ADVERTISEMENT

ಮಣಿಪುರ ಚುನಾವಣೆ | ಹಲವು ಭಾಗಗಳಲ್ಲಿ ಘರ್ಷಣೆ; ಅಪರಿಚಿತರ ಗುಂಡೇಟಿಗೆ ಇಬ್ಬರ ಬಲಿ

ಸಂಜೆ 5 ಗಂಟೆವರೆಗೆ ಶೇ 76.62ರಷ್ಟು ಮತದಾನ; ಹಲವೆಡೆ ಘರ್ಷಣೆ

​ಪ್ರಜಾವಾಣಿ ವಾರ್ತೆ
Published 6 ಮಾರ್ಚ್ 2022, 4:25 IST
Last Updated 6 ಮಾರ್ಚ್ 2022, 4:25 IST
ಸೇನಾಪತಿ ಜಿಲ್ಲೆಯ ತೋಬಿಫಿ ಗ್ರಾಮದಲ್ಲಿ ಚುನಾವಣಾ ಹಿಂಸಾಚಾರದ ವೇಳೆ ವಾಹನವೊಂದು ಜಖಂಗೊಂಡಿದೆ–ಪಿಟಿಐ ಚಿತ್ರ
ಸೇನಾಪತಿ ಜಿಲ್ಲೆಯ ತೋಬಿಫಿ ಗ್ರಾಮದಲ್ಲಿ ಚುನಾವಣಾ ಹಿಂಸಾಚಾರದ ವೇಳೆ ವಾಹನವೊಂದು ಜಖಂಗೊಂಡಿದೆ–ಪಿಟಿಐ ಚಿತ್ರ   

ಇಂಫಾಲ್: ಹಿಂಸಾಚಾರದ ನಡುವೆಯೇ ಮಣಿಪುರ ವಿಧಾನಸಭೆಗೆ ಶನಿವಾರ ಕೊನೆಯ ಹಂತದ ಮತದಾನ ನಡೆಯಿತು. ಸಂಜೆ 5 ಗಂಟೆವರೆಗೆ ಶೇ 76.62ರಷ್ಟು ಮತದಾನವಾಗಿದೆ. ಮತದಾನ ಆರಂಭಕ್ಕೂ ಮುನ್ನ ಹಾಗೂ ನಂತರ ಹಲವು ಭಾಗಗಳಲ್ಲಿ ಘರ್ಷಣೆ ನಡೆದಿವೆ.

ಆರು ಜಿಲ್ಲೆಗಳ 22 ವಿಧಾನಸಭಾ ಕ್ಷೇತ್ರಗಳಿಗೆ ಮತದಾನ ನಡೆಯಿತು. ಕಾಂಗ್ರೆಸ್ ‘ಭದ್ರಕೋಟೆ’ ಎನಿಸಿರುವ ತೌಬಲ್ ಜಿಲ್ಲೆಯ ವಾಂಗ್‌ಜಿಂಗ್ ತೆಂಥ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿಮತದಾನ ಆರಂಭವಾಗುವ ಮುನ್ನ, ಅಂದರೆ ಬೆಳಿಗ್ಗೆ 6 ಗಂಟೆಯ ಸಮಯದಲ್ಲಿ ಅಪರಿಚಿತರ ಗುಂಡೇಟಿಗೆ ಬಿಜೆಪಿ ಕಾರ್ಯಕರ್ತರೊಬ್ಬರು ಬಲಿಯಾಗಿದ್ದಾರೆ. ಗುಂಡೇಟಿನಿಂದ ಗಾಯಗೊಂಡಿದ್ದ ಎಲ್. ಅಮುಬಾ ಸಿಂಗ್ ಅವರು ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದರು.

ಸೇನಾಪತಿ ಜಿಲ್ಲೆಯ ಕರೋಂಗ್ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಮತ್ತೊಬ್ಬ ವ್ಯಕ್ತಿ ಮೃತಪಟ್ಟಿದ್ದಾರೆ. ನಗಂಜುಎಂಬ ಗ್ರಾಮದಲ್ಲಿ ಇವಿಎಂ ಹೊತ್ತೊಯ್ಯುತ್ತಿದ್ದ ಇಬ್ಬರ ಮೇಲೆ ಭದ್ರತಾ ಸಿಬ್ಬಂದಿ ಗುಂಡು ಹಾರಿಸಿದ್ದಾರೆ. ಗುಂಡೇಟಿನಿಂದ ಒಬ್ಬ ಮೃತಪಟ್ಟಿ
ದ್ದಾರೆ.ಈ ಘಟನೆಯ ಬಗ್ಗೆ ನ್ಯಾಯಾಂಗ ತನಿಖೆ ನಡೆಸಬೇಕು ಎಂದು ಬಿಜೆಪಿ ಅಭ್ಯರ್ಥಿ ಆಗ್ರಹಿಸಿದ್ದಾರೆ.

ADVERTISEMENT

ಬಿಜೆಪಿಯಿಂದ ಉಚ್ಚಾಟನೆಗೊಂಡಿದ್ದ ಮುಖಂಡ ಬಿಜೈ ಅವರ ಮನೆಯ ಹೊರಗಡೆ ಕಚ್ಚಾ ಬಾಂಬ್ ಸ್ಫೋಟಗೊಂಡಿದೆ.ಇಂಫಾಲ್ ಪಶ್ಚಿಮ ಜಿಲ್ಲೆಯ ಲಾಂಫಲ್ ಪ್ರದೇಶದಲ್ಲಿ ಶುಕ್ರವಾರ ತಡರಾತ್ರಿ ಈ ಘಟನೆ ನಡೆದಿದೆ. ಬೈಕ್‌ನಲ್ಲಿ ಬಂದಿದ್ದ ಇಬ್ಬರು ಮುಸುಕುಧಾರಿಗಳು ಬಾಂಬ್ ಎಸೆದಿದ್ದಾರೆ. ಬಾಂಬ್‌ ಸ್ಫೋಟದಲ್ಲಿ ಯಾರೂ ಗಾಯಗೊಂಡಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.

ಎರಡನೇ ಹಾಗೂ ಕೊನೆಯ ಹಂತದ ಚುನಾವಣಾ ಕಣದಲ್ಲಿದ್ದವರ ಪೈಕಿ ಕಾಂಗ್ರೆಸ್ ಮುಖಂಡ ಒಕ್ರಮ್ ಐಬೊಬಿ ಸಿಂಗ್ ಅವರು ಪ್ರಮುಖರಾಗಿದ್ದಾರೆ.ಫೆ.28ರಂದು ನಡೆದ ಮೊದಲ ಹಂತದ ಮತದಾನದಲ್ಲೂ ಹಿಂಸಾಚಾರ ನಡೆದಿತ್ತು. ಶೇ 88.63ರಷ್ಟು
ಮತದಾನವಾಗಿತ್ತು.

*

ಕಾಂಗ್ರೆಸ್ ಪಕ್ಷ ಈ ಬಾರಿ ಮಣಿಪುರದಲ್ಲಿ ಸರ್ಕಾರ ರಚಿಸಲಿದೆ. ಬಹುಮತಕ್ಕೆ ಒಂದೆರಡು ಸ್ಥಾನ ಕೊರತೆಯಾದಲ್ಲಿ, ಮೈತ್ರಿ ಮಾಡಿಕೊಳ್ಳಲಾಗುವುದು.
-ಒಕ್ರಮ್ ಐಬೊಬಿ ಸಿಂಗ್,ಕಾಂಗ್ರೆಸ್ ಮುಖಂಡ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.