ADVERTISEMENT

ಕಾರ್ಯನಿಲ್ಲಿಸಿದ ಮಂಗಳಯಾನ ಕಕ್ಷೆಗಾಮಿ: ಇಸ್ರೊ ಮಾಹಿತಿ

​ಪ್ರಜಾವಾಣಿ ವಾರ್ತೆ
Published 2 ಅಕ್ಟೋಬರ್ 2022, 21:43 IST
Last Updated 2 ಅಕ್ಟೋಬರ್ 2022, 21:43 IST
   

ಬೆಂಗಳೂರು: ಮಂಗಳ ಗ್ರಹದ ಕಕ್ಷೆಯಲ್ಲಿ ಪರಿಭ್ರಮಣ ನಡೆಸಿ ಅಪರೂಪದ ಮಾಹಿತಿಗಳನ್ನು ಸಂಗ್ರಹಿಸಿ ಭೂಮಿಗೆ ಕಳುಹಿಸುತ್ತಿದ್ದ ಇಸ್ರೊದ ‘ಮಂಗಳಯಾನ’ ಕಕ್ಷೆಗಾಮಿ ತನ್ನ ಕಾರ್ಯವನ್ನು ಸ್ಥಗಿತಗೊಳಿಸಿದೆ.

ಬ್ಯಾಟರಿಗಳು ಬರಿದಾಗಿರುವುದರಿಂದ ಕಕ್ಷೆಗಾಮಿಯು ಕಾರ್ಯನಿರ್ವಹಿಸಲು ಸಾಧ್ಯವಾಗಿಲ್ಲ ಎಂದುಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆಯ (ಇಸ್ರೊ) ಮೂಲಗಳು ತಿಳಿಸಿವೆ.

‘ಸದ್ಯ ಇಂಧನ ಖಾಲಿಯಾಗಿದೆ. ಉಪಗ್ರಹದ ಬ್ಯಾಟರಿಯೂ ಬರಿದಾಗಿದೆ. ಜತೆಗೆ ಸಂಪರ್ಕವೂ ಕಡಿತಗೊಂಡಿದೆ’ ಎಂದು ಇಸ್ರೊ ಮೂಲಗಳು ತಿಳಿಸಿವೆ. ಆದರೆ, ಇಸ್ರೊ ಈ ಬಗ್ಗೆ ಅಧಿಕೃತ ಹೇಳಿಕೆ ನೀಡಿಲ್ಲ.

ADVERTISEMENT

’ಮಂಗಳಯಾನದ ಕಕ್ಷೆಗಾಮಿಯು ಮಂಗಳ ಗ್ರಹದ ಕಕ್ಷೆಯಲ್ಲಿ ಪರಿಭ್ರಮಣ ಆರಂಭಿಸಿ ಎಂಟು ವರ್ಷಗಳಾಗಿತ್ತು. ಕೇವಲ ಆರು ತಿಂಗಳ ಅವಧಿಗೆ ಕಾರ್ಯ ನಿರ್ವಹಿಸಲು ಇದನ್ನು ಅಭಿವೃದ್ಧಿಪಡಿಸಲಾಗಿತ್ತು. ಆದರೆ, ಅವಧಿ ಮೀರಿ ಈ ಕಕ್ಷೆಗಾಮಿ ಕಾರ್ಯನಿರ್ವಹಿಸಿದೆ.ಇದು ತನ್ನ ಕಾರ್ಯವನ್ನು ಸಂಪೂರ್ಣವಾಗಿ ಮತ್ತು ಸಮರ್ಥವಾಗಿ ಪೂರೈಸಿದ್ದು, ಮಹತ್ವದ ವೈಜ್ಞಾನಿಕ ಫಲಿತಾಂಶಗಳನ್ನು ಒದಗಿಸಿದೆ’ ಎಂದು ಮೂಲಗಳು ತಿಳಿಸಿವೆ.

2013 ರ ನವೆಂಬರ್‌ 5 ರಂದು₹450 ಕೋಟಿ ವೆಚ್ಚದ ಮಂಗಳಯಾನ ಯೋಜನೆ ಕಾರ್ಯ ರೂಪಕ್ಕೆ ಬಂದಿತ್ತು. ‘ಪಿಎಸ್‌ಎಲ್‌ವಿ–ಸಿ25’ ರಾಕೆಟ್‌ ಮೂಲಕ 2014ರ ಸೆ.24 ರಂದು ಯಶಸ್ವಿಯಾಗಿ ಮಂಗಳ ಗ್ರಹದ ಕಕ್ಷೆಯಲ್ಲಿ ಕಕ್ಷೆಗಾಮಿಯನ್ನು ಯಶಸ್ವಿಯಾಗಿ ಸೇರಿಸಲಾಗಿತ್ತು. ಎಂಟು ವರ್ಷಗಳ ಅವಧಿಯಲ್ಲಿ ಆ ಗ್ರಹದ ಚಿತ್ರಗಳೂ ಸೇರಿ ಸಾಕಷ್ಟು ಮಾಹಿತಿಗಳನ್ನು ಭೂಮಿಗೆ ಕಳುಹಿಸಿತ್ತು.

ಮೊದಲ ಪ್ರಯತ್ನದಲ್ಲೇ ಮಂಗಳ ಗ್ರಹದ ಕಕ್ಷೆಗೆ ಕಕ್ಷೆಗಾಮಿಯನ್ನು ಸೇರಿಸುವ ಮೂಲಕ ಇಸ್ರೊ
ಇಡೀ ವಿಶ್ವದಲ್ಲೇ ಸಂಚಲನ ಮೂಡಿಸಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.