ADVERTISEMENT

ನ್ಯಾಯಾಂಗ ನಿಂದನೆ ಕ್ರಮ: ಸುಪ್ರೀಂ ಕೋರ್ಟ್‌ ಎಚ್ಚರಿಕೆ

ದಾರಿ ತಪ್ಪಿಸುವ ಜಾಹೀರಾತುಗಳು: ಕ್ರಮ ಕೈಗೊಳ್ಳದ ರಾಜ್ಯಗಳು/ಕೇಂದ್ರಾಡಳಿತ ಪ್ರದೇಶಗಳು

​ಪ್ರಜಾವಾಣಿ ವಾರ್ತೆ
Published 15 ಜನವರಿ 2025, 15:52 IST
Last Updated 15 ಜನವರಿ 2025, 15:52 IST
–
   

ನವದೆಹಲಿ(ಪಿಟಿಐ): ದಾರಿತಪ್ಪಿಸುವ ಜಾಹೀರಾತುಗಳ ಕುರಿತು ಕ್ರಮ ಕೈಗೊಳ್ಳುವಲ್ಲಿ ವಿಫಲವಾದಲ್ಲಿ ನ್ಯಾಯಾಂಗ ನಿಂದನೆ ಪ್ರಕರಣ ದಾಖಲಿಸಲಾಗುವುದು ಎಂದು ರಾಜ್ಯಗಳು/ಕೇಂದ್ರಾಡಳಿತ ಪ್ರದೇಶಗಳಿಗೆ ಸುಪ್ರೀಂ ಕೋರ್ಟ್‌ ಬುಧವಾರ ಎಚ್ಚರಿಸಿದೆ.

ಈ ಕುರಿತ ಅರ್ಜಿ ವಿಚಾರಣೆ ನಡೆಸಿದ, ನ್ಯಾಯಮೂರ್ತಿಗಳಾದ ಅಭಯ್‌ ಎಸ್‌.ಓಕಾ ಹಾಗೂ ಉಜ್ಜಲ್‌ ಭುಯಾನ್‌ ಅವರಿದ್ದ ಪೀಠ, ‘ಸುಪ್ರೀಂ ಕೋರ್ಟ್‌ ನಿರ್ದೇಶನ ಪಾಲನೆ ಮಾಡದಿರುವುದು ಕಂಡುಬಂದಲ್ಲಿ, ಸಂಬಂಧಪಟ್ಟ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳ ವಿರುದ್ಧ ನ್ಯಾಯಾಂಗ ನಿಂದನೆ ಕಾಯ್ದೆ–1971 ಪ್ರಕಾರ ಕ್ರಮ ಜರುಗಿಸಲಾಗುವುದು’ ಎಂದು ಹೇಳಿದೆ.

ಈ ವಿಚಾರವಾಗಿ ಸುಪ್ರೀಂ ಕೋರ್ಟ್‌ಗೆ ನೆರವಾಗಲು ನೇಮಕವಾಗಿರುವ (ಅಮಿಕಲ್‌ ಕ್ಯೂರಿ) ಹಿರಿಯ ವಕೀಲ ಶಾದಾನ್ ಫರಾಸತ್‌ ಅವರು ಟಿಪ್ಪಣಿಯೊಂದನ್ನು ಪೀಠಕ್ಕೆ ಸಲ್ಲಿಸಿದ್ದಾರೆ. ಹಲವಾರು ರಾಜ್ಯಗಳು, ಈ ವಿಚಾರವಾಗಿ ಕ್ರಮ ಕೈಗೊಳ್ಳದ ಬಗ್ಗೆ ಟಿಪ್ಪಣಿಯಲ್ಲಿ ಅವರು ಉಲ್ಲೇಖಿಸಿದ್ದನ್ನು ಗಂಭೀರವಾಗಿ ಪರಿಗಣಿಸಿದ ಪೀಠ, ಈ ಎಚ್ಚರಿಕೆ ನೀಡಿದೆ.

ADVERTISEMENT

ಕರ್ನಾಟಕ, ಜಾರ್ಖಂಡ್, ಕೇರಳ, ಮಧ್ಯಪ್ರದೇಶ ಹಾಗೂ ಪಂಜಾಬ್‌ ಸಲ್ಲಿಸಿರುವ ಅನುಪಾಲನಾ ವರದಿ ಬಗ್ಗೆ ಫೆಬ್ರುವರಿ 24ರಂದು ಹಾಗೂ ಇತರ ರಾಜ್ಯಗಳು/ಕೇಂದ್ರಾಡಳಿತ ಪ್ರದೇಶಗಳ ವರದಿ ಕುರಿತು ಮಾರ್ಚ್ 17ರಂದು ನಿರ್ಣಯಿಸಲಾಗುವುದು ಎಂದು ಪೀಠ ಹೇಳಿದೆ.

ಕೋವಿಡ್‌ ಲಸಿಕೆ ಅಭಿಯಾನ ಹಾಗೂ ಆಧುನಿಕ ವೈದ್ಯಕೀಯ ಪದ್ಧತಿ ಕುರಿತು ಪತಂಜಲಿ ಆಯುರ್ವೇದ ಲಿಮಿಟೆಡ್‌ ಅಪಪ್ರಚಾರ ಮಾಡುತ್ತಿದೆ ಎಂದು ಆರೋಪಿಸಿ 2022ರಲ್ಲಿ ಭಾರತೀಯ ವೈದ್ಯಕೀಯ ಸಂಸ್ಥೆ (ಐಎಂಎ) ಮೇಲ್ಮನವಿ ಸಲ್ಲಿಸಿತ್ತು. ಈ ಮೇಲ್ಮನವಿ ವಿಚಾರಣೆ ವೇಳೆ, ದಾರಿ ತಪ್ಪಿಸುವ ಜಾಹೀರಾತುಗಳ ವಿರುದ್ಧ ಕ್ರಮ ಕೈಗೊಳ್ಳುವಂತೆ ಸುಪ್ರೀಂ ಕೋರ್ಟ್‌ ನಿರ್ದೇಶನ ನೀಡಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.