ಮುಸ್ತಫಾಬಾದ್ ಪ್ರದೇಶದಲ್ಲಿ ಬಹುಮಹಡಿ ಕಟ್ಟಡ ಕುಸಿದು ಬಿದ್ದಿರುವುದು.
ನವದೆಹಲಿ: ರಾಜಧಾನಿಯ ಮುಸ್ತಾಫಾಬಾದ್ ಬಡಾವಣೆಯಲ್ಲಿ 4 ಮಹಡಿಗಳ ವಸತಿ ಕಟ್ಟಡವೊಂದು ಶನಿವಾರ ಬೆಳಗಿನ ಜಾವ ಕುಸಿದಿದೆ. 11 ಜನರು ಮೃತಪಟ್ಟಿದ್ದು, ಇತರೆ 11 ಮಂದಿ ಗಾಯಗೊಂಡಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಸತತ 12 ಗಂಟೆ ಕಾರ್ಯಾಚರಣೆ ನಡೆಸಿ ಅವಶೇಷಗಳನ್ನು ತೆರವುಗೊಳಿಸಲಾಯಿತು. ಕಟ್ಟಡದಲ್ಲಿ 22 ಮಂದಿ ವಾಸವಿದ್ದರು. ಮೃತರಲ್ಲಿ ಕಟ್ಟಡದ ಮಾಲೀಕ ತೆಹ್‌ಸೀನ್ ಮತ್ತು ಅವರ ಕುಟುಂಬದ ಆರು ಮಂದಿ ಸೇರಿದ್ದಾರೆ ಎಂದು ಅಧಿಕಾರಿಗಳು ವಿವರಿಸಿದ್ದಾರೆ.
20 ವರ್ಷ ಹಳೆಯದಾದ ಕಟ್ಟಡ ಕುಸಿದಿರುವ ಮಾಹಿತಿ ಬೆಳಗಿನ ಜಾವ 3 ಗಂಟೆಗೆ ಬಂದಿತ್ತು. ರಕ್ಷಣಾ ಕಾರ್ಯದಲ್ಲಿ ಎನ್‌ಡಿಆರ್‌ಎಫ್ ಸಿಬ್ಬಂದಿ, ಅಗ್ನಿಶಾಮಕ ಪಡೆ, ದೆಹಲಿ ಪೊಲೀಸರ ಜೊತೆಗೆ ಸ್ವಯಂಸೇವಕರು ಭಾಗಿಯಾಗಿದ್ದರು ಎಂದು ತಿಳಿಸಿದ್ದಾರೆ.
ಪಕ್ಕದಲ್ಲಿ ನಿರ್ಮಾಣ ಕಾರ್ಯ ನಡೆಯುತ್ತಿತ್ತು. ಇದೂ ಕುಸಿತಕ್ಕೆ ಕಾರಣವಾಗಿರಬಹುದು. ಈ ವಲಯದಲ್ಲಿ ಇದೂ ಸೇರಿ 4–5 ಕಟ್ಟಡಗಳು ಶಿಥಿಲಗೊಂಡಿದ್ದವು. ಹಲವು ವರ್ಷಗಳಿಂದ ನೀರು ಕೊಳವೆಗಳಿಂದ ಕಟ್ಟಡದ ಗೋಡೆಗಳಲ್ಲಿ ಸೋರಿಕೆಯಾಗಿ ಶಿಥಿಲವಾಗಿತ್ತು ಎಂದು ತಿಳಿಸಿದ್ದಾರೆ.
ದೆಹಲಿ ಮುಖ್ಯಮಂತ್ರಿ ರೇಖಾ ಗುಪ್ತ, ಅವಘಡ ಕುರಿತು ತನಿಖೆಗೆ ಆದೇಶಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.