ADVERTISEMENT

ದನದ ಮಾಂಸ ಒಯ್ಯುತ್ತಿದ್ದ ಶಂಕೆ: ವ್ಯಕ್ತಿಯ ಹೊಡೆದು ಕೊಲೆ

ಪಿಟಿಐ
Published 10 ಮಾರ್ಚ್ 2023, 14:35 IST
Last Updated 10 ಮಾರ್ಚ್ 2023, 14:35 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಸಾರಣ್‌, ಬಿಹಾರ: ದನದ ಮಾಂಸ ಒಯ್ಯುಲಾಗುತ್ತಿದೆ ಎಂದು ಶಂಕಿಸಿ, 55 ವರ್ಷದ ವ್ಯಕ್ತಿಯೊಬ್ಬರನ್ನು ಗುಂಪೊಂದು ಹೊಡೆದು ಕೊಂದ ಘಟನೆ ಜಿಲ್ಲೆಯ ಜೋಗಿಯಾ ಗ್ರಾಮದಲ್ಲಿ ಮಂಗಳವಾರ ನಡೆದಿದೆ.

ಸಿವಾನ್‌ ಜಿಲ್ಲೆಯ ಹಸನ್‌ಪುರ ಗ್ರಾಮದ ನಸೀಮ್‌ ಖುರೇಷಿ (55) ಮೃತಪಟ್ಟವರು.

‘ಈ ಸಂಬಂಧ ಮೂವರನ್ನು ಬಂಧಿಸಲಾಗಿದೆ. ಉಳಿದ ಇಬ್ಬರ ಬಂಧನಕ್ಕಾಗಿ ಕ್ರಮ ಕೈಗೊಳ್ಳಲಾಗಿದೆ’ ಎಂದು ಪೊಲೀಸರು ಶುಕ್ರವಾರ ತಿಳಿಸಿದರು.

ADVERTISEMENT

‘ನಸೀಮ್‌ ಹಾಗೂ ಅವರ ಫೀರೋಜ್‌ ಖುರೇಷಿ ಮಂಗಳವಾರ ಸಂಬಂಧಿಕರ ಮನೆಗೆ ತೆರಳುತ್ತಿದ್ದರು. ಮಸೀದಿಯೊಂದರ ಬಳಿ ಅವರನ್ನು ಗುಂಪೊಂದು ಸುತ್ತುವರಿಯಿತು. ಈ ವೇಳೆ ಮಾತಿನ ಚಕಮಕಿ ನಡೆಯಿತು. ಫೀರೋಜ್‌ ಅವರು ಹೇಗೋ ತಪ್ಪಿಸಿಕೊಂಡು ಓಡಿದರು. ಆದರೆ, ನಸೀಮ್‌ ಅವರನ್ನು ಸ್ಥಳೀಯರು ಕೋಲುಗಳಿಂದ ಥಳಿಸಿದರು. ತೀವ್ರವಾಗಿ ಗಾಯಗೊಂಡ ನಸೀಮ್‌ ಅವರನ್ನು ಗುಂಪು ಹತ್ತಿರದ ಪೊಲೀಸ್‌ ಠಾಣೆಗೆ ಕರೆದೊಯ್ಯಿತು. ಅಲ್ಲಿಂದ ಚಿಕಿತ್ಸೆಗಾಗಿ ಸರ್ಕಾರಿ ಆಸ್ಪತ್ರೆಗೆ ಕರೆದೊಯ್ಯುವ ಮಾರ್ಗ ಮಧ್ಯದಲ್ಲಿ ನಸೀಮ್‌ ಮೃತಪಟ್ಟರು’ ಎಂದು ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಗೌರವ್‌ ಮಾಂಗ್ಲಾ ಮಾಹಿತಿ ನೀಡಿದರು.

‘ನಸೀಮ್‌ ಅವರು ದನದ ಮಾಂಸ ಒಯ್ಯುತ್ತಿದ್ದರೇ ಇಲ್ಲವೇ ಎನ್ನುವ ಕುರಿತು ತನಿಖೆ ನಡೆಸಲಾಗುತ್ತಿದೆ. ಬಂಧಿಸಿರುವ ಮೂವರಲ್ಲಿ ಒಬ್ಬರು ಗ್ರಾಮ ಪಂಚಾಯಿತಿ ಅಧ್ಯಕ್ಷರಾಗಿದ್ದಾರೆ. ನಸೀಮ್‌ ಅವರ ಸಂಬಂಧಿ ಫಿರೋಜ್‌ ಅವರು ನೀಡಿದ ಮಾಹಿತಿ ಮೇರೆಗೆ ಎಫ್‌ಐಆರ್‌ ದಾಖಲು ಮಾಡಲಾಗಿದೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.