ಸಾಂದರ್ಭಿಕ ಚಿತ್ರ
ಅಹಮದಾಬಾದ್: ಗುಜರಾತ್‌ನ ಬನಾಸ್‌ಕಾಂಠ ಜಿಲ್ಲೆಯ ಪಟಾಕಿ ಕಾರ್ಖಾನೆಯೊಂದರಲ್ಲಿ ಮಂಗಳವಾರ ಸ್ಫೋಟ ಸಂಭವಿಸಿ ಚಾವಣಿ ಕುಸಿದ ಪರಿಣಾಮ 18 ಮಂದಿ ಮೃತಪಟ್ಟಿದ್ದು, 5 ಮಂದಿ ಗಾಯಗೊಂಡಿದ್ದಾರೆ.
‘ದೀಸಾ ನಗರದ ಕೈಗಾರಿಕಾ ಪ್ರದೇಶದಲ್ಲಿ ಬೆಳಿಗ್ಗೆ 9.45ಕ್ಕೆ ಈ ದುರಂತ ಸಂಭವಿಸಿದೆ’ ಎಂದು ಪೊಲೀಸರು ತಿಳಿಸಿದ್ದಾರೆ.
ಮಧ್ಯಪ್ರದೇಶ ಮೂಲದ ಕಾರ್ಮಿಕರು ತಮ್ಮ ಕುಟುಂಬಸ್ಥರೊಂದಿಗೆ ಕಾರ್ಖಾನೆಯಲ್ಲಿಯೇ ವಾಸಿಸುತ್ತಿದ್ದರು. ಸ್ಫೋಟದ ಪರಿಣಾಮವಾಗಿ ಗೋದಾಮಿನ ಚಾವಣಿಯು ಕುಸಿದುಬಿದ್ದಿದ್ದರಿಂದ ಸಾವಿನ ಸಂಖ್ಯೆ ಹೆಚ್ಚಾಗಿದೆ.
‘ಅವಶೇಷಗಳಡಿ ಸಿಲುಕಿದವರ ಪತ್ತೆಗಾಗಿ ಕಾರ್ಯಾಚರಣೆ ಮುಂದುವರಿದಿದೆ. ಹಲವರ ದೇಹಗಳು ಪೂರ್ಣವಾಗಿ ಸುಟ್ಟು ಹೋಗಿರುವುದರಿಂದ ಗುರುತು ಹಿಡಿಯಲು ಕಷ್ಟವಾಗುತ್ತಿದೆ’ ಎಂದು ಅಧಿಕಾರಿಗಳು ಹೇಳಿದ್ದಾರೆ.
‘ಈ ಸ್ಥಳದಲ್ಲಿ ಗೋದಾಮಿಗೆ ಮಾತ್ರ ಪರವಾನಿಗೆ ನೀಡಲಾಗಿದೆ, ಪಟಾಕಿ ತಯಾರಿಕೆಗೆ ಅನುಮತಿ ನೀಡಿಲ್ಲ. ಪ್ರಾಥಮಿಕ ಮಾಹಿತಿಯ ಪ್ರಕಾರ ಈ ಸ್ಥಳದಲ್ಲಿ ಅನುಮತಿ ಇಲ್ಲದೆ ಪಟಾಕಿ ತಯಾರಿಸಲಾಗುತ್ತಿತ್ತು’ ಎಂದು ಹೆಚ್ಚುವರಿ ಜಿಲ್ಲಾಧಿಕಾರಿ ನೇಹಾ ಪಾಂಚಾಲ್ ಅವರು ತಿಳಿಸಿದ್ದಾರೆ.
ಸುರಕ್ಷತಾ ಕ್ರಮಗಳನ್ನು ಅನುಸರಿಸದ ಕಾರಣ ಗೋದಾಮಿನ ಪರವಾನಗಿಯನ್ನು ನವೀಕರಿಸಿರಲಿಲ್ಲ. ಪೊಲೀಸ್ ಪರಿಶೀಲನೆಯ ವೇಳೆ ಗೋದಾಮು ಖಾಲಿ ಇತ್ತು ಎಂದು ಗುಜರಾತ್ ಸರ್ಕಾರದ ವಕ್ತಾರರೊಬ್ಬರು ತಿಳಿಸಿದ್ದಾರೆ.
‘ಕಾರ್ಖಾನೆಯು ಖೂಬ್‌ಚಾಂದ್ ಸಿಂಧಿ ಅವರಿಗೆ ಸೇರಿದೆ. ಘಟನೆಗೆ ಕಾರಣರಾದವರ ಪತ್ತೆಗಾಗಿ ರಾಜಸ್ಥಾನ ಮತ್ತು ಅಹಮದಾಬಾದ್‌ಗೆ ವಿಶೇಷ ತಂಡಗಳನ್ನು ಕಳುಹಿಸಲಾಗಿದೆ’ ಎಂದು ಪೊಲೀಸ್ ಅಧಿಕಾರಿಯೊಬ್ಬರು ಹೇಳಿದ್ದಾರೆ.
ಘಟನೆ ಕುರಿತು ಸಂತಾಪ ವ್ಯಕ್ತಪಡಿಸಿರುವ ಮುಖ್ಯಮಂತ್ರಿ ಭೂಪೇಂದ್ರ ಪಟೇಲ್, ‘ದೀಸಾ ಪಟ್ಟಣದ ಪಟಾಕಿ ಗೋದಾಮಿನಲ್ಲಿ ಬೆಂಕಿ ಸ್ಫೋಟ ಮತ್ತು ಸ್ಲ್ಯಾಬ್ ಕುಸಿದು ಕಾರ್ಮಿಕರು ಮೃತಪಟ್ಟಿರುವುದು ಹೃದಯ ವಿದ್ರಾವಕವಾಗಿದೆ. ಈ ದುಃಖದ ಸಮಯದಲ್ಲಿ ಮೃತರ ಕುಟುಂಬಗಳಿಗೆ ಸಂತಾಪ ಸೂಚಿಸುತ್ತೇನೆ. ಗಾಯಾಳುಗಳಿಗೆ ಶೀಘ್ರ ಸೂಕ್ತ ಚಿಕಿತ್ಸೆ ಕೊಡಿಸುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದ್ದೇನೆ. ರಾಜ್ಯ ಸರ್ಕಾರವು ಮೃತರ ಕುಟುಂಬಗಳಿಗೆ ₹4 ಲಕ್ಷ ಮತ್ತು ಗಾಯಗೊಂಡವರಿಗೆ ₹50,000 ಆರ್ಥಿಕ ನೆರವು ಘೋಷಿಸಿದೆ’ ಎಂದು ‘ಎಕ್ಸ್’ನಲ್ಲಿ ಪೋಸ್ಟ್ ಮಾಡಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.