ADVERTISEMENT

ಬೈಕ್‌ ಸ್ಕಿಡ್‌: ಸವಾರ ಸಾವು 

ಪಿಟಿಐ
Published 24 ನವೆಂಬರ್ 2018, 16:53 IST
Last Updated 24 ನವೆಂಬರ್ 2018, 16:53 IST

ನವದೆಹಲಿ: ಇಲ್ಲಿನ ಸಿಗ್ನೇಚರ್‌ ಸೇತುವೆಯಲ್ಲಿ ಬೈಕ್‌ ಸ್ಕಿಡ್‌ ಆದ ಪರಿಣಾಮ ಚಾಲಕ ಮೃತಪಟ್ಟಿದ್ದು, ಹಿಂಬದಿ ಸವಾರ ಗಾಯಗೊಂಡಿದ್ದಾನೆ.

ಮೃತ ಶಂಕರ್ (24) ಗಾಜಿಯಾಬಾದ್ ನಿವಾಸಿ. ಗಾಯಗೊಂಡಿರುವ ಶಂಕರ್‌ನ ಸೋದರ ಸಂಬಂಧಿ ದೀಪಕ್‌ನನ್ನು (17) ಆಸ್ಪತ್ರೆಗೆ ದಾಖಲಿಸಲಾಗಿದೆ.

ಶುಕ್ರವಾರ ಇದೇ ಸೇತುವೆಯಲ್ಲಿ ನಡೆದ ಅಪಘಾತದಲ್ಲಿ ಇಬ್ಬರು ವೈದ್ಯಕೀಯ ವಿದ್ಯಾರ್ಥಿಗಳು ಮೃತಪಟ್ಟಿದ್ದರು. ಆ ಮೂಲಕ ಎರಡೇ ದಿನಗಳಲ್ಲಿ ನಡೆದ ಮೂರನೇ ಸಾವು ಇದಾಗಿದೆ.

ADVERTISEMENT

ಕಿರುಕುಳ: ಮಹಿಳೆ ದೂರು

ಥಾಣೆ: ಚೆನ್ನಾಗಿ ಅಡುಗೆ ಮಾಡಲು ಬರುವುದಿಲ್ಲ ಎಂದು ಪತಿ ಹಾಗೂ ಆತನ ಮನೆಯವರು ನಿರಂತರವಾಗಿ ಕಿರುಕುಳ ನೀಡುತ್ತಿದ್ದಾರೆ ಎಂದು ಮಹಿಳೆಯೊಬ್ಬರು ತನ್ನ ಗಂಡನ ವಿರುದ್ಧ ಪೊಲೀಸ್‌ ಠಾಣೆಗೆ ದೂರು ನೀಡಿದ್ದಾರೆ.

ಆರೋಪಿ ಹಾಗೂ ಸಂತ್ರಸ್ತೆ ಇಬ್ಬರು ವೈದ್ಯರಾಗಿದ್ದು, ಮುಂಬೈನ ಆಸ್ಪತ್ರೆಯಲ್ಲಿ ಒಟ್ಟಿಗೆ ಕೆಲಸಮಾಡುತ್ತಿದ್ದಾಗ ಪರಸ್ಪರ ಪ್ರೀತಿಸಿದ್ದರು. ಹಿಂದೂ ಧರ್ಮದವರಾಗಿದ್ದ ಮಹಿಳೆ ನಂತರ ಮುಸ್ಲಿಂ ಧರ್ಮಕ್ಕೆ ಮತಾಂತರಗೊಂಡು ಆರೋಪಿಯನ್ನು 2005ರಲ್ಲಿ ವಿವಾಹವಾಗಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.

ಮದುವೆಯ ನಂತರ ಪತಿ ಹಾಗೂ ಆತನ ಮನೆಯವರು ನಿರಂತರವಾಗಿ ಕಿರುಕುಳ ನೀಡುತ್ತಿದ್ದರು. ‘ನಿನಗೆ ಅಡುಗೆ ಮಾಡಲು ಬರುವುದಿಲ್ಲ’ ಎಂದು ಜರಿಯುತ್ತಿದ್ದರು. ಇನ್ನೊಬ್ಬ ಮಹಿಳೆಯನ್ನು ಮದುವೆಯಾದ ಗಂಡ, ಆಕೆಯೊಂದಿಗೆ ಇರುವಂತೆ ನನಗೆ ಬಲವಂತ ಮಾಡಿದ್ದರು ಎಂದು ಮಹಿಳೆ ದೂರಿನಲ್ಲಿ ದಾಖಲಿಸಿದ್ದಾರೆ.

‘ಆತನ ನಿರಂತರ ಕಿರುಕುಳವನ್ನು ಸಹಿಸಲು ಹಾಗೂ ಹಣದ ಬೇಡಿಕೆಯನ್ನು ಪೂರೈಸಲು ನನ್ನಿಂದ ಸಾಧ್ಯವಾಗದ ಕಾರಣ ದೂರು ನೀಡುತ್ತಿದ್ದೇನೆ’ ಎಂದು ಸಂತ್ರಸ್ತೆ ಹೇಳಿದ್ದಾರೆ.

ಭಾರತೀಯ ದಂಡ ಸಂಹಿತೆಯ ವಿವಿಧ ಸೆಕ್ಷನ್‌ಗಳಡಿ ಆರೋಪಿ ವಿರುದ್ಧ ಪ್ರಕರಣ ದಾಖಲಾಗಿದೆ.

ಗುಂಡಿನ ದಾಳಿ: ಸ್ಥಳೀಯ ವ್ಯಕ್ತಿಗೆ ಗಾಯ

ಶ್ರೀನಗರ: ಜಮ್ಮು ಮತ್ತು ಕಾಶ್ಮೀರದ ಬದ್ಗಾಮ್‌ ಜಿಲ್ಲೆಯಲ್ಲಿ ಭದ್ರತಾ ಪಡೆಗಳ ಶಿಬಿರದ ಬಳಿ ನಡೆದ ಗುಂಡಿನ ದಾಳಿಯಲ್ಲಿ ಸ್ಥಳೀಯರೊಬ್ಬರು ಗಾಯಗೊಂಡಿದ್ದಾರೆ.

ಗಾಯಾಳುಇಷ್ಫಾಕ್ ಅಹಮ್ಮದ್‌ರನ್ನು ಅಸ್ಪತ್ರೆಗೆ ದಾಖಲಿಸಲಾಗಿದೆ.ಭದ್ರತಾ ಪಡೆಗಳ ಅಪ್ರಚೋದಿತ ದಾಳಯಿಂದಾಗಿ ಇಷ್ಫಾಕ್ ಗಾಯಗೊಂಡಿದ್ದಾರೆ ಎಂದು ಸ್ಥಳೀಯರು ಆರೋಪಿಸಿದ್ದಾರೆ.ಶ್ರೀನಗರದ ರಕ್ಷಣಾ ವಕ್ತಾರರು, ‘ಇದೊಂದು ಭಯೋತ್ಪಾದಕ ಕೃತ್ಯ’ ಎಂದಿದ್ದಾರೆ.

ಪಠ್ಯಕ್ರಮ ಬದಲಿಸಲು ತ್ರಿಪುರಾ ಸಿದ್ಧತೆ

ಅಗರ್ತಲ: ಹಿಂದಿನ ಎಡಪಕ್ಷ ಪರಿಚಯಿಸಿದ್ದ ಶಾಲಾ ಪಠ್ಯಕ್ರಮವನ್ನು ಬದಲಾಯಿಸಿ, ಸಿಬಿಎಸ್‌ಸಿ ಮಾದರಿ ಪಠ್ಯಕ್ರಮವನ್ನು ಜಾರಿಗೊಳಿಸಲು ತ್ರಿಪುರಾ ಸರ್ಕಾರ ನಿರ್ಧರಿಸಿದೆ.

ಮುಂದಿನ ಶೈಕ್ಷಣಿಕ ವರ್ಷದಿಂದ ಈಗಿನ ಪಠ್ಯಕ್ರಮಕ್ಕೆ ಬದಲಾಗಿ ರಾಷ್ಟ್ರೀಯ ಶಿಕ್ಷಣ ಸಂಶೋಧನೆ ಮತ್ತು ತರಬೇತಿ ಮಂಡಳಿ (ಎನ್‌ಸಿಇಆರ್‌ಟಿ) ಹಾಗೂ ಸಿಬಿಎಸ್‌ಸಿ ಪಠ್ಯಕ್ರಮವನ್ನು ಬೋಧಿಸಲಾಗುವುದು ಎಂದುಶಿಕ್ಷಣ ಸಚಿವ ರತನ್‌ ಲಾಲ್‌ ನಾಥ್‌ ತಿಳಿಸಿದ್ದಾರೆ.

ಎನ್‌ಸಿಇಆರ್‌ಟಿ ತಜ್ಞರು ಡಿಸೆಂಬರ್ 3ರಂದು ರಾಜ್ಯಕ್ಕೆ ಬರಲಿದ್ದು, ಶಿಕ್ಷಕರಿಗೆ 3 ತಿಂಗಳು ತರಬೇತಿ ನೀಡಲಿದ್ದಾರೆ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.