ADVERTISEMENT

ಮಣಿಪುರ ಹಿಂಸಾಚಾರ: ಇಂಫಾಲ್ ಕಣಿವೆಯಲ್ಲಿ 13 ದಿನಗಳ ಬಳಿಕ ಶಾಲಾ–ಕಾಲೇಜು ಪುನರಾರಂಭ

ಪಿಟಿಐ
Published 28 ನವೆಂಬರ್ 2024, 9:37 IST
Last Updated 28 ನವೆಂಬರ್ 2024, 9:37 IST
<div class="paragraphs"><p>ಮಣಿಪುರದಲ್ಲಿ ಭದ್ರತೆಗೆ ನಿಯೋಜನೆಗೊಂಡಿರುವ&nbsp;ಸೇನಾ ಸಿಬ್ಬಂದಿ</p></div>

ಮಣಿಪುರದಲ್ಲಿ ಭದ್ರತೆಗೆ ನಿಯೋಜನೆಗೊಂಡಿರುವ ಸೇನಾ ಸಿಬ್ಬಂದಿ

   

ಪಿಟಿಐ ಚಿತ್ರ

ಇಂಫಾಲ್‌: ಮಣಿಪುರದ ಇಂಫಾಲ್‌ ಕಣಿವೆ ವ್ಯಾಪ್ತಿಯ ಜಿಲ್ಲೆಗಳಲ್ಲಿ ಶಾಲಾ–ಕಾಲೇಜುಗಳು ಇಂದಿನಿಂದ (ನವೆಂಬರ್ 28) ಪುನರಾರಂಭಗೊಂಡಿವೆ. ಜಿರೀಬಾಮ್‌ನಲ್ಲಿ ನಾಳೆಯಿಂದ ತೆರೆಯಲಿವೆ ಎಂದು ರಾಜ್ಯ ಸರ್ಕಾರ ಗುರುವಾರ ಘೋಷಿಸಿದೆ.

ADVERTISEMENT

ಮೂವರು ಮಹಿಳೆಯರು ಹಾಗೂ ಮೂರು ಮಕ್ಕಳ ಮೃತದೇಹಗಳು ಜಿರೀಬಾಮ್‌ನಲ್ಲಿ ನವೆಂಬರ್‌ 16ರಂದು ಪತ್ತೆಯಾದ ಬಳಿಕ, ಈ ಜಿಲ್ಲೆಗಳಲ್ಲಿ 13 ದಿನಗಳಿಂದ ಶಾಲಾ–ಕಾಲೇಜುಗಳು ಬಂದ್‌ ಆಗಿದ್ದವು.

ಮಣಿಪುರ ಹಾಗೂ ಅಸ್ಸಾಂನಲ್ಲಿ ಹರಿಯುವ ಜಿರಿ ಮತ್ತು ಬರಾಕ್‌ ನದಿ ತಟದಲ್ಲಿ ಮೃತ ದೇಹಗಳು ಸಿಕ್ಕಿದ್ದವು.

ಶಾಲೆಗಳ ಪುನರಾರಂಭಕ್ಕೆ ಸಂಬಂಧಿಸಿದಂತೆ ಶಾಲಾ ಶಿಕ್ಷಣ ನಿರ್ದೇಶನಾಲಯ ಹೇಳಿಕೆ ಬಿಡುಗಡೆ ಮಾಡಿದ್ದು, 'ರಾಜ್ಯದ ಎಲ್ಲ ಸರ್ಕಾರಿ ಮತ್ತು ಅನುದಾನಿತ, ಖಾಸಗಿ ಮತ್ತು ಕೇಂದ್ರೀಯ ಶಾಲೆಗಳಲ್ಲಿ ಸಾಮಾನ್ಯ ತರಗತಿಗಳು ನವೆಂಬರ್‌ 29ರಿಂದ ಆರಂಭವಾಗಲಿವೆ' ಎಂದು ತಿಳಿಸಿದೆ.

ಉನ್ನತ ಮತ್ತು ತಾಂತ್ರಿಕ ಶಿಕ್ಷಣ ಇಲಾಖೆ ವ್ಯಾಪ್ತಿಗೆ ಬರುವ, ರಾಜ್ಯ ವಿಶ್ವ ವಿದ್ಯಾಲಯಗಳು ಸೇರಿದಂತೆ ಸರ್ಕಾರಿ ಶಿಕ್ಷಣ ಸಂಸ್ಥೆಗಳು ಅಥವಾ ಅನುದಾನಿತ ಕಾಲೇಜುಗಳು ನಾಳೆಯಿಂದ ಆರಂಭವಾಗಲಿವೆ ಎಂದು ಮತ್ತೊಂದು ಹೇಳಿಕೆಯಲ್ಲಿ ತಿಳಿಸಲಾಗಿದೆ.

ಜಿರೀಬಾಮ್‌ನಲ್ಲಿ ಭದ್ರತಾ ಪಡೆಗಳು ಮತ್ತು ಶಂಕಿತ ಕುಕಿ ಉಗ್ರರ ನಡುವೆ ನವೆಂಬರ್‌ 11 ರಂದು ಗುಂಡಿನ ಚಕಮಕಿ ನಡೆದಿತ್ತು. ಪರಿಣಾಮವಾಗಿ 10 ಮಂದಿ ಆಗಂತುಕರು ಹತ್ಯೆಯಾಗಿದ್ದರು. ಆದರೆ, ಈ ಪ್ರಕರಣದ ಬೆನ್ನಲ್ಲೇ, ಮೈತೇಯಿ ಸಮುದಾಯಕ್ಕೆ ಸೇರಿದವರಿದ್ದ ಪರಿಹಾರ ಶಿಬಿರಗಳಿಂದ ಮಹಿಳೆಯರು ಮತ್ತು ಮಕ್ಕಳು ನಾಪತ್ತೆಯಾಗಿದ್ದರು. ಅವರೆಲ್ಲರ ಶವಗಳು ಪತ್ತೆಯಾಗುತ್ತಿದ್ದಂತೆ, ಮಣಿಪುರದಲ್ಲಿ ಮತ್ತೆ ಹಿಂಸಾಚಾರ ಭುಗಿಲೆದ್ದಿತ್ತು.

ಹೀಗಾಗಿ, ಇಂಫಾಲ್‌ ಕಣಿವೆ ಜಿಲ್ಲೆಗಳು ಮತ್ತು ಜಿರೀಬಾಮ್‌ನಲ್ಲಿ ಗುರುವಾರದವರೆಗೆ ನಿಷೇಧಾಜ್ಞೆ ಹೇರಲಾಗಿತ್ತು ಎಂದು ಅಧಿಕಾರಿಯೊಬ್ಬರು ಹೇಳಿದ್ದಾರೆ.

'ಶುಕ್ರವಾರದಿಂದ ಕರ್ಫ್ಯೂ ಸಡಿಲಿಸಲಾಗುತ್ತದೆಯೇ, ಇಲ್ಲವೇ ಎಂಬುದು ಇನ್ನೂ ಸ್ಪಷ್ಟವಾಗಿಲ್ಲ. ಆ ಸಂಬಂಧ ಹೊಸದಾಗಿ ಯಾವುದೇ ಆದೇಶ ಬಂದಿಲ್ಲ' ಎಂದೂ ತಿಳಿಸಿದ್ದಾರೆ.

ಮೀಸಲಾತಿಗೆ ಸಂಬಂಧಿಸಿದಂತೆ ಕುಕಿ ಹಾಗೂ ಮೈತೇಯಿ ಸಮುದಾಯದವರ ನಡುವೆ ಕಳೆದ ವರ್ಷ ಮೇ ತಿಂಗಳಲ್ಲಿ ಆರಂಭವಾದ ಹಿಂಸಾಚಾರದಲ್ಲಿ ನೂರಾರು ಜನರು ಹತ್ಯೆಯಾಗಿದ್ದಾರೆ. ಸಾವಿರಾರು ಮಂದಿ ನಿರಾಶ್ರಿತರಾಗಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.