ಛತ್ರಪತಿ ಸಾಂಭಾಜಿನಗರ: ಮಹಾರಾಷ್ಟ್ರದ ಬೀಡ್ ಜಿಲ್ಲೆಯಲ್ಲಿ ವಿವಾಹಿತೆ ಸಾವು ಎಚ್‌ಐವಿ ಸೋಂಕಿನಿಂದ ಸಂಭವಿಸಿದೆ ಎಂಬ ವದಂತಿ ಹಬ್ಬಿದ ಪರಿಣಾಮ ಅವರ ಕುಟುಂಬಕ್ಕೆ ಬಹಿಷ್ಕಾರ ಹಾಕಲಾಗಿದೆ.
ಈ ಕುರಿತಂತೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಹಾಗೂ ಜಿಲ್ಲಾಧಿಕಾರಿಗೆ ಪತ್ರ ಬರೆದಿರುವ ಯುವತಿಯ ತಂದೆ, ‘ತನ್ನ ಮಗಳಿಗೆ ಪತಿಯ ಮನೆಯಲ್ಲಿ ಕಳೆದ ಒಂದು ವರ್ಷದಿಂದ ನಿರಂತರ ಕಿರುಕುಳ ನೀಡಲಾಗುತ್ತಿತ್ತು. ಆದರೆ ಪೊಲೀಸ್ ಇಲಾಖೆಯ ಒಬ್ಬ ಸಿಬ್ಬಂದಿ ಹಾಗೂ ಸರ್ಕಾರಿ ಆಸ್ಪತ್ರೆಯ ಸೂಪರಿಂಟೆಂಡೆಂಟ್ ಸೇರಿಕೊಂಡು ಮಗಳು ಎಚ್‌ಐವಿಯಿಂದ ಮೃತಪಟ್ಟಿದ್ದಾಳೆ ಎಂದು ವದಂತಿ ಹಬ್ಬಿಸಿದ್ದಾರೆ. ಇದರಿಂದ ನಮ್ಮ ಕುಟುಂಬ ತೀವ್ರ ಮಾನಸಿಕ ಯಾತನೆ ಅನುಭವಿಸುತ್ತಿದೆ. ಜತೆಗೆ ಸಮಾಜದಿಂದಲೂ ಬಹಿಷ್ಕರಿಸಲಾಗಿದೆ’ ಎಂದು ಅಲವತ್ತುಕೊಂಡಿದ್ದಾರೆ.
‘ಪತಿಯ ಮನೆಯಲ್ಲಿ ಮಗಳ ಮೇಲಾಗುತ್ತಿದ್ದ ದೌರ್ಜನ್ಯದ ವಿರುದ್ಧ 2024ರ ಅಕ್ಟೋಬರ್‌ನಲ್ಲಿ ದೂರು ನೀಡಲಾಗಿತ್ತು. ಆದರೆ ಮಗಳು ಡಿ. 13ರಂದು ಮೃತಪಟ್ಟಳು. ಆಕೆಯ ಸಾವಿಗೂ ಮೊದಲು ಆಸ್ಪತ್ರೆಗೆ ಕರೆದೊಯ್ದಾಗ ಸರ್ಕಾರಿ ವೈದ್ಯ ನಮ್ಮೊಂದಿಗೆ ಅಸಭ್ಯವಾಗಿ ವರ್ತಿಸಿದ್ದರು. ಮಗಳು ಎಚ್‌ಐವಿಯಿಂದ ಮೃತಪಟ್ಟಿದ್ದು, ಆಕೆಯ ಅಂತ್ಯಸಂಸ್ಕಾರದಲ್ಲಿ ಪಾಲ್ಗೊಳ್ಳದಂತೆ ನಮ್ಮ ಸಂಬಂಧಿಕರಿಗೆ ಪೊಲೀಸ್ ಸಿಬ್ಬಂದಿಯೊಬ್ಬರು ತಿಳಿಸಿದ್ದರು. ವೈದ್ಯರೂ ಅದನ್ನೇ ಹೇಳಿದ್ದಾರೆ. ಇವರಿಂದಾಗಿ ಇಡೀ ಕುಟುಂಬದ ನೆಮ್ಮದಿ ಹಾಳಾಗಿದೆ’ ಎಂದು ಆರೋಪಿಸಿದ್ದಾರೆ.
‘ಮಗಳ ಅತ್ತೆಯ ಮನೆಯವರೊಂದಿಗೆ ಪೊಲೀಸರು ಶಾಮೀಲಾಗಿದ್ದಾರೆ. ನಾವು ಕೊಟ್ಟ ದೂರಿನ ಮೇಲೆ ಯಾವುದೇ ಕ್ರಮವನ್ನು ಪೊಲೀಸರು ತೆಗೆದುಕೊಂಡಿಲ್ಲ. ಇದೀಗ ಮಗಳ ವಿರುದ್ಧ ಅಪಪ್ರಚಾರ ನಡೆಸಿದ ಪರಿಣಾಮ, ನನ್ನ ಮಗ ಹಾಗೂ ಮತ್ತೊಬ್ಬ ಮಗಳು ಪ್ರತ್ಯೇಕವಾಗಿ ವಾಸವಾಗಿದ್ದಾರೆ. ಗ್ರಾಮಸ್ಥರು ನಮ್ಮೊಂದಿಗೆ ಮಾತನಾಡುವುದನ್ನು ಹಾಗೂ ವ್ಯವಹರಿಸುವುದನ್ನು ನಿಲ್ಲಿಸಿದ್ದಾರೆ’ ಎಂದು ದೂರಿನಲ್ಲಿ ಹೇಳಿದ್ದಾರೆ.
ದೂರು ಸ್ವೀಕರಿಸಿ ಪ್ರತಿಕ್ರಿಯಿಸಿದ ಪೊಲೀಸ್ ವರಿಷ್ಠಾಧಿಕಾರಿ ನವನೀತ್ ಕನ್ವಾತ್, ‘ವೈದ್ಯರು ಹೇಳಿದ್ದನ್ನು ದೂರಿನಲ್ಲಿ ಹೆಸರಿಸಿರುವ ಪೊಲೀಸ್ ಸಿಬ್ಬಂದಿ ತಿಳಿಸಿದ್ದಾರೆಯಷ್ಟೇ. ಮೃತ ಮಹಿಳೆಯ ತಂದೆಗಷ್ಟೇ ಈ ಮಾಹಿತಿಯನ್ನು ತಿಳಿಸಿರುವುದಾಗಿ ಹಾಗೂ ಬೇರೆ ಯಾರಿಗೂ ಹೇಳಿಲ್ಲವೆಂದು ಸಿಬ್ಬಂದಿ ವಿವರಣೆ ನೀಡಿದ್ದಾರೆ. ಈ ವಿಷಯದಲ್ಲಿ ಇಲಾಖೆ ಸಿಬ್ಬಂದಿ ತಜ್ಞನಲ್ಲ ಮತ್ತು ಯಾವುದೇ ಕೆಟ್ಟ ಉದ್ದೇಶದಿಂದ ಅವರು ಇದನ್ನು ಹೇಳಿಲ್ಲ’ ಎಂದಿದ್ದಾರೆ.
ವೈದ್ಯಕೀಯ ಸೂಪರಿಂಟೆಂಡೆಂಟ್ ಹೇಳಿಕೆಗೆ ಸಂಬಂಧಿಸಿದಂತೆ ತನಿಖೆ ನಡೆಸಲಾಗುವುದು ಎಂದು ಜಿಲ್ಲಾ ಆಸ್ಪತ್ರೆಯ ಅಧಿಕಾರಿಗಳು ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.