್‌ ಅವರನ್ನು ‘ರಾಷ್ಟ್ರ ವಿರೋಧಿ’ ಎನ್ನುವ ಮೂಲಕ ಪರೋಕ್ಷವಾಗಿ ತಮ್ಮ ಅಸಮಾಧಾನ ವ್ಯಕ್ತಪಡಿಸಿದ್ದರು.

ಸಲೀಂ ಮೀರಾ ಶೇಖ್‌ ಅಲಿಯಾಸ್‌ ಸಲೀಂ ಕುತ್ತಾ 1993ರ ಮುಂಬೈ ಸರಣಿ ಸ್ಫೋಟ ಪ್ರಕರಣಕ್ಕೆ ಸಂಬಂಧಿಸಿದಂತೆ ನಾಸಿಕ್‌ನ ಕೇಂದ್ರ ಕಾರಾಗೃಹದಲ್ಲಿ ಜೀವಾವಧಿ ಶಿಕ್ಷೆ ಅನುಭವಿಸುತ್ತಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.