
ನವದೆಹಲಿ: 2023ರ ಮಣಿಪುರ ಜನಾಂಗೀಯ ಸಂಘರ್ಷದಲ್ಲಿ ಮಾಜಿ ಮುಖ್ಯಮಂತ್ರಿ ಎನ್.ಬಿರೇನ್ ಸಿಂಗ್ ಅವರ ಪಾತ್ರವಿದೆ ಎಂಬ ಆರೋಪಕ್ಕೆ ಸಂಬಂಧಿಸಿದ ಸಂಪೂರ್ಣ 48 ನಿಮಿಷಗಳ ಆಡಿಯೊ ತುಣುಕನ್ನು ವಿಧಿವಿಜ್ಞಾನ ಪರೀಕ್ಷೆಗೆ ಒಳಪಡಿಸಲು ಸುಪ್ರೀಂ ಕೋರ್ಟ್ ಬುಧವಾರ ಆದೇಶಿಸಿದೆ.
ನ್ಯಾಯಮೂರ್ತಿಗಳಾದ ಸಂಜಯ್ ಕುಮಾರ್ ಮತ್ತು ಕೆ.ವಿನೋದ್ ಚಂದ್ರನ್ ಅವರನ್ನೊಳಗೊಂಡ ಪೀಠವು ಈ ಆದೇಶ ಹೊರಡಿಸಿದೆ.
‘ಚರ್ಚೆಗೆ ಗ್ರಾಸವಾಗಿರುವ 48 ನಿಮಿಷಗಳ ಸಂಭಾಷಣೆಯ ಸಂಪೂರ್ಣ ಆಡಿಯೊ ತುಣುಕು ಹಾಗೂ ಬಿರೇನ್ ಅವರು ತಮ್ಮದೇ ಧ್ವನಿ ಎಂದು ಒಪ್ಪಿಕೊಂಡಿರುವ ಆಡಿಯೊ ತುಣುಕು ಈಗಾಗಲೇ ಲಭ್ಯವಿವೆ. ಇವುಗಳ ಜತೆಗೆ ಅರ್ಜಿದಾರರು ಒದಗಿಸಿದ ಸೋರಿಕೆಯಾಗಿದೆ ಎನ್ನಲಾದ ಆಡಿಯೊ ತುಣುಕು ಸೇರಿಸಿ ಎಲ್ಲವನ್ನೂ ಗಾಂಧಿನಗರದ ರಾಷ್ಟ್ರೀಯ ವಿಧಿವಿಜ್ಞಾನ ವಿಶ್ವವಿದ್ಯಾಲಯಕ್ಕೆ (ಎನ್‌ಎಫ್‌ಎಸ್‌ಯು) ಕಳುಹಿಸಬೇಕು’ ಎಂದು ಪೀಠ ಆದೇಶಿಸಿದೆ.
ಜತೆಗೆ ಆಡಿಯೊ ತುಣುಕನ್ನು ತ್ವರಿತವಾಗಿ ಪರೀಕ್ಷಿಸಿ, ಈ ಸಂಬಂಧಿಸಿದ ವರದಿಯನ್ನು ಮುಚ್ಚಿದ ಲಕೋಟೆಯಲ್ಲಿ ಸಲ್ಲಿಸುವಂತೆ ಎನ್‌ಎಫ್‌ಎಸ್‌ಯುಗೆ ಪೀಠ ನಿರ್ದೇಶಿಸಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.