ಅಮಿತ್ ಶಾ
– ಪಿಟಿಐ ಚಿತ್ರ
ನವದೆಹಲಿ: ಮಣಿಪುರ ರಾಜ್ಯದಲ್ಲಿ ಮತ್ತೆ ಆರು ತಿಂಗಳು ರಾಷ್ಟ್ರಪತಿ ಆಡಳಿತ ವಿಸ್ತರಿಸುವ ಸಂಬಂಧ ಗೃಹ ಸಚಿವ ಅಮಿತ್ ಶಾ ಅವರು ಶುಕ್ರವಾರ ಸಂಸತ್ತಿನಲ್ಲಿ ನಿರ್ಣಯ ಮಂಡಿಸುವ ಸಾಧ್ಯತೆ ಇದೆ.
ಜನಾಂಗೀಯ ಸಂಘರ್ಷದಿಂದ ಜರ್ಜರಿತವಾಗಿರುವ ಮಣಿಪುರದಲ್ಲಿ ಮತ್ತೆ ರಾಷ್ಟ್ರಪತಿ ಆಡಳಿತ ವಿಸ್ತರಿಸಲಾಗುವುದು ಎಂದು ಬಿಜೆಪಿಯ ಮೂಲಗಳು ಖಚಿತಪಡಿಸಿವೆ.
ರಾಷ್ಟ್ರಪತಿ ಆಳ್ವಿಕೆಯನ್ನು ವಿಸ್ತರಿಸಲು ಅನುಮೋದನೆ ಕೋರಿ ರಾಜ್ಯಸಭೆಯಲ್ಲಿ ಶಾಸನಬದ್ಧ ನಿರ್ಣಯ ಮಂಡಿಸಲಿದ್ದಾರೆ.
ಕಳೆದ ಫೆಬ್ರವರಿ ತಿಂಗಳಲ್ಲಿ ಕೇಂದ್ರವು ಮಣಿಪುರದಲ್ಲಿ ರಾಷ್ಟ್ರಪತಿ ಆಳ್ವಿಕೆಯನ್ನು ವಿಧಿಸಿತ್ತು. ಸಂಸತ್ತಿನ ಅನುಮೋದನೆ ಬಳಿಕ 2026ರ ಫೆಬ್ರವರಿವರೆಗೆ ವಿಸ್ತರಿಸಲಾಗುವುದು.
2027ರವರೆಗೆ ಅಧಿಕಾರಾವಧಿ ಹೊಂದಿರುವ ಮಣಿಪುರ ವಿಧಾನಸಭೆಯನ್ನು ಅಮಾನತುಗೊಳಿಸಲಾಗಿದೆ.
ಮಣಿಪುರದಲ್ಲಿ 2023ರಿಂದ ಮೈತೇಯಿ ಮತ್ತು ಕುಕಿ ಸಮುದಾಯಗಳ ನಡುವೆ ಜನಾಂಗೀಯ ಸಂಘರ್ಷ ನಡೆಯುತ್ತಿದೆ. ಈವರೆಗೂ 250 ಕ್ಕೂ ಹೆಚ್ಚು ಜನರು ಸಾವನ್ನಪ್ಪಿದ್ದಾರೆ. ಆದಾಗ್ಯೂ ರಾಷ್ಟ್ರಪತಿ ಆಡಳಿತದ ನಂತರ ಹಿಂಸಾಚಾರದಲ್ಲಿ ಗಮನಾರ್ಹ ಇಳಿಕೆಯಾಗಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.
ಈ ನಡುವೆ ಕೇಂದ್ರ ಸರ್ಕಾರ ಎರಡು ಸಮುದಾಯಗಳ ಮುಖಂಡರ ಜೊತೆ ನಿರಂತರವಾಗಿ ಮಾತುಕತೆ ನಡೆಸುತ್ತಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.