ADVERTISEMENT

ಎಸ್‌ಒಒ ವಿಸ್ತರಣೆ; ಜನವಿರೋಧಿ ನಡೆ: ಮಣಿಪುರ ಏಕತೆ ಸಮನ್ವಯ ಸಮಿತಿ ಕಿಡಿ

​ಪ್ರಜಾವಾಣಿ ವಾರ್ತೆ
Published 5 ಸೆಪ್ಟೆಂಬರ್ 2025, 15:40 IST
Last Updated 5 ಸೆಪ್ಟೆಂಬರ್ 2025, 15:40 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಗುವಾಹಟಿ: ಗಲಭೆಪೀಡಿತ ಮಣಿಪುರದಲ್ಲಿ ಕುಕಿ ಸಂಘಟನೆಗಳೊಂದಿಗಿನ ಕಾರ್ಯಾಚರಣೆ ನಿಗ್ರಹ ಒಪ್ಪಂದವನ್ನು (ಎಸ್‌ಒಒ) ಕೇಂದ್ರ ಸರ್ಕಾರವು ವಿಸ್ತರಿಸಿದ ಒಂದು ದಿನದ ನಂತರ, ಬಹುಸಂಖ್ಯಾತ ಮೈತೇಯಿ ಸಮುದಾಯವನ್ನು ಪ್ರತಿನಿಧಿಸುವ ಪ್ರಭಾವಿ ಸಂಸ್ಥೆಗಳ ವೇದಿಕೆಯಾದ ‘ಮಣಿಪುರ ಏಕತೆ ಸಮನ್ವಯ ಸಮಿತಿ’ಯು (ಸಿಒಎಇಒಎಂಐ) ಇದನ್ನು ‘ಜನವಿರೋಧಿ ನಡೆ’ ಎಂದು ಕರೆದಿದೆ.

‘ಈ ಗುಂಪುಗಳು ಮಾಡಿದ ಭಯೋತ್ಪಾದಕ ಹಾಗೂ ಅಪರಾಧ ಕೃತ್ಯಗಳ ಹೊರತಾಗಿ ಎಸ್‌ಒಒ ವಿಸ್ತರಣೆಯು ಮಣಿಪುರದ ಸ್ಥಳೀಯ ಜನರ ಹಿತಾಸಕ್ತಿಗಳಿಗೆ ವಿರುದ್ಧವಾದ ನಿರ್ಧಾರವಾಗಿದೆ. ಕೇಂದ್ರ ಸರ್ಕಾರದ ಜನವಿರೋಧಿ ನಡೆಯನ್ನು ದೃಢವಾಗಿ ವಿರೋಧಿಸುವ ತನ್ನ ನಿಲುವನ್ನು ಸಿಒಸಿಒಎಂಐ ಪುನರುಚ್ಚರಿಸುತ್ತದೆ’ ಎಂದು ಸಮಿತಿಯ ಸಂಚಾಲಕ ಲೈಖುರಾಮ್‌ ಜಯೆಂತ ತನ್ನ ಹೇಳಿಕೆಯಲ್ಲಿ ತಿಳಿಸಿದ್ದಾರೆ.

ಮೈತೇಯಿ ಮಹಿಳಾ ಜಾಗೃತ ಗುಂಪು ‘ಇಮಾಗಿ ಮೀರಾ’ ಸಹ ಎಸ್‌ಒಒ ವಿಸ್ತರಿಸಿರುವುದಕ್ಕೆ ಕೇಂದ್ರ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿದೆ.

ADVERTISEMENT

ಕನಿಷ್ಠ 25 ಬಂಡುಕೋರ ಗುಂಪುಗಳನ್ನು ಒಳಗೊಂಡ ಎರಡು ಪ್ರಮುಖ ವೇದಿಕೆಗಳಾದ ‘ಕುಕಿ ರಾಷ್ಟ್ರೀಯ ಸಂಘಟನೆ (ಕೆಎನ್‌ಒ)’ ಮತ್ತು ‘ಯುನೈಟೆಡ್ ಪೀಪಲ್ಸ್‌ ಫ್ರಂಟ್ (ಯುಪಿಎಫ್)’ ಜೊತೆಗಿನ ಎಸ್‌ಒಒ ಒಪ್ಪಂದವನ್ನು ರದ್ದುಪಡಿಸಲು 2023ರ ಮಾರ್ಚ್‌ 10ರಂದು ಮಣಿಪುರ ಸಚಿವ ಸಂಪುಟ ಸಭೆಯು ತೆಗೆದುಕೊಂಡ ನಿರ್ಧಾರವನ್ನು ಸಿಒಸಿಒಎಂಐ 2024ರಲ್ಲಿ ಒತ್ತಿಹೇಳಿತ್ತು. ಕೆಎನ್‌ಒ ಮತ್ತು ಯುಪಿಎಫ್ 2008ರಿಂದ ಎಸ್‌ಒಒ ಅಡಿಯಲ್ಲಿದ್ದು, ಫೆಬ್ರುವರಿಯಲ್ಲಿ ಸ್ಥಗಿತಗೊಂಡಿತ್ತು. ಮೈತೇಯಿ ಸಂಘಟನೆಗಳ ವಿರೋಧದಿಂದಾಗಿ ಕೇಂದ್ರ ಸರ್ಕಾರವು ವಿಸ್ತರಣೆಯನ್ನು ವಿಳಂಬ ಮಾಡಿತ್ತು.

ಮಣಿಪುರದಲ್ಲಿ ಫೆಬ್ರುವರಿಯಿಂದ ರಾಷ್ಟ್ರಪತಿ ಆಳ್ವಿಕೆ ಜಾರಿಯಲ್ಲಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.