ADVERTISEMENT

ನಕಲಿ ವೀಸಾ: ಬೆಂಗಳೂರು ಏರ್‌ಪೋರ್ಟ್‌ನಲ್ಲಿ ವ್ಯಕ್ತಿಯ ಬಂಧನ

ಪಿಟಿಐ
Published 20 ಜನವರಿ 2024, 7:32 IST
Last Updated 20 ಜನವರಿ 2024, 7:32 IST
ಬಂಧನ (ಸಾಂದರ್ಭಿಕ ಚಿತ್ರ)
ಬಂಧನ (ಸಾಂದರ್ಭಿಕ ಚಿತ್ರ)   

ನವದೆಹಲಿ: ನಕಲಿ ಪಾಸ್‌ಪೋರ್ಟ್‌ ಹಾಗೂ ವಿಸಾ ಪ್ರಕರಣ ಸಂಬಂಧ ಓರ್ವ ವ್ಯಕ್ತಿಯನ್ನು ದೆಹಲಿ ಪೊಲೀಸರು ಬೆಂಗಳೂರಿನ ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಬಂಧಿಸಿದ್ದಾರೆ ಎಂದು ಅಧಿಕಾರಿಗಳು ಶನಿವಾರ ತಿಳಿಸಿದ್ದಾರೆ.

ದುಬೈನಿಂದ ಆಗಮಿಸಿದ ಆರೋಪಿ ಸಾದಿಕುಲ್ಲಾ ಬೇಗ್‌ನನ್ನು ಬೆಂಗಳೂರು ವಿಮಾನ ನಿಲ್ದಾಣದಲ್ಲಿ ದೆಹಲಿ ಪೊಲೀಸರು ಗುರುವಾರ ವಶಕ್ಕೆ ಪಡೆದಿದ್ದಾರೆ ಎಂದು ಅವರು ತಿಳಿಸಿದ್ದಾರೆ.

ಪಂಜಾಬ್‌ನ ಲೂಧಿಯಾನದಲ್ಲಿ ನಡೆದ ನಕಲಿ ವೀಸಾ ಪ್ರಕರಣ ಸಂಬಂಧ ಬೇಗ್‌ ವಿರುದ್ಧ ಲುಕ್‌ ಔಟ್‌ ನೋಟಿಸ್‌ ಜಾರಿ ಮಾಡಲಾಗಿತ್ತು. ಬೇಗ್‌ ಲ್ಯಾಂಡ್‌ ಆದ ಕೂಡಲೇ ವಿಮಾನ ನಿಲ್ದಾಣದ ಅಧಿಕಾರಿಗಳು ಭದ್ರತಾ ಸಿಬ್ಬಂದಿಗೆ ಮಾಹಿತಿ ನೀಡಿದ್ದಾರೆ. ಅವರು ಬೇಗ್‌ನನ್ನು ವಶಕ್ಕೆ ಪಡೆದು ದೆಹಲಿ ಪೊಲೀಸರಿಗೆ ಹಸ್ತಾಂತರಿಸಿದ್ದಾರೆ ಎಂದು ಪೊಲೀಸ್‌ ಉಪ ಆಯುಕ್ತೆ ಉಶಾ ರಂಗನಾಣಿಯವರು ತಿಳಿಸಿದ್ದಾರೆ.

ADVERTISEMENT

ನಕಲಿ ವೀಸಾ ಪ್ರಕರಣವನ್ನು ಉಲ್ಲೇಖಿಸಿದ ರಂಗನಾಣಿ, ಲೂಧಿಯಾನಾದ ಹರ್ವಿಂದರ್ ಸಿಂಗ್ ಧನೋವಾ ಎಂಬಾತ ಕೆಲವು ತಿಂಗಳ ಹಿಂದೆ, ಏಜೆಂಟ್ ಮುಸ್ಕಾನ್ ಉರ್ಫ್‌ ಮನ್‌ಪ್ರೀತ್ ಕೌರ್ ಒದಗಿಸಿದ ಕೆನಡಾದ ನಕಲಿ ವೀಸಾದಲ್ಲಿ ಪ್ರಯಾಣಿಸುತ್ತಿದ್ದ. ಆತನನ್ನು ಬಂಧಿಸಿ ವಿಚಾರಣೆಗೆ ಒಳಪಡಿಸಿದಾಗ, ಮತ್ತೊಬ್ಬ ಏಜೆಂಟ್ ಸಾದಿಕುಲ್ಲಾ ಬೇಗ್‌ಗೆ ₹5 ಲಕ್ಷ ನೀಡಿದ್ದಾಗಿ ಹೇಳಿದ್ದ ಎಂದು ತಿಳಿಸಿದ್ದಾರೆ.

ಹಲವು ಪ್ರಯತ್ನಗಳ ಹೊರತಾಗಿಯೂ ಬೇಗ್‌ನನ್ನು ಪತ್ತೆಹಚ್ಚಲು ಸಾಧ್ಯವಾಗಲಿಲ್ಲ. ಹೀಗಾಗಿ ಲುಕ್-ಔಟ್ ನೋಟಿಸ್‌ ಹೊರಡಿಸಲಾಗಿತ್ತು ಎಂದು ಅವರು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.