ADVERTISEMENT

ಮುಖವಾಡ ಧರಿಸಿದ ದುಷ್ಕರ್ಮಿಗಳಿಂದ ಜೆಎನ್‌ಯು ವಿದ್ಯಾರ್ಥಿ, ಶಿಕ್ಷಕರ ಮೇಲೆ ಹಲ್ಲೆ

ಏಜೆನ್ಸೀಸ್
Published 5 ಜನವರಿ 2020, 15:54 IST
Last Updated 5 ಜನವರಿ 2020, 15:54 IST
ದುಷ್ಕರ್ಮಿಗಳಿಂದ ಕ್ಯಾಂಪಸ್ ಒಳಗೆ ದಾಂಧಲೆ  (ಟ್ವಿಟರ್ ಚಿತ್ರ)
ದುಷ್ಕರ್ಮಿಗಳಿಂದ ಕ್ಯಾಂಪಸ್ ಒಳಗೆ ದಾಂಧಲೆ (ಟ್ವಿಟರ್ ಚಿತ್ರ)   

ನವದೆಹಲಿ: ಮುಖವಾಡ ಧರಿಸಿದ ದುಷ್ಕರ್ಮಿಗಳ ಗುಂಪೊಂದು ದೆಹಲಿಯ ಪ್ರತಿಷ್ಠಿತ ಜವಾಹರ್ ನೆಹರು ವಿಶ್ವವಿದ್ಯಾಲಯದ ಕ್ಯಾಂಪಸ್‌ ಒಳಗೆ ನುಗ್ಗಿ ವಿದ್ಯಾರ್ಥಿ ಮತ್ತು ಶಿಕ್ಷಕರ ಮೇಲೆ ಹಲ್ಲೆ ನಡೆಸಿದ ಘಟನೆ ಭಾನುವಾರ ಸಂಜೆ ನಡೆದಿದೆ.

ಜೆಎನ್‌ಯು ವಿದ್ಯಾರ್ಥಿಗಳ ಸಂಘಟನೆಯ ಅಧ್ಯಕ್ಷೆಸೇರಿದಂತೆ ಹಲವಾರು ವಿದ್ಯಾರ್ಥಿಗಳಿಗೆ ಗಂಭೀರ ಗಾಯಗಳಾಗಿವೆ.

ಸುಮಾರು 50 ಮಂದಿ ದುಷ್ಕರ್ಮಿಗಳು ಮುಖವಾಡ ಧರಿಸಿ ಸಂಜೆ 6.30ರ ವೇಳೆಗೆ ಕ್ಯಾಂಪಸ್ ಒಳಗೆ ನುಗ್ಗಿದ್ದರು ಎಂದು ಪ್ರತ್ಯಕ್ಷದರ್ಶಿಯೊಬ್ಬರು ಹೇಳಿದ್ದಾರೆ.

ADVERTISEMENT

ಕ್ಯಾಂಪಸ್ ಒಳಗೆ ನುಗ್ಗಿದ ದುಷ್ಕರ್ಮಿಗಳು ಹಾಸ್ಟೆಲ್ ಒಳಗೆ ನುಗ್ಗಿ ಕಲ್ಲು ತೂರಾಟ ನಡೆಸಿದ್ದಾರೆ ಎಂದು ಜೆಎನ್‌ಯು ಪ್ರೊಫೆಸರ್ ಅತುಲ್ ಸೂಡ್ ಆವರು ಹೇಳಿರುವುದಾಗಿ ಎನ್‌ಡಿಟಿವಿ ವರದಿ ಮಾಡಿದೆ.

ಜೆಎನ್‌ಯು ವಿದ್ಯಾರ್ಥಿ ಸಂಘಟನೆಗಳ ಅಧ್ಯಕ್ಷೆ ಆಶೆ ಘೋಷ್ ಅವರ ಮೇಲೆ ದುಷ್ಕರ್ಮಿಗಳು ತೀವ್ರ ಹಲ್ಲೆ ನಡೆಸಿದ್ದಾರೆ.

ಜೆಎನ್‌ಯುವಿನ ಸಬರ್‌ಮತಿ ಹಾಸ್ಟೆಲ್‌ಗೆ ನುಗ್ಗಿದ ದುಷ್ಕರ್ಮಿಗಳು ರಾಡ್, ಬಡಿಗೆಗಳಿಂದ ವಿದ್ಯಾರ್ಥಿ ಮತ್ತು ಪ್ರೊಫೆಸರ್‌ಗಳ ಮೇಲೆ ಹಲ್ಲೆ ನಡೆಸಿದ್ದಾರೆ.

ಮುಖವಾಡ ಧರಿಸಿದ ಗೂಂಡಾಗಳು ನನ್ನ ಮೇಲೆ ಗಂಭೀರ ಹಲ್ಲೆ ನಡೆಸಿದ್ದಾರೆ. ರಕ್ತ ಹರಿಯುತ್ತಿದೆ ಎಂದು ಜೆಎನ್‌ಯು ವಿದ್ಯಾರ್ಥಿ ಸಂಘಟನೆಗಳ ಅಧ್ಯಕ್ಷೆ ಆಶೆ ಘೋಷ್ ಮಾಧ್ಯಮದವರಲ್ಲಿ ಹೇಳಿದ್ದಾರೆ.
ಆಶೆ ಅವರನ್ನು ಎಐಐಎಂಎಸ್‌ನಲ್ಲಿ ದಾಖಲಿಸಲಾಗಿದೆ.

ಮುಖವಾಡ ಧರಿಸಿದ ಗುಂಪೊಂದು ಕ್ಯಾಂಪಸ್‌ ಒಳಗೆ ನುಗ್ಗಿ ಮರದ ಬಡಿಗೆ ಮತ್ತು ರಾಡ್ ಬಳಸಿ ದಾಂಧಲೆ ನಡೆಸುತ್ತಿರುವುದು ಕ್ಯಾಮೆರದಲ್ಲಿ ಸೆರೆಯಾಗಿದೆ.

ಜೆಎನ್‌ಯು ವಿದ್ಯಾರ್ಥಿಗಳ ಯೂನಿಯನ್ ಟ್ವಿಟರ್ ಖಾತೆಯು ಈ ಘಟನೆ ಬಗ್ಗೆ ಟ್ವೀಟಿಸಿದ್ದು ಟ್ವಿಟರ್‌ನಲ್ಲಿ #SOSJNU #EmergencyinJNU ಟ್ರೆಂಡ್ ಆಗಿದೆ.

ನಮ್ಮನ್ನು ರಕ್ಷಿಸಲೆತ್ನಿಸಿದ ಪ್ರೊಫೆಸರ್ ಮೇಲೆ ಹಲ್ಲೆ ನಡೆದಿದೆ. ಇವರು ಎಬಿವಿಪಿ ಸಂಘಟನೆಯ ಗೂಂಡಾಗಳು. ಅವರು ವಿದ್ಯಾರ್ಥಿಗಳಲ್ಲ. ಅವರು ಮುಖ ಮುಚ್ಚಿದ್ದು ವೆಸ್ಟ್ ಗೇಟ್ ಬಳಿ ಇರುವ ಹಾಸ್ಟೆಲ್‌ನತ್ತ ಹೋಗುತ್ತಿದ್ದಾರೆ. ಎಚ್ಚರಿಕೆಯಿಂದಿರಿ. ಮಾನವ ಸರಪಳಿ ನಿರ್ಮಿಸಿ ಒಬ್ಬರನ್ನೊಬ್ಬರು ರಕ್ಷಿಸಿ ಎಂದು ಇನ್ನೊಂದು ಟ್ವೀಟ್‌ನಲ್ಲಿ ಹೇಳಲಾಗಿದೆ.

ಏತನ್ಮಧ್ಯೆ, ಜೆಎನ್‌ಯುನಲ್ಲಿ ತುರ್ತು ಪರಿಸ್ಥಿತಿ. ಜೆಎನ್‌ಯುನಲ್ಲಿರುವ ಎಡಪಕ್ಷದ ಗೂಂಡಾಗಳು ಇತರ ವಿಶ್ವವಿದ್ಯಾಲಯದವರೊಂದಿಗೆ ಸೇರಿ ಎಲ್ಲ ಪರಿಮಿತಿಗಳನ್ನು ಮೀರಿದ್ದಾರೆ. ಜೆಎನ್‌ಯುನಲ್ಲಿರುವ ಎಬಿವಿಪಿ ಕಾರ್ಯಕರ್ತರ ಮೇಲೆ ಅವರು ಹಿಂಸಾಚಾರ ನಡೆಸುತ್ತಿದ್ದಾರೆ ಎಂದು ಜೆಎನ್‌ಯು ಎಬಿವಿಪಿ ಘಟಕ ಟ್ವೀಟಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.