ADVERTISEMENT

ಕಡಲ ಭದ್ರತೆ: ಸಹಕಾರಕ್ಕೆ ಪ್ರಧಾನಿ ಮೋದಿ ಸಲಹೆ

ಯುಎನ್‌ಎಸ್‌ಸಿ ಸಭೆಯಲ್ಲಿ ಮಾತನಾಡಿದ ಪ್ರಧಾನಿ ಮೋದಿ

​ಪ್ರಜಾವಾಣಿ ವಾರ್ತೆ
Published 9 ಆಗಸ್ಟ್ 2021, 19:03 IST
Last Updated 9 ಆಗಸ್ಟ್ 2021, 19:03 IST
ನರೇಂದ್ರ ಮೋದಿ
ನರೇಂದ್ರ ಮೋದಿ   

ವಿಶ್ವಸಂಸ್ಥೆ(ಪಿಟಿಐ): ಕಡಲ ಭದ್ರತೆ ಹೆಚ್ಚಿಸಲು ಆದ್ಯತೆ ನೀಡಬೇಕು ಎಂದು ಪ್ರತಿಪಾದಿಸಿರುವ ಪ್ರಧಾನಿ ನರೇಂದ್ರ ಮೋದಿ ಅವರು, ಅಂತರರಾಷ್ಟ್ರೀಯ ಕಾನೂನುಗಳ ಅನ್ವಯ ವಿವಾದಗಳನ್ನು ಶಾಂತಿಯುತವಾಗಿ ಇತ್ಯರ್ಥಗೊಳಿಸಬೇಕು ಎಂದು ಸಲಹೆ ನೀಡಿದ್ದಾರೆ.

ಕಡಲ ಭದ್ರತೆ ಕುರಿತು ಸೋಮವಾರ ನಡೆದ ವಿಶ್ವಸಂಸ್ಥೆಯ ಭದ್ರತಾ ಮಂಡಳಿಯ ಸಭೆಯಲ್ಲಿ ಮಾತನಾಡಿದ ಪ್ರಧಾನಿ ಮೋದಿ, ಸುರಕ್ಷತೆ ಕ್ರಮಗಳಿಗಾಗಿ ಕಾರ್ಯತಂತ್ರ ರೂಪಿಸಲು ಐದು ಅಂಶಗಳ ಸೂತ್ರಗಳ ಪ್ರಸ್ತಾವನೆಯನ್ನು ಮುಂದಿಟ್ಟರು.

ವಿಡಿಯೊ ಕಾನ್ಫೆರೆನ್ಸ್‌ ಮೂಲಕ ಭಾಗವಹಿಸಿದ್ದ ಮೋದಿ, ‘ಸಮುದ್ರ ಮಾರ್ಗಗಳು ಅಂತರರಾಷ್ಟ್ರೀಯ ವ್ಯಾಪಾ ರದ ಜೀವನಾಡಿಯಾಗಿವೆ. ಆದರೆ, ಇಂತಹ ಮಾರ್ಗಗಳು ಭಯೋತ್ಪಾದನೆ ಚಟುವಟಿಕೆಗಳಿಗೂ ದುರುಪಯೋಗವಾಗುತ್ತಿವೆ’ ಎಂದು ಆತಂಕ ವ್ಯಕ್ತಪಡಿಸಿದರು.

ADVERTISEMENT

’ಮುಕ್ತ ಕಡಲು ವ್ಯಾಪಾರಕ್ಕೆ ಇರುವ ತೊಡಕುಗಳನ್ನು ತೆಗೆದು ಹಾಕಬೇಕಾಗಿದೆ. ಜಾಗತಿಕ ಪ್ರಗತಿಯು ಕಡಲು ವ್ಯಾಪಾರದ ಮೇಲೆ ಅಪಾರ ಅವಲಂಬನೆಯಾಗಿದೆ. ಆದರೆ, ಹಲವು ರೀತಿಯ ತೊಡಕುಗಳಿಂದ ಜಾಗ ತಿಕ ಆರ್ಥಿಕತೆ ಮೇಲೆ ಪರಿಣಾಮ ಬೀರು ತ್ತಿದೆ. ಸಮುದ್ರ ಸಂರಕ್ಷಣೆಗಾಗಿ ಪರಸ್ಪರ ಸಹಕಾರ ಅಗತ್ಯ. ಇದಕ್ಕೆ ಎಲ್ಲ ರಾಷ್ಟ್ರಗಳು ಕೈಜೋಡಿಸಬೇಕು’ ಎಂದರು.

ಅಂತರರಾಷ್ಟ್ರೀಯ ವಿವಾದಗಳ ಬಗ್ಗೆ ಪ್ರಸ್ತಾಪಿಸಿದ ಅವರು, ‘ಪರಿಸರ ವಿಶ್ವಾಸ ವೃದ್ಧಿಸಲು ಅಂತರ
ರಾಷ್ಟ್ರೀಯ ಕಾನೂನುಗಳನ್ನು ಪಾಲಿಸಿ, ಶಾಂತಿಯುತವಾಗಿ ವಿವಾದಗಳನ್ನು ಪರಿಹರಿಸಿಕೊಳ್ಳಬೇಕು. ಬಾಂಗ್ಲಾ ದೇಶದ ಜತೆಗಿನ ಬಿಕ್ಕಟ್ಟನ್ನು ಭಾರತವು ಇದೇ ಸೂತ್ರದ ಅನ್ವಯ ಬಗೆಹರಿಸಿಕೊಂಡಿತು. ಜಾಗತಿಕ ಶಾಂತಿ ಮತ್ತು ಸ್ಥಿರತೆಗೆ ಇಂತಹ ಕ್ರಮಗಳು ಅಗತ್ಯ’ ಎಂದು ವಿವರಿಸಿದರು.

ವಿಶ್ವಸಂಸ್ಥೆಯ ಭದ್ರತಾ ಮಂಡಳಿಯ ಮುಕ್ತ ಚರ್ಚೆಯ ಅಧ್ಯಕ್ಷತೆ ವಹಿಸಿಕೊಂಡಿದ್ದ ನರೇಂದ್ರ ಮೋದಿ ಅವರು ಭಾರತದ ಮೊದಲ ಪ್ರಧಾನಿ. ರಷ್ಯಾ ಪ್ರಧಾನಿ ವ್ಲಾದಿಮಿರ್‌ ಪುಟಿನ್‌, ಅಮೆರಿಕ ವಿದೇಶಾಂಗ ಕಾರ್ಯದರ್ಶಿ ಆಂಟನಿ ಬ್ಲಿಂಕೆನ್‌ ಸೇರಿ ದಂತೆ ಹಲವು ರಾಷ್ಟ್ರಗಳ ನಾಯಕರು ಭಾಗವಹಿಸಿ
ದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.