ADVERTISEMENT

UP Elections 2022: ಕೇಂದ್ರ ಗೃಹ ಸಚಿವ ಅಮಿತ್ ಶಾರನ್ನು ಹೊಗಳಿದ ಮಾಯಾವತಿ

ಪಿಟಿಐ
Published 23 ಫೆಬ್ರುವರಿ 2022, 10:48 IST
Last Updated 23 ಫೆಬ್ರುವರಿ 2022, 10:48 IST
ಮಾಯಾವತಿ
ಮಾಯಾವತಿ   

ಲಖನೌ: ಉತ್ತರ ಪ್ರದೇಶ ವಿಧಾನಸಭೆ ಚುನಾವಣೆಯಲ್ಲಿ ಬಹುಜನ ಸಮಾಜ ಪಕ್ಷವನ್ನು (ಬಿಎಸ್‌ಪಿ) ಕಡೆಗಣಿಸಲು ಸಾಧ್ಯವಿಲ್ಲ ಎಂಬ ಕೇಂದ್ರ ಗೃಹ ಸಚಿವರ ಹೇಳಿಕೆಗೆ ಪ್ರತಿಕ್ರಿಯಿಸಿರುವ ಬಿಎಸ್‌ಪಿ ಅಧ್ಯಕ್ಷೆ ಮಾಯಾವತಿ, ಸತ್ಯವನ್ನು ಒಪ್ಪಿಕೊಂಡಿರುವುದು ಅಮಿತ್ ಶಾ ಅವರ ದೊಡ್ಡತನ ಎಂದು ಹೇಳಿದ್ದಾರೆ.

ನಾಲ್ಕನೇ ಹಂತದಲ್ಲಿ ಮತದಾನದ ಹಕ್ಕು ಚಲಾಯಿಸಿದ ಬಳಿಕ ವರದಿಗಾರರೊಂದಿಗೆ ಮಾತನಾಡುತ್ತಾ ಮಾಯಾವತಿ ಈ ರೀತಿಯಾಗಿ ಪ್ರತಿಕ್ರಿಯಿಸಿದ್ದಾರೆ.

ಈ ಮೊದಲು ಹೇಳಿಕೆ ನೀಡಿದ್ದ ಅಮಿತ್ ಶಾ, ಬಿಎಸ್‌ಪಿ ತನ್ನ ಪ್ರಾಮುಖ್ಯತೆಯನ್ನು ಉಳಿಸಿಕೊಂಡಿದೆ. ಆ ಪಕ್ಷಕ್ಕೆಮತ ಸಿಗುವ ನಂಬಿಕೆಯಿದೆ. ಆದರೆ ಎಷ್ಟು ಸೀಟುಗಳಾಗಿ ಪರಿವರ್ತನೆಯಾಗಲಿದೆ ಎಂಬುದು ಗೊತ್ತಿಲ್ಲ ಎಂದು ಹೇಳಿದ್ದರು.

ADVERTISEMENT

ಉತ್ತರ ಪ್ರದೇಶ ಚುನಾವಣೆಯಲ್ಲಿ 2007ರ ಸಾಧನೆಯನ್ನು ಪುನರಾವರ್ತಿಸಲಿದೆ ಎಂದಿರುವ ಮಾಯಾವತಿ, ಸಮಾಜವಾದಿ ಪಕ್ಷದ (ಎಸ್‌ಪಿ) ಅಧ್ಯಕ್ಷ ಅಖಿಲೇಶ್ ಕುಮಾರ್ ಅವರ ಸರ್ಕಾರ ರಚಿಸುವ ಕನಸು ಭಗ್ನಗೊಳ್ಳಲಿದೆ ಎಂದು ಹೇಳಿದ್ದಾರೆ.

ಮಾರ್ಚ್ 10ರಂದು ಫಲಿತಾಂಶಗಳು ಪ್ರಕಟವಾದಾಗ, ಬಿಎಸ್‌ಪಿ 2007ರಂತೆ ಪೂರ್ಣ ಬಹುಮತದೊಂದಿಗೆ ಸರ್ಕಾರವನ್ನು ರಚಿಸಲಿದೆ. ಸಮಾಜದ ಎಲ್ಲ ವಿಭಾಗದವರಿಂದ ಬೆಂಬಲ ಸಿಗಲಿದೆ ಎಂದು ಹೇಳಿದರು.

ಸಮಾಜವಾದಿ ಪಕ್ಷದ ಕಾರ್ಯ ವೈಖರಿ ಬಗ್ಗೆ ಮುಸ್ಲಿಮರು ಅಸಮಾಧಾನಗೊಂಡಿದ್ದಾರೆ. ಬಿಎಸ್‌ಪಿಗೆ ದಲಿತರು ಮಾತ್ರವಲ್ಲದೆ ಮುಸ್ಲಿಂ, ಹಿಂದುಳಿದ ವರ್ಗ ಮತ್ತು ಮೇಲ್ಜಾತಿಯ ಬೆಂಬಲವಿದೆ ಎಂದು ಹೇಳಿದರು.

ಸಮಾಜವಾದಿ ಪಕ್ಷ ಸರ್ಕಾರ ರಚಿಸುವ ಕನಸು ಕಾಣುತ್ತಿದ್ದು, ಆ ಕನಸು ಭಗ್ನವಾಗಲಿದೆ. ಎಸ್‌ಪಿ ಅಧಿಕಾರದಲ್ಲಿದ್ದಾಗ ದಲಿತರು, ಹಿಂದುಳಿದ ವರ್ಗದವರು, ಬಡವರು ಮತ್ತು ಬ್ರಾಹ್ಮಣರು ಕಿರುಕುಳಕ್ಕೊಳಗಾಗಿದ್ದರು ಎಂದು ಆರೋಪಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.