ADVERTISEMENT

ವಿಪಕ್ಷಗಳ ಪೈಕಿ ಕೆಲವು ಬಿಜೆಪಿಗೆ ಬೆಂಬಲಿಸಿದ್ದು ದುರದೃಷ್ಟಕರ: ಮಾರ್ಗರೆಟ್‌ ಆಳ್ವ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 7 ಆಗಸ್ಟ್ 2022, 3:19 IST
Last Updated 7 ಆಗಸ್ಟ್ 2022, 3:19 IST
ಜಮ್ಮು ಮತ್ತು ಕಾಶ್ಮೀರದ ಮಾಜಿ ಮುಖ್ಯಮಂತ್ರಿ, ಸಂಸದ ಫಾರೂಖ್‌ ಅಬ್ದುಲ್ಲಾ ಅವರು ಪ್ರತಿಪಕ್ಷಗಳ ಉಪರಾಷ್ಟ್ರಪತಿ ಅಭ್ಯರ್ಥಿ ಮಾರ್ಗರೆಟ್‌ ಆಳ್ವ ಅವರಿಗೆ ಸಂಸತ್‌ ಭವನದಲ್ಲಿ ಚುನಾವಣೆ ವೇಳೆ ಹಸ್ತಲಾಘವ ನೀಡಿದರು. ಪಿಟಿಐ ಚಿತ್ರ
ಜಮ್ಮು ಮತ್ತು ಕಾಶ್ಮೀರದ ಮಾಜಿ ಮುಖ್ಯಮಂತ್ರಿ, ಸಂಸದ ಫಾರೂಖ್‌ ಅಬ್ದುಲ್ಲಾ ಅವರು ಪ್ರತಿಪಕ್ಷಗಳ ಉಪರಾಷ್ಟ್ರಪತಿ ಅಭ್ಯರ್ಥಿ ಮಾರ್ಗರೆಟ್‌ ಆಳ್ವ ಅವರಿಗೆ ಸಂಸತ್‌ ಭವನದಲ್ಲಿ ಚುನಾವಣೆ ವೇಳೆ ಹಸ್ತಲಾಘವ ನೀಡಿದರು. ಪಿಟಿಐ ಚಿತ್ರ   

ಬೆಂಗಳೂರು: ಉಪರಾಷ್ಟ್ರಪತಿ ಚುನಾವಣೆಯಲ್ಲಿ ಪ್ರತಿಪಕ್ಷಗಳ ಪೈಕಿ ಕೆಲವು ಪಕ್ಷಗಳು ಪ್ರತ್ಯಕ್ಷವಾಗಿ ಅಥವಾ ಪರೋಕ್ಷವಾಗಿ ಬಿಜೆಪಿಯನ್ನು ಬೆಂಬಲಿಸಿದ್ದು ದುರದೃಷ್ಟಕರ ಎಂದು ಕಾಂಗ್ರೆಸ್‌ನ ಮಾರ್ಗರೆಟ್‌ ಆಳ್ವ ಬೇಸರ ವ್ಯಕ್ತಪಡಿಸಿದ್ದಾರೆ.

ಉಪರಾಷ್ಟ್ರಪತಿ ಚುನಾವಣೆ ಫಲಿತಾಂಶ ಪ್ರಕಟವಾದ ಬಳಿಕ ಸರಣಿ ಟ್ವೀಟ್‌ ಮೂಲಕ ಪ್ರತಿಕ್ರಿಯಿಸಿರುವ ಮಾರ್ಗರೆಟ್‌ ಆಳ್ವ, ನೂತನ ಉಪರಾಷ್ಟ್ರಪತಿಯಾಗಿ ಚುನಾಯಿತರಾದ ಎನ್‌ಡಿಎ ಅಭ್ಯರ್ಥಿ ಜಗದೀಪ್‌ ಧನಕರ್‌ ಅವರಿಗೆ ಅಭಿನಂದನೆ ಸಲ್ಲಿಸಿದ್ದಾರೆ. ತಮ್ಮ ಪರವಾಗಿ ಮತ ಚಲಾಯಿಸಿದ ಎಲ್ಲ ಪ್ರತಿಪಕ್ಷಗಳಿಗೆ ಮತ್ತು ಸಂಸದರಿಗೆ ಧನ್ಯವಾದ ಹೇಳಿದ್ದಾರೆ.

ತಮ್ಮ ಪರವಾಗಿ ಪ್ರಚಾರ ಮಾಡಿದ ಬೆಂಬಲಿಗರಿಗೂ ಧನ್ಯವಾದ ಸಮರ್ಪಿಸಿದ್ದಾರೆ.

ADVERTISEMENT

'ಈ ಚುನಾವಣೆಯು ಪ್ರತಿಪಕ್ಷಗಳು ಒಟ್ಟಾಗಿ ಕೆಲಸ ಮಾಡಲು ಸಿಕ್ಕಿದ್ದ ಅವಕಾಶವಾಗಿದೆ. ಹಳೆಯದ್ದನ್ನು ಮರೆತು ಬಿಡಲು ಮತ್ತು ಪರಸ್ಪರ ಬಾಂಧವ್ಯಗಳನ್ನು ಗಟ್ಟಿಗೊಳಿಸಲು ಸಿಕ್ಕಿದ್ದ ಸುಸಂದರ್ಭವಾಗಿದೆ. ಆದರೆ ಕೆಲವು ಪಕ್ಷಗಳು ಪ್ರತ್ಯಕ್ಷವಾಗಿ ಅಥವಾ ಪರೋಕ್ಷವಾಗಿ ಬಿಜೆಪಿಯನ್ನು ಬೆಂಬಲಿಸಿದ್ದು ದುರದೃಷ್ಟಕರ. ಈ ಮೂಲಕ ಪ್ರತಿಪಕ್ಷಗಳ ಒಗ್ಗಟ್ಟನ್ನು ಮುರಿಯುವ ಪ್ರಯತ್ನ ಮಾಡಿದ್ದು ವಿಷಾದದ ಸಂಗತಿ' ಎಂದು ಮಾರ್ಗರೆಟ್‌ ಆಳ್ವ ಪ್ರತಿಕ್ರಿಯಿಸಿದ್ದಾರೆ.

'ಬಿಜೆಪಿ ಬೆಂಬಲಿಸುವ ಮೂಲಕ ಕೆಲವು ಪಕ್ಷಗಳು ಮತ್ತು ನಾಯಕರು ತಮ್ಮ ಘನತೆಗೆ ಹಾನಿ ಮಾಡಿಕೊಂಡಿದ್ದಾರೆ ಎಂಬುದು ನನ್ನ ನಂಬಿಕೆಯಾಗಿದೆ' ಎಂದು ಮಾರ್ಗರೆಟ್‌ ಆಳ್ವ ತಿಳಿಸಿದ್ದಾರೆ.

'ಈ ಚುನಾವಣೆ ಮುಗಿದಿದೆ. ಆದರೆ ನಮ್ಮ ಪ್ರಜಾಪ್ರಭುತ್ವದ ರಕ್ಷಣೆಗಾಗಿ, ಸಂವಿಧಾನವನ್ನು ಉಳಿಸುವುದಕ್ಕಾಗಿ ಮತ್ತು ನಮ್ಮ ಸಂಸತ್ತಿನ ಘನತೆಯನ್ನು ಮರುಸ್ಥಾಪಿಸುವುದಕ್ಕಾಗಿ ಹೋರಾಟವನ್ನು ಮುಂದುವರಿಸುತ್ತೇನೆ. ಜೈ ಹಿಂದ್‌' ಎಂದು ಆಳ್ವ ಅವರು ಟ್ವೀಟ್‌ ಮಾಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.