ADVERTISEMENT

ಮಣಿಪುರದ ಪತ್ರಕರ್ತ ಕಿಶೋರ್‌ ಚಂದ್ರ ಬಿಡುಗಡೆ

ಹಸುವಿನ ಸಗಣಿ ಬಗ್ಗೆ ಫೇಸ್‌ಬುಕ್‌ನಲ್ಲಿ ಪೋಸ್ಟ್‌ ಹಾಕಿದ್ದಕ್ಕೆ ಬಂಧನ

​ಪ್ರಜಾವಾಣಿ ವಾರ್ತೆ
Published 23 ಜುಲೈ 2021, 13:48 IST
Last Updated 23 ಜುಲೈ 2021, 13:48 IST
ಸಾಂಕೇತಿಕ ಚಿತ್ರ
ಸಾಂಕೇತಿಕ ಚಿತ್ರ   

ಗುವಾಹಟಿ: ಹಸುವಿನ ಸಗಣಿಗೆ ಸಂಬಂಧಿಸಿದಂತೆ ಫೇಸ್‌ಬುಕ್‌ ಖಾತೆಯಲ್ಲಿ ಪೋಸ್ಟ್‌ ಹಾಕಿಕೊಂಡಿದ್ದ ಕಾರಣಕ್ಕೆ ಎನ್‌ಎಸ್‌ಎ ಕಾಯ್ದೆಯಡಿ ಬಂಧಿಸಲ್ಪಿಟ್ಟಿದ್ದ ಮಣಿಪುರದ ಪತ್ರಕರ್ತ ಕಿಶೋರ್‌ ಚಂದ್ರ ವಾಂಗ್‌ಖೇಮ್‌ ಅವರನ್ನು ಹೈಕೋರ್ಟ್‌ ಆದೇಶದ ಅನ್ವಯ ಶುಕ್ರವಾರ ಬಿಡುಗಡೆಗೊಳಿಸಲಾಗಿದೆ.

ಈ ಪ್ರಕರಣದಲ್ಲಿ ಮಧ್ಯಪ್ರವೇಶಿಸುವಂತೆ ಕೋರಿ ಕಿಶೋರ್ ಚಂದ್ರ ಅವರ ಪತ್ನಿ ಎಲಂಗ್‌ಬಾಮ್‌ ರಂಜಿತಾ ಅವರು ಗುರುವಾರ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದರು.

ಜುಲೈ 23 ಸಂಜೆ ಒಳಗೆ ಕಿಶೋರ್‌ ಚಂದ್ರ ಅವರನ್ನು ಬಿಡುಗಡೆಗೊಳಿಸುವಂತೆ ಹೈಕೋರ್ಟ್‌ ಮಧ್ಯಂತರ ಆದೇಶ ಹೊರಡಿಸಿ, ₹ 1 ಸಾವಿರ ಬಾಂಡ್‌ ನೀಡುವಂತೆ ತಿಳಿಸಿತ್ತು.

ADVERTISEMENT

ಆಗಸ್ಟ್ 24 ರಂದು ಮುಂದಿನ ವಿಚಾರಣೆ ನಡೆಯಲಿದ್ದು, ಅಲ್ಲಿಯವರೆಗೆ ಮಣಿಪುರ ಸರ್ಕಾರ ಮೇ 17 ರಂದು ಹೊರಡಿಸಿದ್ದ ಎನ್ಎಸ್ಎ ಆದೇಶವನ್ನು ಅಮಾನತಿನಲ್ಲಿರಿಸಲಾಗಿದೆ ಎಂದು ನ್ಯಾಯಾಲಯ ತಿಳಿಸಿದೆ.

ಇದೇ ಪ್ರಕರಣದಲ್ಲಿ ಸಾಮಾಜಿಕ ಕಾರ್ಯಕರ್ತ ಎರೆಂಡ್ರೊ ಲೈಚೊಂಬಮ್‌ ಅವರನ್ನು ಬಂಧಿಸಲಾಗಿತ್ತು. ಅವರನ್ನು ತಕ್ಷಣ ಬಿಡುಗಡೆ ಮಾಡುವಂತೆ ಸುಪ್ರೀಂ ಕೋರ್ಟ್ ಕಳೆದ ಸೋಮವಾರ ಆದೇಶಿಸಿತ್ತು.

ಕೋವಿಡ್‌–19 ನಿಂದಾಗಿ ಸಾವಿಗೀಡಾಗಿದ್ದ ಮಣಿಪುರ ರಾಜ್ಯ ಬಿಜೆಪಿ ಮುಖ್ಯಸ್ಥ ಎಸ್‌. ಟೀಕೇಂದ್ರ ಸಿಂಗ್‌ ಅವರ ಸಾವಿಗೆ ಸಂತಾಪ ಸೂಚಿಸಿ ಫೇಸ್‌ಬುಕ್‌ನಲ್ಲಿ ಇಬ್ಬರೂ ಪ್ರತ್ಯೇಕವಾಗಿ ಹಾಕಿದ್ದ ಪೋಸ್ಟ್‌ಗಳಲ್ಲಿ ‘ಹಸುವಿನ ಸಗಣಿ ಮತ್ತು ಗೋಮೂತ್ರದಿಂದ ಕೋವಿಡ್‌–19 ಸಾಂಕ್ರಾಮಿಕ ವಾಸಿಯಾಗುವುದಿಲ್ಲ’ ಎಂದು ಬರೆದಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.