ADVERTISEMENT

ನಕ್ಸಲ್ ನಂಟು ಪ್ರಕರಣ: ಮಾಜಿ ಪ್ರಾಧ್ಯಾಪಕ ಜಿ.ಎನ್.ಸಾಯಿಬಾಬಾ ಖುಲಾಸೆ

ಪಿಟಿಐ
Published 5 ಮಾರ್ಚ್ 2024, 7:03 IST
Last Updated 5 ಮಾರ್ಚ್ 2024, 7:03 IST
<div class="paragraphs"><p>ಜಿ.ಎನ್.ಸಾಯಿಬಾಬಾ</p></div>

ಜಿ.ಎನ್.ಸಾಯಿಬಾಬಾ

   

ಪಿಟಿಐ

ನಾಗಪುರ: ಮಾವೋವಾದಿಗಳ ಜೊತೆ ನಂಟು ಹೊಂದಿದ ಆರೋಪ ಎದುರಿಸುತ್ತಿದ್ದ ದೆಹಲಿ ವಿಶ್ವವಿದ್ಯಾಲಯದ ಮಾಜಿ ಪ್ರೊಫೆಸರ್ ಜಿ.ಎನ್. ಸಾಯಿಬಾಬಾ ಅವರನ್ನು ಬಾಂಬೆ ಹೈಕೋರ್ಟ್‌ ಮಂಗಳವಾರ ದೋಷಮುಕ್ತಗೊಳಿಸಿದೆ. ಅವರ ವಿರುದ್ಧದ ಆರೋಪಗಳನ್ನು ಸಾಬೀತುಮಾಡುವಲ್ಲಿ ಪ್ರಾಸಿಕ್ಯೂಷನ್ ವಿಫಲವಾಗಿದೆ ಎಂದು ಹೈಕೋರ್ಟ್‌ ಹೇಳಿದೆ.

ADVERTISEMENT

ಸಾಯಿಬಾಬಾ ಅವರಿಗೆ ವಿಧಿಸಿದ್ದ ಜೀವಾವಧಿ ಶಿಕ್ಷೆಯನ್ನು ಕೂಡ ಹೈಕೋರ್ಟ್‌ ರದ್ದುಪಡಿಸಿದೆ. ಈ ಪ್ರಕರಣದಲ್ಲಿ ಆರೋಪಿಗಳಾಗಿದ್ದ ಇತರ ಐವರನ್ನು ಕೂಡ ನ್ಯಾಯಮೂರ್ತಿಗಳಾದ ವಿನಯ್ ಜೋಷಿ ಮತ್ತು ವಾಲ್ಮೀಜಿ ಎಸ್.ಎ. ಮಿನೇಜಸ್ ಅವರು ಇದ್ದ ವಿಭಾಗೀಯ ಪೀಠವು ದೋಷಮುಕ್ತಗೊಳಿಸಿದೆ.

ಆರೋಪಿಗಳ ವಿರುದ್ಧ ಕಾನೂನು ಬಾಹಿರ ಚಟುವಟಿಕೆಗಳ ತಡೆ ಕಾಯ್ದೆಯ (ಯುಎಪಿಎ) ಅಡಿಯಲ್ಲಿ ಕ್ರಮ ಜರುಗಿಸಲು ಪಡೆದಿದ್ದ ಅನುಮತಿಯು ಕಾನೂನುಬದ್ಧವಾಗಿ ಇರಲಿಲ್ಲ, ಸೂಕ್ತವಾಗಿ ಇರಲಿಲ್ಲ. ಹೀಗಾಗಿ, ಆ ಅನುಮತಿಗೆ ಕಾನೂನಿನ ಸಮ್ಮತಿ ಇಲ್ಲ ಎಂದು ಕೂಡ ವಿಭಾಗೀಯ ಪೀಠ ಹೇಳಿದೆ.

‘ಆರೋಪಿಗಳ ವಿರುದ್ಧ ಕಾನೂನು ಕ್ರಮ ಜರುಗಿಸುವುದಕ್ಕೆ ನೀಡಿದ್ದ ಅನುಮತಿಯೇ ಅಮಾನ್ಯವಾದ ಕಾರಣ ಇಡೀ ಪ್ರಾಸಿಕ್ಯೂಷನ್ ಪ್ರಕ್ರಿಯೆ ಕಾನೂನಿನ ಮಾನ್ಯತೆ ಕಳೆದುಕೊಂಡಿದೆ. ಕಾನೂನಿನ ಅಡಿ ಕಡ್ಡಾಯವಾಗಿ ಪಾಲಿಸಬೇಕಿದ್ದ ನಿಯಮಗಳನ್ನು ಉಲ್ಲಂಘಿಸಿ ನಡೆದ ವಿಚಾರಣೆಯೇ ನ್ಯಾಯದಾನದ ವೈಫಲ್ಯಕ್ಕೆ ಸಮ’ ಎಂದು ಹೈಕೋರ್ಟ್ ಹೇಳಿದೆ.

ಹೈಕೋರ್ಟ್ ತನ್ನ ಆದೇಶಕ್ಕೆ ಆರು ವಾರಗಳ ಅವಧಿಗೆ ತಡೆ ನೀಡಬೇಕು, ಆಗ ಸುಪ್ರೀಂ ಕೋರ್ಟ್‌ನಲ್ಲಿ ಮೇಲ್ಮನವಿ ಸಲ್ಲಿಸಲು ಅವಕಾಶ ಆಗುತ್ತದೆ ಎಂದು ಪ್ರಾಸಿಕ್ಯೂಷನ್ ಪರ ವಕೀಲರು ಮನವಿ ಮಾಡಿದರು. ಆದೇಶಕ್ಕೆ ತಡೆ ಕೋರಿ ಅರ್ಜಿ ಸಲ್ಲಿಸುವಂತೆ ಹೈಕೋರ್ಟ್‌, ವಕೀಲರಿಗೆ ಸೂಚಿಸಿತು.

ಅಂಗವೈಕಲ್ಯ ಹೊಂದಿರುವ ಸಾಯಿಬಾಬಾ ಅವರನ್ನು 2014ರಲ್ಲಿ ಬಂಧಿಸಲಾಯಿತು. ಅವರು ಈಗ ನಾಗಪುರದ ಕೇಂದ್ರ ಕಾರಾಗೃಹದಲ್ಲಿ ಇದ್ದಾರೆ. ಮಹಾರಾಷ್ಟ್ರದ ಗಢಚಿರೋಲಿ ಜಿಲ್ಲೆಯ ಸೆಷನ್ಸ್‌ ನ್ಯಾಯಾಲಯವೊಂದು 2017ರ ಮಾರ್ಚ್‌ನಲ್ಲಿ, ಸಾಯಿಬಾಬಾ ಮತ್ತು ಇತರ ಐವರು ಮಾವೋವಾದಿಗಳ ಜೊತೆ ನಂಟು ಹೊಂದಿದ್ದ ಹಾಗೂ ದೇಶದ ವಿರುದ್ಧ ಸಮರ ಸಾರುವುದಕ್ಕೆ ಸಮನಾದ ಕೃತ್ಯಗಳಲ್ಲಿ ತೊಡಗಿದ್ದ ಆರೋಪ ಸಾಬೀತಾಗಿದೆ ಎಂದು ಆದೇಶ ನೀಡಿತ್ತು. 

ಸಾಯಿಬಾಬಾ ಮತ್ತು ಇತರ ಐವರು ಯುಎಪಿಎ ಹಾಗೂ ಭಾರತೀಯ ದಂಡ ಸಂಹಿತೆಯ ವಿವಿಧ ಸೆಕ್ಷನ್‌ಗಳ ಅಡಿಯಲ್ಲಿ ಅಪರಾಧಿಗಳು ಎಂದು ಘೋಷಿಸಿತ್ತು. ಆದರೆ 2022ರ ಅಕ್ಟೋಬರ್‌ನಲ್ಲಿ ಹೈಕೋರ್ಟ್‌ನ ಇನ್ನೊಂದು ಪೀಠವು ಸಾಯಿಬಾಬಾ ಅವರನ್ನು ದೋಷಮುಕ್ತಗೊಳಿಸಿತ್ತು. ಅವರ ವಿರುದ್ಧ ಯುಎಪಿಎ ಅಡಿಯಲ್ಲಿ ಕ್ರಮ ಜರುಗಿಸುವುದಕ್ಕೆ ಕಾನೂನುಬದ್ಧವಾಗಿ ಅನುಮತಿ ಪಡೆದಿರಲಿಲ್ಲ ಎಂದು ಹೇಳಿತ್ತು.

ಈ ಆದೇಶವನ್ನು ಪ್ರಶ್ನಿಸಿ ಮಹಾರಾಷ್ಟ್ರ ಸರ್ಕಾರವು ಅದೇ ದಿನ ಸುಪ್ರೀಂ ಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಿತ್ತು. ಹೈಕೋರ್ಟ್‌ ಆದೇಶಕ್ಕೆ ಆರಂಭದಲ್ಲಿ ತಡೆ ನೀಡಿದ್ದ ಸುಪ್ರೀಂ ಕೋರ್ಟ್, ನಂತರದಲ್ಲಿ ಆ ಆದೇಶವನ್ನು ರದ್ದುಪಡಿಸಿತ್ತು. ಸಾಯಿಬಾಬಾ ಅವರು ಸಲ್ಲಿಸಿದ್ದ ಮೇಲ್ಮನವಿಯನ್ನು ಹೊಸದಾಗಿ ಆಲಿಸುವಂತೆ ಸೂಚಿಸಿತ್ತು.

ಪತ್ನಿ ಸಂತಸ

ನವದೆಹಲಿ(ಪಿಟಿಐ): ಜಿ.ಎನ್. ಸಾಯಿಬಾಬಾ ಅವರನ್ನು ದೋಷಮುಕ್ತಗೊಳಿಸಿರುವ ಹೈಕೋರ್ಟ್‌ ಆದೇಶದಿಂದ ಸಮಾಧಾನ ಆಗಿರುವುದಾಗಿ ಅವರ ಪತ್ನಿ ವಸಂತಕುಮಾರಿ ಹೇಳಿದ್ದಾರೆ. 10 ವರ್ಷಗಳ ಹೋರಾಟದ ನಂತರ ನ್ಯಾಯ ಸಿಕ್ಕಿದೆ ಎಂದು ಅವರು ಪ್ರತಿಕ್ರಿಯೆ ನೀಡಿದ್ದಾರೆ. ತಮ್ಮ ಪತಿ ಎಂಥಹವರು ಎಂಬುದು ಅವರನ್ನು ಬಲ್ಲವರಿಗೆ ಗೊತ್ತಿತ್ತು ಎಂದು ಪತ್ನಿ ಹೇಳಿದ್ದಾರೆ. ಸಾಯಿಬಾಬಾ ಅವರ ಬೆಂಬಲಕ್ಕೆ ನಿಂತಿದ್ದ ವಕೀಲರು ಹಾಗೂ ಸಾಮಾಜಿಕ ಕಾರ್ಯಕರ್ತರಿಗೆ ಧನ್ಯವಾದ ಅರ್ಪಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.