ಪ್ರಧಾನಿ ನರೇಂದ್ರ ಮೋದಿ ಹಾಗೂ ಕಾಂಗ್ರೆಸ್ ಧ್ವಜ
ನವದೆಹಲಿ: ಜನಾಂಗೀಯ ಹಿಂಸಾಚಾರ ಪೀಡಿತ ಮಣಿಪುರಕ್ಕೆ ಪ್ರಧಾನಿ ನರೇಂದ್ರ ಮೋದಿ ಅವರು ಸೆಪ್ಟೆಂಬರ್ 13ರಂದು ಭೇಟಿ ನೀಡುವ ಸಾಧ್ಯತೆ ಇದೆ. ಈ ನಡುವೆ ಕಾಂಗ್ರೆಸ್ ಪ್ರಧಾನಿ ಮೋದಿ ವಿರುದ್ಧ ಕಿಡಿಕಾರಿದ್ದು, ಮಣಿಪುರಕ್ಕೆ ಭೇಟಿ ನೀಡಲು ಇದೀಗ ಧೈರ್ಯ ಬಂದಿದೆಯೇ? ಎಂದು ವ್ಯಂಗ್ಯವಾಡಿದೆ.
‘ಕಳೆದ ಎರಡು ವರ್ಷಗಳಿಂದ ವಿದೇಶ ಸೇರಿದಂತೆ ಅಸ್ಸಾಂ, ಅರುಣಾಚಲ ಪ್ರದೇಶಗಳಿಗೆ ಭೇಟಿ ನೀಡಲು ಸಾಧ್ಯವಾಗುವ ಮೋದಿಗೆ ಮಣಿಪುರಕ್ಕೆ ಭೇಟಿ ನೀಡಲು ಸಾಧ್ಯವಾಗಿರಲಿಲ್ಲವೇ?, ಹಿಂಸಾಚಾರ ಪೀಡಿತ ಪ್ರದೇಶಗಳಿಗೆ ಭೇಟಿ ನೀಡಲು ಸಮಯ ಅಥವಾ ಒಲವು ಹೊಂದಿರಲಿಲ್ಲವೇ?' ಎಂದು ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಜೈರಾಮ್ ರಮೇಶ್ ಎಕ್ಸ್‌ನಲ್ಲಿ ಟೀಕಿಸಿದ್ದಾರೆ.
ಮಣಿಪುರಕ್ಕೆ ಭೇಟಿ ನೀಡಲು ಯೋಚಿಸಿರುವ ಮೋದಿ ಧೈರ್ಯ ಹಾಗೂ ಸಹಾನುಭೂತಿಯನ್ನು ಹೊಂದಿದ್ದಾರೆಯೇ?, ಆದರೆ ತುಂಬಾ ತಡವಾಗಿದೆ ಎಂದೂ ಜೈರಾಮ್ ಹೇಳಿದ್ದಾರೆ.
ಪ್ರಧಾನಿ ಮೋದಿ ಮಣಿಪುರವನ್ನು ಸಂಪೂರ್ಣವಾಗಿ ನಿರ್ಲಕ್ಷಿಸಿದ್ದಾರೆ. ಕೇಂದ್ರ ಗೃಹ ಸಚಿವ ಅಮಿತ್ ಶಾ ಅಸಮರ್ಥತೆಯಿಂದಾಗಿ ಮಣಿಪುರದ ಎಲ್ಲಾ ಸಮುದಾಯಗಳ ನೋವು, ಯಾತನೆ ಮತ್ತು ಸಂಕಟಕ್ಕೆ ಕಾರಣವಾಗಿದೆ ಎಂದು ಜೈರಾಮ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಮಣಿಪುರದಲ್ಲಿ 2023ರಿಂದ ಮೈತೇಯಿ ಮತ್ತು ಕುಕಿ ಸಮುದಾಯಗಳ ನಡುವೆ ನಡೆದ ಜನಾಂಗೀಯ ಸಂಘರ್ಷದಲ್ಲಿ ಈವರೆಗೂ 250 ಕ್ಕೂ ಹೆಚ್ಚು ಜನರು ಮೃತಪಟ್ಟಿದ್ದಾರೆ. ಸಾವಿರಾರು ಜನರು ನಿರಾಶ್ರಿತರಾದ್ದಾರೆ. ರಾಷ್ಟ್ರಪತಿ ಆಡಳಿತದ ನಂತರ ಹಿಂಸಾಚಾರದಲ್ಲಿ ಗಮನಾರ್ಹ ಇಳಿಕೆಯಾಗಿದೆ ಎಂದು ಅಧಿಕಾರಿಗಳು ಹೇಳಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.