ADVERTISEMENT

‘ಮ್ಯಾನ್‌ ವರ್ಸಸ್‌ ವೈಲ್ಡ್‌’ ಪ್ರಸಾರ

​ಪ್ರಜಾವಾಣಿ ವಾರ್ತೆ
Published 12 ಆಗಸ್ಟ್ 2019, 20:11 IST
Last Updated 12 ಆಗಸ್ಟ್ 2019, 20:11 IST
ಟಿ.ವಿಯಲ್ಲಿ ಕಾರ್ಯಕ್ರಮ ವೀಕ್ಷಣೆ ವೇಳೆ ಸೆಲ್ಫಿ ಕ್ಲಿಕ್ಕಿಸಿದ ಯುವತಿ –ಎಎಫ್‌ಪಿ ಚಿತ್ರ
ಟಿ.ವಿಯಲ್ಲಿ ಕಾರ್ಯಕ್ರಮ ವೀಕ್ಷಣೆ ವೇಳೆ ಸೆಲ್ಫಿ ಕ್ಲಿಕ್ಕಿಸಿದ ಯುವತಿ –ಎಎಫ್‌ಪಿ ಚಿತ್ರ   

ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರು ಭಾಗವಹಿಸಿದ್ದ‘ಮ್ಯಾನ್‌ ವರ್ಸಸ್‌ ವೈಲ್ಡ್‌’ ಕಾರ್ಯಕ್ರಮ ಡಿಸ್ಕವರಿ ಚಾನೆಲ್‌ನಲ್ಲಿ ಸೋಮವಾರ ರಾತ್ರಿ 9 ಗಂಟೆಗೆ ಪ್ರಸಾರವಾಯಿತು. ನಿರೂಪಕ ಬೇರ್‌ ಗ್ರಿಲ್ಸ್ ಅವರು ಈ ಕಾರ್ಯಕ್ರಮ ನಡೆಸಿಕೊಟ್ಟರು. ಪ್ರಪಂಚದ 180 ದೇಶಗಳಲ್ಲಿ ಈ ಕಾರ್ಯಕ್ರಮ ಪ್ರಸಾರವಾಯಿತು.

ಅರಣ್ಯದಲ್ಲಿ ಗ್ರಿಲ್ಸ್‌ ಅವರೊಂದಿಗೆ ನಡೆಯುತ್ತಾ, ಬೋಟ್‌ನಲ್ಲಿ ನದಿ ದಾಟುವ ಸಾಹಸದಲ್ಲಿ ಪ್ರಧಾನಿ ಭಾಗವಹಿಸಿದ್ದರು. ರಾಜಕೀಯ ಕಾರ್ಯಕ್ರಮ ಹೊರತಾಗಿ ‘ಮ್ಯಾನ್‌ ವರ್ಸಸ್‌ ವೈಲ್ಡ್‌’ನಲ್ಲಿ ವಿಭಿನ್ನವಾಗಿ ಮೋದಿ ಕಾಣಿಸಿಕೊಂಡರು.

‘ಜನರ ಆಶೋತ್ತರ ಈಡೇರಿಸುವುದು ನನಗೆ ಸಂತಸ ನೀಡುತ್ತದೆ. ಅಭಿವೃದ್ಧಿ ಮೇಲೆ ನನ್ನ ಗಮನ’ ಎಂದು ಕಾರ್ಯಕ್ರಮದ ಸಂಭಾಷಣೆಯೊಂದರಲ್ಲಿ ಪ್ರಧಾನಿ ಹೇಳಿದ್ದಾರೆ.

ADVERTISEMENT

‘ಮೋದಿ ಅವರ ಬಾಲ್ಯ, ಪ್ರಧಾನಿಯಾಗಿ ಕನಸುಗಳು, ಯಾವುದಕ್ಕಾದರೂ ಭಯಗೊಂಡಿದ್ದು ಉಂಟೇ’ ಎಂದು ಗ್ರಿಲ್ಸ್‌ ಪ್ರಶ್ನಿಸಿದರು.

ಕಾರ್ಯಕ್ರಮ ವೀಕ್ಷಿಸಲು ಮನವಿ ಮಾಡಿದ್ದ ಪ್ರಧಾನಿ: ಕಾರ್ಯಕ್ರಮ ಪ್ರಸಾರವಾಗುವುದಕ್ಕಿಂತಲೂ ಮೊದಲು ಇದನ್ನು ವೀಕ್ಷಿಸುವಂತೆ ಪ್ರಧಾನಿ ಮನವಿ ಮಾಡಿದ್ದರು.

‘ಪರಿಸರ ಸಂರಕ್ಷಣೆ ಮತ್ತು ಹವಾಮಾನ ಬದಲಾವಣೆ ಕಡೆಗೆ ನಾವು ಗಮನ ಕೊಡೋಣ. ಇಂದು ರಾತ್ರಿ 9 ಗಂಟೆಗೆ ನೋಡೋಣ’ ಎಂದು ಮೋದಿ ಟ್ವೀಟ್‌ ಮಾಡಿದ್ದರು. ಕಾರ್ಯಕ್ರಮ ನಿರೂಪಕ ಗ್ರಿಲ್ಸ್‌ ಅವರೂ ವೀಕ್ಷಣೆ ಮಾಡುವಂತೆ ಮನವಿ ಮಾಡಿದ್ದರು. ಪ್ರಧಾನಿ ಜತೆಗಿನ ಪಯಣದಲ್ಲಿ ನೀವೂ ಜೊತೆಯಾಗಿ ಎಂದು ಹೇಳಿದ್ದರು.

‘ಈ ಗ್ರಹವನ್ನು ಉಳಿಸಲು ಎಲ್ಲರೂ ಸೇರೋಣ. ಶಾಂತಿ ಮತ್ತು ಪ್ರೋತ್ಸಾಹವನ್ನು ಉತ್ತೇಜಿಸೋಣ. ಯಾವುದೇ ಕಾರಣಕ್ಕೂ ಸ್ಫೂರ್ತಿ ಕಳೆದುಕೊಳ್ಳದಿರೋಣ. ಕಾರ್ಯಕ್ರಮ ನೋಡಿ ಖುಷಿಪಡಿ’ ಎಂದು ಗ್ರಿಲ್ಸ್‌ ಟ್ವೀಟ್‌ ಮಾಡಿದ್ದರು.

ಮಂಗಳವಾರ ರಾತ್ರಿ 9 ಗಂಟೆಗೆ ಇದೇ ಕಾರ್ಯಕ್ರಮ ದೂರದರ್ಶನದಲ್ಲಿ ಪ್ರಸಾರವಾಗಲಿದೆ ಎಂದು ಕೇಂದ್ರ ಸಚಿವ ಜಾವಡೇಕರ್‌ ಟ್ವೀಟ್‌ ಮಾಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.