
ನವದೆಹಲಿ: ಬೀದಿ ನಾಯಿ ಹಾವಳಿ ಪ್ರಕರಣಕ್ಕೆ ಸಂಬಂಧಿಸಿದ ನ್ಯಾಯಾಲಯದ ಆದೇಶವನ್ನು ಟೀಕಿಸುವ ಮೂಲಕ ಕೇಂದ್ರದ ಮಾಜಿ ಸಚಿವೆ ಮನೇಕಾ ಗಾಂಧಿ ಅವರು ನ್ಯಾಯಾಂಗ ನಿಂದನೆ ಮಾಡಿದ್ದಾರೆ ಎಂದು ಸುಪ್ರೀಂ ಕೋರ್ಟ್ ಮಂಗಳವಾರ ಅವರನ್ನು ತರಾಟೆಗೆ ತೆಗೆದುಕೊಂಡಿತು.
ನ್ಯಾಯಮೂರ್ತಿಗಳಾದ ವಿಕ್ರಮ್ ನಾಥ್, ಸಂದೀಪ್ ಮೆಹ್ತಾ ಮತ್ತು ಎನ್.ವಿ.ಅಂಜಾರಿಯಾ ಅವರಿದ್ದ ನ್ಯಾಯಪೀಠವು, ‘ಮನೇಕಾ ಗಾಂಧಿ ಅವರ ವಿರುದ್ಧ ನ್ಯಾಯಾಂಗ ನಿಂದನೆ ಪ್ರಕರಣ ದಾಖಲಿಸದೆ ಕ್ಷಮಿಸುತ್ತೇವೆ. ಇದು ನ್ಯಾಯಾಲಯದ ಔದಾರ್ಯ’ ಎಂದು ಹೇಳಿತು.
‘ಮನೇಕಾ ಅವರು ಯೋಚಿಸದೆಯೇ ಪ್ರತಿಯೊಬ್ಬರ ವಿರುದ್ಧ ಎಲ್ಲಾ ರೀತಿಯ ಹೇಳಿಕೆ ನೀಡುತ್ತಾರೆ. ನಿಮ್ಮ ಕಕ್ಷಿದಾರರು ಯಾವ ರೀತಿಯ ಹೇಳಿಕೆ ನೀಡಿದ್ದಾರೆ ಎಂದು ಗೊತ್ತೇ? ಅವರ ಪಾಡ್‌ಕಾಸ್ಟ್ ಕೇಳಿದ್ದೀರಾ? ಅವರ ನಡವಳಿಕೆ, ಹಾವ–ಭಾವವನ್ನು ಗಮನಿಸಿದ್ದೀರಾ?’ ಎಂದು ಮನೇಕಾ ಗಾಂಧಿ ಅವರ ಪರ ವಕೀಲ ರಾಜು ರಾಮಚಂದ್ರನ್ ಅವರನ್ನು ನ್ಯಾಯಪೀಠ ಪ್ರಶ್ನಿಸಿತು.
ಇದಕ್ಕೆ ಪ್ರತಿಕ್ರಿಯಿಸಿದ ರಾಮಚಂದ್ರನ್ ಅವರು, ‘ಮನೇಕಾ ಗಾಂಧಿ ಅವರು ನ್ಯಾಯಾಂಗವನ್ನು ನಿಂದಿಸಿಲ್ಲ. ರಾಜಕಾರಣಿಗಳು ವಿವಿಧ ರೀತಿಯ ಹೇಳಿಕೆಗಳನ್ನು ನೀಡುತ್ತಾರೆ’ ಎಂದು ವಾದಿಸಿದರು.
‘2008ರಲ್ಲಿ ಮುಂಬೈನಲ್ಲಿ ನಡೆದ ಭಯೋತ್ಪಾದಕ ದಾಳಿಯ ದೋಷಿ ಅಜ್ಮಲ್ ಕಸಬ್ ಪರವಾಗಿಯೂ ಕೋರ್ಟ್‌ನಲ್ಲಿ ವಾದಿಸಿದ್ದೆ. ಆ ಸಮಯದಲ್ಲಿ ಕಕ್ಷಿದಾರನ ಮನವಿಯನ್ನು ಕೋರ್ಟ್ ಮುಂದಿಡಲಾಗಿತ್ತು’ ಎಂದು ಹೇಳಿದರು.
ನ್ಯಾಯಮೂರ್ತಿ ನಾಥ್ ಅವರು, ‘ಮನೇಕಾ ಅವರಂತೆ ಕಸಬ್ ನ್ಯಾಯಾಂಗ ನಿಂದನೆ ಮಾಡಿರಲಿಲ್ಲ’ ಎಂದು ತೀಕ್ಷ್ಣವಾಗಿ ಪ್ರತಿಕ್ರಿಯಿಸಿದರು.
‘ನಿಮ್ಮ ಕಕ್ಷಿದಾರರು ಮಾಜಿ ಸಚಿವರು, ಪ್ರಾಣಿಗಳ ಹಕ್ಕುಗಳ ಹೋರಾಟಗಾರ್ತಿ ಹಾಗೂ ದೀರ್ಘಕಾಲದಿಂದ ಸಂಸದೆ. ಹೀಗಿದ್ದರೂ ಬಜೆಟ್ ಅನುದಾನ ಮೀಸಲಿನ ಬಗ್ಗೆ ಅವರು ಏಕೆ ಮೌನವಾಗಿದ್ದಾರೆ? ಇಂಥ ಸಮಸ್ಯೆಗಳ ಪರಿಹಾರಕ್ಕೆ ಅವರ ಕೊಡುಗೆ ಏನು’ ಎಂದು ನ್ಯಾಯಮೂರ್ತಿ ಮೆಹ್ತಾ ಅವರು ಪ್ರಶ್ನಿಸಿದರು.
‘ಇಂಥ ಪ್ರಶ್ನೆಗಳಿಗೆ ನಾನು ಉತ್ತರ ನೀಡಲಾಗುವುದಿಲ್ಲ’ ಎಂದು ರಾಮಚಂದ್ರನ್ ಪ್ರತಿಕ್ರಿಯಿಸಿದರು.
ಬೀದಿ ನಾಯಿ ಹಾವಳಿ ಕುರಿತ ಸುಪ್ರೀಂ ಕೋರ್ಟ್ ಆದೇಶವು ಪಕ್ಷಪಾತಿಯಾಗಿದೆ ಎಂದು ಮನೇಕಾ ಗಾಂಧಿ ಅವರು ಟೀಕಿಸಿದ್ದರು ಮತ್ತು ಅವುಗಳ ಬಗ್ಗೆ ಸಹಾನುಭೂತಿ ತೋರಿಸುವಂತೆ ಮನವಿ ಮಾಡಿದ್ದರು.