ADVERTISEMENT

ಆಂಧ್ರ ಪ್ರದೇಶದಲ್ಲಿ ಭಾರಿ ಪ್ರವಾಹ: ಕನಿಷ್ಠ 30 ಸಾವು ಶಂಕೆ

ಏಜೆನ್ಸೀಸ್
Published 20 ನವೆಂಬರ್ 2021, 9:55 IST
Last Updated 20 ನವೆಂಬರ್ 2021, 9:55 IST
ಕಡಪ ಜಿಲ್ಲೆಯ ರಾಜಂಪೇಟೆ ಪ್ರದೇಶದಲ್ಲಿ ನೆರೆಯಲ್ಲಿ ಸಿಲುಕಿದ್ದ ವೃದ್ಧರೊಬ್ಬರನ್ನು ಪೊಲೀಸರು ರಕ್ಷಿಸಿದರು – ಪಿಟಿಐ ಚಿತ್ರ
ಕಡಪ ಜಿಲ್ಲೆಯ ರಾಜಂಪೇಟೆ ಪ್ರದೇಶದಲ್ಲಿ ನೆರೆಯಲ್ಲಿ ಸಿಲುಕಿದ್ದ ವೃದ್ಧರೊಬ್ಬರನ್ನು ಪೊಲೀಸರು ರಕ್ಷಿಸಿದರು – ಪಿಟಿಐ ಚಿತ್ರ   

ನವದೆಹಲಿ: ಆಂಧ್ರ ಪ್ರದೇಶದಲ್ಲಿ ಉಂಟಾಗಿರುವ ಭಾರಿ ಪ್ರವಾಹದಿಂದಾಗಿ ಕನಿಷ್ಠ 30 ಮಂದಿ ಮೃತಪಟ್ಟಿರುವ ಶಂಕೆ ಇದ್ದು, ಹಲವರು ನಾಪತ್ತೆಯಾಗಿದ್ದಾರೆ ಎಂದು ವರದಿಯಾಗಿದೆ.

ಮೂರು ಬಸ್‌ಗಳು ಪ್ರವಾಹದಲ್ಲಿ ಕೊಚ್ಚಿ ಹೋಗಿರುವುದಾಗಿ ಶುಕ್ರವಾರ ವರದಿಯಾಗಿತ್ತು. ರಕ್ಷಣಾ ಕಾರ್ಯಾಚರಣೆ ತಂಡಗಳು ಹತ್ತಾರು ಮೃತದೇಹಗಳನ್ನು ಹೊರತೆಗೆದಿದ್ದವು. 18 ಮಂದಿ ಇನ್ನೂ ಪತ್ತೆಯಾಗಿಲ್ಲ ಎಂದು ‘ದಿ ನ್ಯೂಸ್ ಮಿನಿಟ್’ ವರದಿ ಮಾಡಿದೆ.

ದಕ್ಷಿಣ ಏಷ್ಯಾದಾದ್ಯಂತ ಹವಾಮಾನ ಬದಲಾವಣೆಯಿಂದಾಗಿ ಪ್ರತಿಕೂಲ ವಾತಾವರಣ ಸೃಷ್ಟಿಯಾಗಿದೆ. ಅರಣ್ಯನಾಶ, ಅತಿಯಾದ ಅಭಿವೃದ್ಧಿಯಿಂದಾಗಿ ಪ್ರಕೃತಿ ವಿಕೋಪಗಳಾಗುತ್ತಿವೆ ಎಂದು ತಜ್ಞರು ವಿಶ್ಲೇಷಿಸುತ್ತಿರುವುದಾಗಿ ವರದಿ ಉಲ್ಲೇಖಿಸಿದೆ.

ADVERTISEMENT

ಭಾರಿ ಮಳೆ, ಪ್ರವಾಹ, ಭೂಕುಸಿತಗಳಿಂದಾಗಿ ಅಕ್ಟೋಬರ್‌ನಿಂದೀಚೆಗೆ ಭಾರತದಲ್ಲಿ ಹತ್ತಾರು ಮಂದಿ ಮೃತಪಟ್ಟಿದ್ದಾರೆ. ದಕ್ಷಿಣ ಬಾರತದ ಹಲವೆಡೆ ಶನಿವಾರವೂ ಭಾರಿ ಮಳೆಯಾಗುತ್ತಿದೆ.

ಕಳೆದ ತಿಂಗಳು ಕೇರಳದಲ್ಲಿ ಪ್ರವಾಹ ಮತ್ತು ಮಳೆ ಸಂಬಂಧಿತ ಅವಘಡಗಳಲ್ಲಿ ಕನಿಷ್ಠ 42 ಮಂದಿ ಮೃತಪಟ್ಟಿದ್ದರು. ಈ ತಿಂಗಳೂ ಕೇರಳದಲ್ಲಿ ಮಳೆಯ ಆರ್ಭಟ ಮುಂದುವರಿದಿದೆ. ಶಬರಿಮಲೆಯ ಪ್ರಸಿದ್ಧ ಅಯ್ಯಪ್ಪ ದೇವಸ್ಥಾನಕ್ಕೆ ಶನಿವಾರ ಭಕ್ತರ ಪ್ರವೇಶವನ್ನು ನಿಷೇಧಿಸಿ ಪತ್ತನಂತಿಟ್ಟ ಜಿಲ್ಲಾಡಳಿತ ಆದೇಶ ಹೊರಡಿಸಿದೆ. ಈ ಬಾರಿಯ ಯಾತ್ರೆಯ ಅವಧಿ ಕಳೆದ ವಾರ ಆರಂಭಗೊಂಡಿದ್ದು, ನೂರಾರು ಭಕ್ತರು ಯಾತ್ರೆ ಕೈಗೊಂಡಿದ್ದರು.

ಪಂಪಾ ನದಿ ಅಪಾಯದ ಮಟ್ಟ ಮೀರಿ ಹರಿಯುತ್ತಿದ್ದು, ಯಾತ್ರಾರ್ಥಿಗಳನ್ನು ತಡೆಯಲಾಗಿದೆ ಎಂದು ವರದಿಯಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.