
ಸಾಂದರ್ಭಿಕ ಚಿತ್ರ
ಬಹ್ರೈಚ್ (ಉತ್ತರ ಪ್ರದೇಶ): ಚಿರತೆಯನ್ನು ಸೆರೆಹಿಡಿಯಲು ಇರಿಸಲಾಗಿದ್ದ ಬೋನಿನಲ್ಲಿ ವ್ಯಕ್ತಿಯೊಬ್ಬ ಸಿಕ್ಕಿಬಿದ್ದಿರುವ ಘಟನೆ ಉತ್ತರ ಪ್ರದೇಶದ ಬಹ್ರೈಚ್‌ನಲ್ಲಿ ನಡೆದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಫಖ್ರ್‌ಪುರ ಪ್ರದೇಶದ ಉಮ್ರಿ ದೆಹಲೋ ಗ್ರಾಮದಲ್ಲಿ ಗುರುವಾರ ರಾತ್ರಿ ಈ ಘಟನೆ ನಡೆದಿದೆ. ಸ್ಥಳೀಯ ನಿವಾಸಿ ಪ್ರದೀಪ್ ಕುಡಿದ ಮತ್ತಿನಲ್ಲಿ ಬಲೆಗೆ ಬಿದ್ದಿದ್ದಾನೆ ಎನ್ನಲಾಗಿದೆ. ಆತ ಬೋನಿನ ಒಳಗೆ ಕಾಲಿಟ್ಟ ತಕ್ಷಣ, ಸ್ವಯಂಚಾಲಿತ ಬಾಗಿಲು ಮುಚ್ಚಿಕೊಂಡಿದೆ. ಆಗ ಆತ ಬೋನಿನಲ್ಲಿ ಸಿಲುಕಿದ್ದಾನೆ ಎಂದು ಅವರು ಹೇಳಿದ್ದಾರೆ.
ಸಿಕ್ಕಿಬಿದ್ದ ವ್ಯಕ್ತಿ ಸಹಾಯಕ್ಕಾಗಿ ಕೂಗಿದ್ದಾನೆ. ಮೊಬೈಲ್ ಫೋನ್ ಮೂಲಕ ಕರೆ ಮಾಡಿ ಗ್ರಾಮಸ್ಥರನ್ನು ಸಂಪರ್ಕಿಸಿದ್ದಾನೆ. ಬಳಿಕ, ಗ್ರಾಮದ ಮುಖ್ಯಸ್ಥರು, ಅರಣ್ಯ ಇಲಾಖೆ ಮತ್ತು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.
ಅರಣ್ಯ ಅಧಿಕಾರಿಗಳು ಮತ್ತು ಪೊಲೀಸರ ಜಂಟಿ ತಂಡ ಸ್ಥಳಕ್ಕೆ ಆಗಮಿಸಿ ವ್ಯಕ್ತಿಯನ್ನು ಸುರಕ್ಷಿತವಾಗಿ ಹೊರಗೆ ಕರೆತಂದಿದ್ದಾರೆ. ಸುಮಾರು ಎರಡು ಗಂಟೆಗಳ ಕಾಲ ಈ ಕಾರ್ಯಾಚರಣೆ ನಡೆದಿದೆ. ಬಳಿಕ, ಆತನನ್ನು ಪೊಲೀಸ್ ಠಾಣೆಗೆ ಕರೆದೊಯ್ದು ಎಚ್ಚರಿಕೆ ನೀಡಿ ಬಿಟ್ಟು ಕಳುಹಿಸಲಾಗಿದೆ ಎಂದು ವಿಭಾಗೀಯ ಅರಣ್ಯ ಅಧಿಕಾರಿ(ಡಿಎಫ್‌ಒ) ರಾಮ್ ಸಿಂಗ್ ಯಾದವ್ ಪಿಟಿಐಗೆ ತಿಳಿಸಿದ್ದಾರೆ.
ಆ ವ್ಯಕ್ತಿ ಮದ್ಯದ ಅಮಲಿನಲ್ಲಿದ್ದಂತೆ ಕಂಡುಬಂದಿದೆ ಎಂದು ಯಾದವ್ ಹೇಳಿದ್ದಾರೆ. ಕುತೂಹಲದಿಂದಲೋ ಅಥವಾ ಬೇರೆ ಯಾವುದೋ ಕಾರಣದಿಂದಾಗಿಯೋ ಆತ ಬೋನಿಗೆ ಏಕೆ ಪ್ರವೇಶಿಸಿದನು ಎಂಬುದು ಸ್ಪಷ್ಟವಾಗಿಲ್ಲ. ಆದರೆ, ಅವನ ಕೃತ್ಯ ಖಂಡಿತವಾಗಿಯೂ ತಪ್ಪಾಗಿತ್ತು. ರಾತ್ರಿ ಸಮಯ ಚಿರತೆಗಳು ಹೆಚ್ಚು ಚಟುವಟಿಕೆಯಿದಿರುತ್ತವೆ. ಆ ಸಮಯ.ಗ್ರಾಮಸ್ಥರು ಮನೆಯೊಳಗೇ ಇರಬೇಕೆಂದು ನಾವು ಎಚ್ಚರಿಕೆ ನೀಡಿದ್ದೇವೆ. ಈ ಅತ್ಯಂತ ಅಪಾಯಕಾರಿ ವಲಯದಲ್ಲಿ ಅಲೆದಾಡುವವರು ವನ್ಯಜೀವಿಗಳ ದಾಳಿಗೆ ಗುರಿಯಾಗುವ ಅಪಾಯವಿದೆ ಎಂದು ಅವರು ಹೇಳಿದ್ದಾರೆ.
ಬುಧವಾರ ಸಂಜೆ ಚಿರತೆ ದಾಳಿಯಲ್ಲಿ 55 ವರ್ಷದ ಶಾಂತಿ ದೇವಿ ಎಂಬ ಮಹಿಳೆ ಸಾವಿಗೀಡಾಗಿದ್ದು, ಚಿರತೆಯನ್ನು ಸೆರೆಹಿಡಿಯಲು, ಗ್ರಾಮದ ಹೊರವಲಯದಲ್ಲಿ ಒಂದು ಬೋನನ್ನು ಇಡಲಾಗಿತ್ತು. ಅದರೊಳಗೆ ಒಂದು ಮೇಕೆಯನ್ನು ಕಟ್ಟಲಾಗಿತ್ತು ಎಂದು ಡಿಎಫ್‌ಒ ಹೇಳಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.