ADVERTISEMENT

ಸಹಜೀವನ ಸಂಗಾತಿಯನ್ನು ಕೊಂದು ಚಾಪೆಯಲ್ಲಿ ಸುತ್ತಿಟ್ಟ ವ್ಯಕ್ತಿ ಬಂಧನ

ಮಹಾರಾಷ್ಟ್ರದ ಪಾಲ್ಗರ್‌ ಜಿಲ್ಲೆಯಲ್ಲಿ ಘಟನೆ

​ಪ್ರಜಾವಾಣಿ ವಾರ್ತೆ
Published 14 ಫೆಬ್ರುವರಿ 2023, 14:24 IST
Last Updated 14 ಫೆಬ್ರುವರಿ 2023, 14:24 IST
   

ಪಾಲ್ಗರ್‌: ತನ್ನ ಸಹಜೀವನ ಸಂಗಾತಿಯನ್ನು ಕೊಲೆ ಮಾಡಿರುವ ಆರೋಪ ಎದುರಿಸುತ್ತಿರುವ ವ್ಯಕ್ತಿಯೊಬ್ಬ ಪರಾರಿಯಾಗಲು ಯತ್ನಿಸುತ್ತಿದ್ದ ವೇಳೆ ಮಹಾರಾಷ್ಟ್ರದ ಪಾಲ್ಗರ್‌ ಜಿಲ್ಲೆಯ ತುಳಿಂಜ್‌ ಠಾಣೆಯ ಪೊಲೀಸರ ಬಲೆಗೆ ಬಿದ್ದಿದ್ದಾನೆ.

ಆರೋಪಿಯನ್ನು ಮಧ್ಯಪ್ರದೇಶದ ನಾಗ್ಡಾ ಎಂಬಲ್ಲಿ ರೈಲ್ವೇ ಕಾವಲು ಪಡೆಯ ಪೊಲೀಸರು ಬಂಧಿಸಿದ್ದಾರೆ ಎಂದು ಪೊಲೀಸ್‌ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ತನ್ನ ಸಹಜೀವನ ಸಂಗಾತಿ ಮೇಘಾ (37), ಎಂಬವರನ್ನು ಕೊಲೆ ಮಾಡಿರುವ ಆರೋಪ ಬಂಧಿತ ವ್ಯಕ್ತಿಯ ಮೇಲೆ ಇದೆ.

ADVERTISEMENT

ವೃತ್ತಿಯಲ್ಲಿ ಶುಶ್ರೂಷಕಿಯಾಗಿರುವ ಮೇಘಾ ಅವರ ಮೃತದೇಹವು ತುಳಿಂಜ್ ಪ್ರದೇಶದಲ್ಲಿ ಸೋಮವಾರ ಪತ್ತೆಯಾಗಿತ್ತು. ಮನೆಯೊಳಗಿಂದ ದುರ್ವಾಸನೆ ಬರುತ್ತಿದ್ದನ್ನು ಗಮನಿಸಿದ ನೆರೆಮನೆಯವರು, ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.

ಹಾಸಿಗೆಯಲ್ಲಿ ಸುತ್ತಿದ್ದ ಮೃತದೇಹ ಪತ್ತೆಯಾಗಿದ್ದು, ವಾರಗಳ ಹಿಂದೆ ಕೊಲೆ ನಡೆದಿರಬಹುದು ಎಂದು ಪೊಲೀಸರು ಶಂಕಿಸಿದ್ದಾರೆ.

ಬಂಧಿತ ಆರೋಪಿಯು ನಿರುದ್ಯೋಗಿಯಾಗಿದ್ದು, ಪದೇ ಪದೇ ಜಗಳವಾಡುತ್ತಿದ್ದ. ಹೀಗೆ ಜಗಳ ಕೊಲೆಯಲ್ಲಿ ಅಂತ್ಯವಾಗಿರಬಹುದು ಎಂದು ಪೊಲೀಸರು ಊಹಿಸಿದ್ದಾರೆ.

ಅಲ್ಲದೇ ಕೊಲೆ ಮಾಡಿರುವ ಬಗ್ಗೆ ಹಾಗೂ ಮನೆಯ ಪೀಠೋಪಕರಣಗಳನ್ನು ಮಾರಾಟ ಮಾಡಿರುವ ಬಗ್ಗೆ ಆರೋಪಿ ತನ್ನ ಸಹೋದರಿಗೆ ಸಂದೇಶ ಕಳುಹಿಸಿದ್ದ ಎಂದು ಪೊಲೀಸರು ಹೇಳಿದ್ದಾರೆ.

ಭಾರತೀಯ ದಂಡ ಸಂಹಿತೆಯ 302ನೇ ವಿಧಿಯಡಿ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು, ಹೆಚ್ಚಿನ ತನಿಖೆ ನಡೆಸುತ್ತಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.