ಅಗ್ನಿ ಅವಘಡ
(ಸಾಂದರ್ಭಿಕ ಚಿತ್ರ)
ಹೈದರಾಬಾದ್: ಶಾರ್ಟ್ ಸರ್ಕೀಟ್‌ನಿಂದಾಗಿ ಬೆಳಿಗ್ಗೆ ಸುಮಾರು 6.15ಕ್ಕೆ ಹೊತ್ತಿಕೊಂಡ ಬೆಂಕಿಯು ಒಂದೇ ಕುಟುಂಬದ 17 ಮಂದಿಯನ್ನು ಮಲಗಿದ್ದಲ್ಲಿಯೇ ಬಲಿ ತೆಗೆದುಕೊಂಡಿದೆ. ಐತಿಹಾಸಿಕ ಮಹತ್ವದ ಚಾರ್‌ಮಿನಾರ್‌ಗೆ 200 ಮೀ ದೂರದಲ್ಲಿ ಭಾನುವಾರ ಈ ದುರಂತ ನಡೆದಿದೆ. ಈ ಅಗ್ನಿ ಅವಘಡದಲ್ಲಿ 8 ಮಕ್ಕಳೂಮೃತಪಟ್ಟಿದ್ದಾರೆ. ಅವರಲ್ಲಿ ಒಂದೂವರೆ ವರ್ಷದ ಹಸುಳೆಯೂ ಸೇರಿದೆ.
ಮೃತ ಪ್ರಲ್ಹಾದ್ ಅಗರ್ವಾಲ್ ಅವರಿಗೆ ಸೇರಿದ ಕಟ್ಟಡದಲ್ಲಿ ಬೆಂಕಿ ಅವಘಡ ಸಂಭವಿಸಿದೆ. ಈ ಕುಟುಂಬವು ಸುಮಾರು 125 ವರ್ಷಗಳಿಂದ ಇಲ್ಲಿಯೇ ವಾಸಿಸುತ್ತಿತ್ತು. ಪ್ರಲ್ಹಾದ್ ಅವರು ತಲತಲಾಂತರಗಳಿಂದ ಆಭರಣ ವ್ಯಾಪಾರ ಮಾಡುತ್ತಿದ್ದಾರೆ. ನೆಲ ಮಳಿಗೆಯಲ್ಲಿ ‘ಕೃಷ್ಣ ಪರ್ಲ್ಸ್’ ಆಭರಣ ಅಂಗಡಿ, ಮೇಲೆರಡು ಅಂತಸ್ತಿನಲ್ಲಿ ವಾಸದ ಮನೆಗಳಿದ್ದವು.
ಆಭರಣ ಮಳಿಗೆಯಲ್ಲಿ ಶಾರ್ಟ್ ಸರ್ಕೀಟ್‌ನಿಂದ ಬೆಂಕಿ ಕಾಣಿಸಿಕೊಂಡಿತು. ಇದರಿಂದ ಮಳಿಗೆಯ ಹವಾನಿಯಂತ್ರಿತ ಯಂತ್ರವೊಂದು ಸ್ಫೋಟಗೊಂಡಿತು. ಈ ಬಳಿಕ ಬೆಂಕಿಯು ತೀವ್ರವಾಗಿ ಹಬ್ಬಿದೆ. ಮಳಿಗೆಯ ಮೊದಲ ಮಹಡಿಯಲ್ಲಿ 17 ಮಂದಿ ನಿದ್ದೆಯಲ್ಲಿದ್ದರು. ಎರಡನೇ ಅಂತಸ್ತಿನಲ್ಲಿ 4 ಮಂದಿ ಮಲಗಿದ್ದರು. ಬೇಸಿಗೆ ರಜೆಯ ಕಾರಣ ಕುಟುಂಬದ ಹಲವು ಮಂದಿ ಪ್ರಲ್ಹಾದ್ ಅವರ ಮನೆಗೆ ಬಂದಿದ್ದರು.
‘ತೀವ್ರ ಬೆಂಕಿ ಹೊತ್ತಿಕೊಂಡಿದ್ದ ರಿಂದ ದಟ್ಟ ಹೊಗೆಯಿಂದಾಗಿ ಮೊದಲ ಅಂತಸ್ತಿನಲ್ಲಿ ಮಲಗಿದ್ದವರಿಗೆ ಉಸಿರುಗಟ್ಟಿದೆ. ಮೃತರಲ್ಲಿ ಸುಟ್ಟ ಗಾಯಗಳು ಇರಲಿಲ್ಲ. ಅರೆಪ್ರಜ್ಞಾವಸ್ತೆಯಲ್ಲಿದ್ದ ಹಲವರನ್ನು ತಕ್ಷಣವೇ ಆಸ್ಪತ್ರೆಗೆ ದಾಖಲಿಸಲಾಯಿತು. ಆದರೆ, ಆಸ್ಪತ್ರೆ ತಲುಪುವ ಮೊದಲೇ ಎಲ್ಲರೂ ಮೃತಪಟ್ಟಿದ್ದರು ಎಂದು ವೈದ್ಯರು ಹೇಳಿದರು’ ಎಂದು ತೆಲಂಗಾಣ ವಿಪತ್ತು ನಿರ್ವಹಣೆ ಮತ್ತು ಅಗ್ನಿ ಶಾಮಕ ಸೇವೆಗಳ ಮಹಾನಿರ್ದೇಶಕ ವೈ. ನಾಗಿ ರೆಡ್ಡಿ ವಿವರಿಸಿದರು.
ಭಾರಿ ಹೊಗೆ: ‘6.17ರ ಸುಮಾರಿಗೆ ಅವಘಡ ಕುರಿತು ಅಗ್ನಿ ಶಾಮಕ ಇಲಾಖೆಗೆ ಕರೆ ಬಂದಿತು. ಸಿಬ್ಬಂದಿಯು ಸುಮಾರು 6.20ಕ್ಕೆ ಸ್ಥಳಕ್ಕೆ ಧಾವಿಸಿದರು. ಬೆಂಕಿಯು ಪಕ್ಕದ ಕಟ್ಟಡಗಳಿಗೆ ಹರಡುವುದನ್ನು ತಡೆಯುವುದು ನಮ್ಮ ಮುಂದಿದ್ದ ಸವಾಲಾಗಿತ್ತು. ಎರಡು ತಾಸಿನ ಕಾರ್ಯಾಚರಣೆ ನಡೆಸಿ ಬೆಂಕಿ ನಂದಿಸಲಾಗಿದೆ’ ಎಂದು ಉಪಮುಖ್ಯಮಂತ್ರಿ ಭತ್ತಿ ವಿಕ್ರಮಾರ್ಕ ಮಲ್ಲು ಹೇಳಿದರು.
‘ಕಟ್ಟಡದಲ್ಲಿ ಭಾರಿ ಹೊಗೆ ಎದ್ದಿದ್ದ ಕಾರಣ ಅಗ್ನಿ ಶಾಮಕ ಸಿಬ್ಬಂದಿ ಆಮ್ಲಜನಕ ಮಾಸ್ಕ್‌ಗಳನ್ನು ಧರಿಸಿದ್ದರು. ಮನೆ ಒಳಗೆ ಹೋಗುತ್ತಿದ್ದಂತೆಯೇ ಬೆಂಕಿಯ ಕೆನ್ನಾಲಿಗೆಯು ಮೈಮೇಲೆ ಎರಗುತ್ತಿತ್ತು’ ಎಂದು ನಾಗಿ ರೆಡ್ಡಿ ತಿಳಿಸಿದರು.
ಕಟ್ಟಡವನ್ನು ತಲುಪಲು ಕಿರಿದಾದ ಮೆಟ್ಟಿಲು: ರಕ್ಷಿಸಿಕೊಳ್ಳಲಾಗದ ಸ್ಥಿತಿ
‘ಮೊದಲ ಮತ್ತು ಎರಡನೇ ಅಂತಸ್ತಿನಲ್ಲಿದ್ದ ವಸತಿ ಕಟ್ಟಡವನ್ನು ತಲುಪಲು ಇರುವ ಮೆಟ್ಟಿಲು ಬಹಳ ಕಿರಿದಾಗಿದೆ. ಇದು ಸುಮಾರು ಒಂದು ಮೀಟರ್‌ನಷ್ಟು ಅಗಲವಾಗಿದೆಯಷ್ಟೆ. ಇಷ್ಟು ಕಿರಿದಾದ ಜಾಗದಲ್ಲಿ ಓಡಿ ಹೋಗಲು ಸಾಧ್ಯವಾಗಲಿಲ್ಲ. ಇಡೀ ಕಟ್ಟಡಕ್ಕೆ ಒಂದೇ ಪ್ರವೇಶ ದ್ವಾರ ಇತ್ತು. ಇದರಲ್ಲಿಯೇ ಕಟ್ಟಡದಿಂದ ಹೊರಬರಬೇಕಿತ್ತು. ಇದು ಎರಡು ಮೀಟರಷ್ಟು ಅಗಲವಿತ್ತು. ಇದು ಒಂದು ರೀತಿ ಓಣಿಯಂತಿತ್ತು’ ಎಂದು ನಾಗಿ ರೆಡ್ಡಿ ಮಾಹಿತಿ ನೀಡಿದರು.
ಕಿರಿದಾದ ಮೆಟ್ಟಿಲ ಕಾರಣಕ್ಕೆ ರಕ್ಷಣಾ ಕಾರ್ಯಾಚರಣೆ ಬಹಳ ಕಷ್ಟವಾಯಿತು. ಒಟ್ಟು 12 ಅಗ್ನಿ ಶಾಮಕ ಉಪಕರಣ, 11 ವಾಹನ, ಬೆಂಕಿ ನಂದಿಸುವ ರೋಬೊ, 70 ಸಿಬ್ಬಂದಿ ರಕ್ಷಣಾ ಕಾರ್ಯಾಚರಣೆಯಲ್ಲಿ ತೊಡಗಿಕೊಂಡಿದ್ದರು. ಹಳೇ ಹೈದರಾಬಾದ್‌ನಲ್ಲಿದ್ದ ಕಟ್ಟಡ ಸ್ವರೂಪಗಳೇ ಕಿರಿದಾಗಿವೆ. ಹೀಗಾಗಿ ರಕ್ಷಣಾ ಕಾರ್ಯಕ್ಕೆ ತೊಡಕಾಯಿತು’ ಎಂದು ಹೇಳಿದರು.
‘ಅದೊಂದು ಭಯಾನಕ ದೃಶ್ಯ’
‘ಭಾನುವಾರ ಇಲ್ಲಿ ವ್ಯಾಪಾರ ಜೋರಾಗಿರುತ್ತದೆ. ಅದಕ್ಕಾಗಿಯೇ ನಾವು ಸ್ನೇಹಿತರು ಬೆಳಿಗ್ಗೆ 6.10ರ ಸುಮಾರಿಗೆ ಅಂಗಡಿ ಇಡುವುದಕ್ಕೆ ಇದೇ ರಸ್ತೆಯಲ್ಲಿ ತೆರಳುತ್ತಿದ್ದೆವು. ಈ ಮನೆಯ ಹತ್ತಿರ ಬರುತ್ತಿದ್ದಂತೆಯೇ ಮಹಿಳೆಯೊಬ್ಬರು ಬೆಂಕಿ ಹೊತ್ತಿಕೊಂಡಿದೆ ಎಂದು ಜೋರಾಗಿ ಕೂಗಿದ್ದು ಕೇಳಿಸಿತು. ಬೆಂಕಿ ತೀವ್ರವಾಗಿತ್ತು. ಕಟ್ಟಡದ ಹಿಂಬದಿಯಿಂದ ಮನೆ ಒಳಗೆ ಹೋಗಲು ಯತ್ನಿಸಿದೆವು’ ಎಂದು ಪ್ರತ್ಯಕ್ಷದರ್ಶಿ ಜಾಹಿದ್ ವಿವರಿಸಿದರು.
‘ಮನೆ ಒಳಗೆ ಹೋಗುತ್ತಿದ್ದಂತೆಯೇ ಭಯಾನಕ ದೃಶ್ಯ ಕಂಡೆವು. ಏಳು ಮಂದಿ ನೆಲದಲ್ಲಿ ಸತ್ತು ಬಿದ್ದಿದ್ದರು. ಆರು ಮಂದಿ ಇನ್ನೊಂದು ಕೋಣೆಯಲ್ಲಿದ್ದರು. ಭಾರಿ ಬೆಂಕಿ ಇದ್ದಿದ್ದರಿಂದ ನಾವು ಯಾರನ್ನೂ ಉಳಿಸಲು ಸಾಧ್ಯವಾಗಲಿಲ್ಲ. ಸತ್ತು ಬಿದ್ದಿದ್ದ ಪುಟ್ಟ ಮಕ್ಕಳ ಮೇಲೆ ಮಹಿಳೆಯೊಬ್ಬರ ಮೃತದೇಹವೊಂದು ಬಿದ್ದಿತ್ತು. ಮಾನವೀಯತೆ ದೃಷ್ಟಿಯಿಂದ ಹೊತ್ತಿ ಉರಿಯುತ್ತಿದ್ದ ಬೆಂಕಿಯ ಮಧ್ಯೆಯೂ ಒಳಗೆ ಹೋಗಿ ಸಹಾಯ ಮಾಡಿದೆವು. ಕೆಲವು ಹೊತ್ತಿನ ಬಳಿಕ ಅಗ್ನಿ ಶಾಮಕ ಸಿಬ್ಬಂದಿ ಬಂದರು’ ಎಂದರು.
ಜಾಹೀದ್ ಅವರೊಂದಿಗೆ ಅಲ್ಲಿದ್ದ ಸ್ಥಳೀಯರು ಸೇರಿ 13 ಮೃತದೇಹಗಳನ್ನು ಹೊರತೆಗೆದಿದ್ದರು. ಅಗ್ನಿ ಶಾಮಕ ಸಿಬ್ಬಂದಿ ಸ್ಥಳಕ್ಕೆ ಬಂದ ಬಳಿಕ ಎರಡನೇ ಅಂತಸ್ತಿನಲ್ಲಿದ್ದ ನಾಲ್ವರನ್ನು ಏಣಿ ಹಾಕಿ ಕೆಳಗಿಳಿಸಿದರು. ಹೊಗೆ ಹೊರ ಹೋಗಲು ಸಿಬ್ಬಂದಿಯು ಮನೆಯ ಗೋಡೆ ಒಡೆದರು.
ಇಲ್ಲದ ಆಮ್ಲಜನಕ ಮಾಸ್ಕ್
ಆಂಬುಲೆನ್ಸ್ ಒಳಗೆ ಮುಖ್ಯಮಂತ್ರಿ ರೇವಂತ ರೆಡ್ಡಿ ಅವರ ಚಿತ್ರವನ್ನು ಅಂಟಿಸಲಾಗಿದೆ. ಆದರೆ, ರೋಗಿಗಳಿಗೆ ಅಗತ್ಯವಾಗಿ ಬೇಕಿರುವ ಆಮ್ಲಜನಕ ಮಾಸ್ಕ್ ಮಾತ್ರ ಕಾಣೆಯಾಗಿತ್ತು. ಇದು ಇದ್ದಿದ್ದರೆ ಪುಟ್ಟ ಹುಡುಗಿಯೊಬ್ಬಳನ್ನು ಉಳಿಸಿಕೊಳ್ಳಬಹುದಿತ್ತು.–ಮೃತರ ಕುಟುಂಬಸ್ಥರು, (ಕಾಂಗ್ರೆಸ್ ಸಂಸದ ಅನಿಲ್ ಕುಮಾರ್ ಯಾದವ್ ಅವರು ಘಟನಾ ಸ್ಥಳಕ್ಕೆ ಬಂದ ವೇಳೆ ಕುಟುಂಬಸ್ಥರು ಆಕ್ರೋಶ ಹೊರಹಾಕಿದರು)
ಬೆಂಕಿ ಹೊತ್ತಿಕೊಂಡಾಗ ಅಗ್ನಿ ಶಾಮಕ ದಳದವರಿಗೆ ಕರೆ ಮಾಡಿದರೂ ಸಿಬ್ಬಂದಿಯು ತಡೆವಾಗಿ ಬಂದಿದ್ದಾರೆ ಎನ್ನುವ ಮಾಹಿತಿ ಇದೆ–ಜಿ. ಕಿಶನ್ ರೆಡ್ಡಿ, ಕೇಂದ್ರ ಸಚಿವ
ಮಾಹಿತಿ ಬಂದ ತಕ್ಷಣದಲ್ಲಿಯೇ ಅಗ್ನಿ ಶಾಮಕ ಸಿಬ್ಬಂದಿ ಘಟನಾ ಸ್ಥಳಕ್ಕೆ ತೆರಳಿ, ಕ್ಷಿಪ್ರವಾಗಿ ಕಾರ್ಯನಿರ್ವಹಿಸಿದ್ದಾರೆ. ಇಲ್ಲವಾಗಿದ್ದರೆ ಘಟನೆಯಲ್ಲಿ ಇನ್ನಷ್ಟು ಜನರು ಜೀವ ಕಳೆದುಕೊಳ್ಳಬೇಕಿತ್ತು. ಇನ್ನಷ್ಟು ಆಸ್ತಿಗೆ ಹಾನಿಯಾಗುತ್ತಿತ್ತು–ಭತ್ತಿ ವಿಕ್ರಮಾರ್ಕ ಮಲ್ಲು, ತೆಲಂಗಾಣ ಉಪಮುಖ್ಯಮಂತ್ರಿ
ಘಟನೆ ಬಗ್ಗೆ ತನಿಖೆ ನಡೆಸಲಾಗುವುದು. ಅಗ್ನಿ ಅವಘಡಕ್ಕೆ ಪಿತೂರಿ ನಡೆಸಲಾಗಿದೆ ಎಂಬುದಕ್ಕೆ ಯಾವುದೇ ಸಾಕ್ಷ್ಯ ಇಲ್ಲ–ಪೊನ್ನಂ ಪ್ರಭಾಕರ್, ಸಾರಿಗೆ ಸಚಿವ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.