ADVERTISEMENT

ಮರಾಠ ಸಮುದಾಯಕ್ಕೆ ಮೀಸಲಾತಿ ನಿರ್ಧಾರ ಎತ್ತಿ ಹಿಡಿದ ಬಾಂಬೆ ಹೈಕೋರ್ಟ್ 

ಪಿಟಿಐ
Published 27 ಜೂನ್ 2019, 18:33 IST
Last Updated 27 ಜೂನ್ 2019, 18:33 IST
   

ಮುಂಬೈ: ಮರಾಠ ಸಮುದಾಯದವರಿಗೆ ಉದ್ಯೋಗ ಮತ್ತು ಶಿಕ್ಷಣದಲ್ಲಿ ಮೀಸಲಾತಿ ನೀಡುವ ಮಹಾರಾಷ್ಟ್ರ ಸರ್ಕಾರದ ನಿರ್ಧಾರವನ್ನು ಬಾಂಬೆ ಹೈಕೋರ್ಟ್ ಗುರುವಾರ ಎತ್ತಿಹಿಡಿದಿದೆ. ಆದರೆ ಮೀಸಲಾತಿಯನ್ನು ಶೇ 16ರಿಂದ ಶೇ 12–13ಕ್ಕೆ ಇಳಿಸಬೇಕು ಎಂದು ನಿರ್ದೇಶನ ನೀಡಿದೆ.

ರಾಜ್ಯ ಹಿಂದುಳಿದ ವರ್ಗಗಳ ಆಯೋಗ ಶಿಫಾರಸು ಮಾಡಿರುವಂತೆ ಮೀಸಲಾತಿ ಪ್ರಮಾಣವನ್ನು ಕಡಿತಗೊಳಿಸಬೇಕು ಎಂದು ನ್ಯಾಯಮೂರ್ತಿಗಳಾದ ರಂಜಿತ್ ಮೋರೆ ಹಾಗೂ ಭಾರತಿ ಡಂಗ್ರೆ ಅವರಿದ್ದ ವಿಭಾಗೀಯ ಪೀಠ ಅಭಿಪ್ರಾಯಪಟ್ಟಿತು.

ಉದ್ಯೋಗದಲ್ಲಿ ಶೇ 12 ಹಾಗೂ ಶಿಕ್ಷಣದಲ್ಲಿ ಶೇ 13ರಷ್ಟು ಮೀಸಲಾತಿ ನೀಡುವಂತೆ ಆಯೋಗ ಶಿಫಾರಸು ಮಾಡಿತ್ತು.

ADVERTISEMENT

‘ಸಾಮಾಜಿಕ ಹಾಗೂ ಶೈಕ್ಷಣಿಕವಾಗಿ ಹಿಂದುಳಿದ ವರ್ಗ ಎಂದು ಗುರುತಿಸಲು ಹಾಗೂ ಅದಕ್ಕೆ ಪ್ರತ್ಯೇಕ ಮೀಸಲಾತಿಯನ್ನು ಕಲ್ಪಿಸುವ ಕಾನೂನು ಜಾರಿಗೊಳಿಸುವ ಅಧಿಕಾರ ರಾಜ್ಯ ಸರ್ಕಾರಕ್ಕೆ ಇದೆ. ಆದರೆ ಮೀಸಲಾತಿಯ ಪ್ರಮಾಣ ಕಡಿಮೆಯಾಗಬೇಕು’ ಎಂದು ಕೋರ್ಟ್ ಹೇಳಿದೆ.

ರಾಜ್ಯ ಸರ್ಕಾರ ಕೈಗೊಂಡಿರುವ ಈ ನಿರ್ಧಾರದ ಮೇಲೆ ಸಂವಿಧಾನದ 342 (ಎ) ತಿದ್ದುಪಡಿ ಕಾಯ್ದೆ ಯಾವುದೇ ಪರಿಣಾಮ ಬೀರುವುದಿಲ್ಲ ಎಂದೂ ತಿಳಿಸಿದೆ. ರಾಷ್ಟ್ರಪತಿಯವರು ಸಿದ್ಧಪಡಿಸಿದ ಪಟ್ಟಿಯಲ್ಲಿ ನಮೂದಾಗಿರುವ ಸಮುದಾಯಕ್ಕೆ ಮೀಸಲಾತಿ ನೀಡುವ ಅವಕಾಶವನ್ನು ಈ ಕಾಯ್ದೆ ದೃಢಪಡಿಸುತ್ತದೆ.

‘ಆಯೋಗ ನೀಡಿರುವ ವರದಿಯು ಪ್ರಮಾಣಾತ್ಮಕ ದತ್ತಾಂಶಗಳ ಆಧಾರದಲ್ಲಿ ತಯಾರಾಗಿದ್ದು, ಮರಾಠಾ ಸಮುದಾಯದವನ್ನು ಸಾಮಾಜಿಕ ಹಾಗೂ ಶೈಕ್ಷಣಿಕವಾಗಿ ಹಿಂದುಳಿದ ಸಮುದಾಯ ಎಂದು ವಿಂಗಡಣೆ ಮಾಡಿರುವುದು ಸರಿಯಾಗಿದೆ’ ಎಂದು ಕೋರ್ಟ್ ಅಭಿಪ್ರಾಯಪಟ್ಟಿತು.

‘ಮೀಸಲಾತಿಯು ಶೇ 50ರಷ್ಟನ್ನು ಮೀರಬಾರದು ಎಂಬ ಸುಪ್ರೀಂ ಕೋರ್ಟ್ ಸೂಚನೆಯ ಬಗ್ಗೆ ಅರಿವಿದೆ. ಆದರೆ ವಿಶೇಷ ಸಂದರ್ಭದಲ್ಲಿ ಅದನ್ನು ಮೀರಬಹುದು’ ಎಂದು ಪೀಠ ಹೇಳಿತು.

ಕೋರ್ಟ್ ಎದುರು ಹಾಜರಾದ ಸರ್ಕಾರದ ಪರ ವಕೀಲ ವಿ.ಎಸ್. ಥೋರಟ್ ಅವರು, ಈಗಾಗಲೇ ವೈದ್ಯಕೀಯ ಪದವಿ ಕೋರ್ಸ್‌ಗಳಿಗೆ ಶೇ 16ರಷ್ಟು ಮೀಸಲಾತಿಯಡಿ ಪ್ರವೇಶಕ್ಕೆ ಅವಕಾಶ ನೀಡಲಾಗಿದ್ದು, ಈ ವರ್ಷದ ಕೋರ್ಸ್‌ಗೆ ಅನುಮತಿ ನೀಡಬೇಕು’ ಎಂದು ಕೋರ್ಟ್‌ಗೆ ಮನವಿ ಮಾಡಿದರು.ಈ ಬಗ್ಗೆ ಪ್ರತ್ಯೇಕ ಅರ್ಜಿ ಸಲ್ಲಿಸುವಂತೆ ಸರ್ಕಾರಕ್ಕೆ ಪೀಠ ಸೂಚಿಸಿತು.

ಶೇ 16ರಷ್ಟು ಮೀಸಲಾತಿ ನೀಡುವ ಸರ್ಕಾರದ ಕ್ರಮ ಪ್ರಶ್ನಿಸಿ ಹಲವರು ಅರ್ಜಿ ಸಲ್ಲಿಸಿದ್ದರು. ಮೀಸಲಾತಿಯು ಶೇ 50ರಷ್ಟನ್ನು ಮೀರುವಂತಿಲ್ಲ ಎಂದು ಅರ್ಜಿದಾರರು ವಾದಿಸಿದ್ದರು. ಈ ನಿರ್ಧಾರ ರಾಜಕೀಯ ತಂತ್ರ ಎಂದು ಆರೋಪಿಸಲಾಗಿತ್ತು. ಫೆಬ್ರುವರಿ 6ರಿಂದ ಎಲ್ಲ ಅರ್ಜಿಗಳ ವಿಚಾರಣೆ ಆರಂಭವಾಗಿತ್ತು.

ನವೆಂಬರ್ 30, 2018ರಂದು ಮಹಾರಾಷ್ಟ್ರ ಸರ್ಕಾರವು ಈ ಸಂಬಂಧ ಮಸೂದೆಯನ್ನು ಅಂಗೀಕರಿಸಿತ್ತು. ಹಾಲಿ ಇದ್ದ ಶೇ 52ರಷ್ಟು ಮೀಸಲಾತಿಗೆ ಹೆಚ್ಚುವರಿಯಾಗಿ ಮರಾಠ ಮೀಸಲಾತಿಯನ್ನು ಸರ್ಕಾರ ಸೇರಿಸಿತ್ತು.

ಮರಾಠ ಮೀಸಲಾತಿ: ಇಲ್ಲಿಯವರೆಗೆ..

*ಜೂನ್ 2017: ಮರಾಠ ಸಮುದಾಯದ ಸಾಮಾಜಿಕ, ಆರ್ಥಿಕ ಹಾಗೂ ಶೈಕ್ಷಣಿಕ ಸ್ಥಾನಮಾನ ಅಧ್ಯಯನ ನಡೆಸಲು ರಾಜ್ಯ ಹಿಂದುಳಿದ ವರ್ಗಗಳ ಆಯೋಗವನ್ನು ಮಹಾರಾಷ್ಟ್ರ ಸರ್ಕಾರ ರಚಿಸಿತ್ತು.

*ಜುಲೈ 2018: ಶೈಕ್ಷಣಿಕ ಹಾಗೂ ಉದ್ಯೋಗದಲ್ಲಿ ಮೀಸಲಾತಿಗೆ ಒತ್ತಾಯಿಸಿ ಮರಾಠ ಸಮುದಾಯದಿಂದ ಹಿಂಸಾತ್ಮಕ ಪ್ರತಿಭಟನೆ

*ನವೆಂಬರ್ 15, 2015: ಮಹಾರಾಷ್ಟ್ರ ಸರ್ಕಾರಕ್ಕೆ ವರದಿ ಸಲ್ಲಿಸಿದ ಹಿಂದುಳಿದ ವರ್ಗಗಳ ಆಯೋಗ

*ನವೆಂಬರ್ 30, 2018: ಮರಾಠರು ಸಾಮಾಜಿಕವಾಗಿ, ಶೈಕ್ಷಣಿಕವಾಗಿ ಹಿಂದುಳಿದಸಮುದಾಯಕ್ಕೆ ಸೇರಿದವರು ಎಂದು ಸರ್ಕಾರದಿಂದ ಘೋಷಣೆ. ಶಿಕ್ಷಣ, ಉದ್ಯೋಗದಲ್ಲಿ ಶೇ 16ರಷ್ಟು ಮೀಸಲಾತಿ ನೀಡುವ ಮಸೂದೆ ಅಂಗೀಕಾರ

*ಡಿಸೆಂಬರ್ 3, 2018: ಸರ್ಕಾರದ ನಿರ್ಧಾರ ಪ್ರಶ್ನಿಸಿ ಬಾಂಬೆ ಹೈಕೋರ್ಟ್‌ನಲ್ಲಿ ಹಲವರಿಂದ ಅರ್ಜಿ ಸಲ್ಲಿಕೆ, ಮಧ್ಯಂತರ ತಡೆ ನೀಡಲು ಕೋರ್ಟ್ ನಕಾರ

*ಫೆಬ್ರುವರಿ 6, 2019: ವಿಭಾಗೀಯ ಪೀಠದಿಂದ ಅಂತಿಮ ವಿಚಾರಣೆ; ಆದೇಶ ಕಾಯ್ದಿರಿಸಿದ ಕೋರ್ಟ್

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.