ADVERTISEMENT

ಮನೆಗಳ ಒಳಗೂ ಮಾಸ್ಕ್ ಹಾಕುವ ಸಮಯ ಬಂದಿದೆ: ಡಾ ವಿ ಕೆ ಪಾಲ್

ಪಿಟಿಐ
Published 26 ಏಪ್ರಿಲ್ 2021, 15:08 IST
Last Updated 26 ಏಪ್ರಿಲ್ 2021, 15:08 IST
ಮಾಸ್ಕ್
ಮಾಸ್ಕ್   

ನವದೆಹಲಿ: ಕೊರೊನಾ ವೈರಸ್ ಸಾಂಕ್ರಾಮಿಕ ರೋಗದ ಎರಡನೇ ಅಲೆಯು ದೇಶದಾದ್ಯಂತ, ಭಾರೀ ಪರಿಣಾಮ ಬೀರಿರುವುದರಿಂದ ಜನರು ಮನೆಗಳ ಒಳಗೂ ಮಾಸ್ಕ್‌ಗಳನ್ನು ಧರಿಸಲು ಆರಂಭಿಸುವ ಸಮಯವಿದು. ಮನೆಗೆ ಅತಿಥಿಗಳನ್ನು ಆಹ್ವಾನಿಸುವುದನ್ನು ತಡೆಯಿರಿ ಎಂದು ಸರ್ಕಾರ ಸೋಮವಾರ ತಿಳಿಸಿದೆ.

ಸುದ್ದಿಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ನೀತಿ ಆಯೋಗದ ಸದಸ್ಯ ಡಾ ವಿ ಕೆ ಪಾಲ್ ಅವರು ಮನೆಯೊಳಗೆ ಕೋವಿಡ್-ಪಾಸಿಟಿವ್ ಆಗಿರುವ ವ್ಯಕ್ತಿ ಇದ್ದರೆ, ಅವನು ಅಥವಾ ಅವಳು ಮಾಸ್ಕ್ ಧರಿಸಬೇಕು. ಇದರಿಂದ ಕುಟುಂಬದ ಇತರ ಸದಸ್ಯರು ಸೋಂಕಿಗೆ ಒಳಗಾಗುವುದನ್ನು ತಡೆಯಬಹುದು ಎಂದು ಹೇಳಿದ್ದಾರೆ.

‘ನಾವು ನಮ್ಮ ಮನೆಗಳ ಒಳಗೆ ಮಾಸ್ಕ್‌ಗಳನ್ನು ಧರಿಸಲು ಪ್ರಾರಂಭಿಸುವ ಸಮಯ ಬಂದಿದೆ ಎಂದು ನಾನು ಹೇಳುತ್ತೇನೆ. ನಾವು ಮನೆಗಳ ಹೊರಗೆ ಮಾಸ್ಕ್ ಧರಿಸುವ ಬಗ್ಗೆ ಮಾತನಾಡುತ್ತಿದ್ದೆವು, ಆದರೆ, ಈಗ ಸೋಂಕು ಹರಡಿರುವ ರೀತಿ ನೋಡಿದರೆ ನಾವು ಮನೆಗಳ ಒಳಗೂ ಮಾಸ್ಕ್ ಧರಿಸುವುದು ಉತ್ತಮವಾಗಿರುತ್ತದೆ’ ಎಂದು ಅವರು ಹೇಳಿದರು.

ADVERTISEMENT

‘ಮನೆಯಲ್ಲಿ ಕೋವಿಡ್ 19 ಪಾಸಿಟಿವ್ ಆಗಿರುವ ವ್ಯಕ್ತಿ ಇದ್ದರೆ, ಆ ವ್ಯಕ್ತಿಯು ಮಾಸ್ಕ್ ಧರಿಸಬೇಕು ಮತ್ತು ಮನೆಯೊಳಗಿನ ಇತರರು ಸಹ ಮಾಸ್ಕ್ ಧರಿಸಬೇಕು. ಕೋವಿಡ್ ರೋಗಿಯನ್ನು ವ್ಯಕ್ತಿಯನ್ನು ಬೇರೆ ಕೋಣೆಯಲ್ಲಿ ಇಡಬೇಕು’ ಎಂದು ಪಾಲ್ ಒತ್ತಿ ಹೇಳಿದ್ದಾರೆ.

ಕೋವಿಡ್–10 ಸಾಂಕ್ರಾಮಿಕದ ಹಿಂದಿರುವ ಸಾರ್ಸ್-ಕೋವ್-2 ವೈರಸ್ ಪ್ರಧಾನವಾಗಿ ಗಾಳಿಯ ಮೂಲಕ ಹರಡುತ್ತದೆ ಎಂಬುದನ್ನು ಸಾಬೀತುಪಡಿಸಲು ಸ್ಥಿರವಾದ, ಬಲವಾದ ಪುರಾವೆಗಳಿವೆ ಎಂದು ದಿ ಲ್ಯಾನ್ಸೆಟ್ ಜರ್ನಲ್‌ನಲ್ಲಿ ಪ್ರಕಟವಾದ ಹೊಸ ಮೌಲ್ಯಮಾಪನ ವರದಿ ಪ್ರಕಟವಾದ ಕೆಲ ದಿನಗಳಬಳಿಕ ಈ ಹೇಳಿಕೆ ಹೊರಬಿದ್ದಿದೆ.

ಮನೆಯಲ್ಲಿ ಕೋವಿಡ್ ರೋಗಿಗಳ ಪ್ರತ್ಯೇಕತೆಗೆ ಸೌಲಭ್ಯಗಳು ಇಲ್ಲದಿದ್ದರೆ, ಜನರು ಕೊರೊನಾ ಕೇರ್ ಕೇಂದ್ರಗಳಿಗೆ ಹೋಗಬಹುದು ಎಂದು ಅವರು ಸಲಹೆ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.