ಮಿಜೋರಾಂನ ಐಜ್ವಾಲ್‌ನಲ್ಲಿ ಕಲ್ಲು ಗಣಿ ಕುಸಿದಿರುವ ಸ್ಥಳದಲ್ಲಿ ಶೋಧ ಕಾರ್ಯ ನಡೆದಿರುವುದು.
–ಪಿಟಿಐ ಚಿತ್ರ
ಐಜ್ವಾಲ್: ‘ರೀಮಲ್’ ಚಂಡಮಾರುತದ ಪರಿಣಾಮ ಸುರಿದ ಧಾರಾಕಾರ ಮಳೆ, ಭೂಕುಸಿತದಿಂದಾಗಿ ಮಿಜೋರಾಂನಲ್ಲಿ 29 ಮಂದಿ ಮೃತಪಟ್ಟಿದ್ದು, ಕೆಲವರು ನಾಪತ್ತೆಯಾಗಿದ್ದಾರೆಂದು ಬುಧವಾರ ಅಧಿಕಾರಿಗಳು ತಿಳಿಸಿದ್ದಾರೆ.
ಮಿಜೋರಾಂ ಐಜ್ವಾಲ್ ಜಿಲ್ಲೆಯಲ್ಲಿ ಕಲ್ಲುಗಣಿ ಕುಸಿತದಲ್ಲಿ ಮತ್ತೊಬ್ಬರು ಮೃತಪಟ್ಟಿದ್ದು, ಸಾವಿನ ಸಂಖ್ಯೆ 15ಕ್ಕೆ ಏರಿಕೆಯಾಗಿದೆ. ಕೆಲವರು ನಾಪತ್ತೆಯಾಗಿದ್ದಾರೆ. ಉಳಿದಂತೆ ರಾಜ್ಯದಲ್ಲಿ ಸಂಭವಿಸಿದ ಪ್ರತ್ಯೇಕ ಭೂಕುಸಿತ ಅವಘಡಗಳಲ್ಲಿ 14 ಮಂದಿ ಮೃತಪಟ್ಟಿದ್ದಾರೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಮಂಗಳವಾರ (ಮೇ 28) ತಡರಾತ್ರಿ ಭೂಕುಸಿತ ಸಂಬಂಧಿತ ಅವಘಡಗಳಲ್ಲಿ ಮತ್ತೆ 4 ಮೃತದೇಹಗಳು ಪತ್ತೆಯಾಗಿದ್ದರಿಂದ ಮೃತರ ಸಂಖ್ಯೆ 29ಕ್ಕೆ ಏರಿಕೆಯಾಗಿದೆ.
ಮೃತಪಟ್ಟ 29 ಜನರಲ್ಲಿ 23 ಮಂದಿ ಮಿಜೋರಾಂ, ಐವರು ಜಾರ್ಖಂಡ್‌ನವರು ಹಾಗೂ ಓರ್ವ ಅಸ್ಸಾಂನವರು ಎಂದು ಪೊಲೀಸ್ ವರಿಷ್ಠಾಧಿಕಾರಿ ರಹೂಲ್ ಅಲ್ವಾಲ್ ಹೇಳಿದ್ದಾರೆ.
ಲಿಮೆನ್‌ನಲ್ಲಿ ನಾಲ್ವರು, ಸಲೇಂನಲ್ಲಿ ಮೂವರು, ಫಾಲ್ಕ್ಹಾನ್ ಮತ್ತು ಐಬಾಕ್‌ನಲ್ಲಿ ತಲಾ ಇಬ್ಬರು, ಲುಂಗ್ಸೆ, ಕೆಲ್ಸಿಹ್‌ನಲ್ಲಿ ತಲಾ ಒಬ್ಬರು ಮೃತಪಟ್ಟಿದ್ದಾರೆ ಎಂದು ಅಧಿಕಾರಿಗಳು ಮಂಗಳವಾರ ಮಾಹಿತಿ ನೀಡಿದ್ದರು.
ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆ (ಎನ್‌ಡಿಆರ್‌ಎಫ್), ರಾಜ್ಯ ವಿಪತ್ತು ನಿರ್ವಹಣಾ ಪಡೆ (ಎಸ್‌ಡಿಆರ್‌ಎಫ್), ಪೊಲೀಸ್ ಮತ್ತು ಅಗ್ನಿಶಾಮಕ ದಳದ ತಂಡಗಳು ಶೋಧ ಹಾಗೂ ರಕ್ಷಣಾ ಕಾರ್ಯಾಚರಣೆಯಲ್ಲಿ ತೊಡಗಿವೆ ಎಂದು ಹೇಳಿದ್ದಾರೆ.
ಮಿಜೋರಾಂ ಮುಖ್ಯಮಂತ್ರಿ ಲಾಲ್ದುಹೋಮ ಮೃತಪಟ್ಟವರ ಕುಟುಂಬಗಳಿಗೆ ತಲಾ ₹4 ಲಕ್ಷ ಪರಿಹಾರ ಘೋಷಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.