ADVERTISEMENT

ಮೀ–ಟೂ ಆರೋಪ ಮಾಡಿದ್ದ ವಿದ್ಯಾರ್ಥಿನಿಯರಿಗೆ ಕಾಲೇಜಿನಿಂದ ಗೇಟ್‌ಪಾಸ್

​ಪ್ರಜಾವಾಣಿ ವಾರ್ತೆ
Published 28 ಅಕ್ಟೋಬರ್ 2018, 16:36 IST
Last Updated 28 ಅಕ್ಟೋಬರ್ 2018, 16:36 IST
   

ಹೈದರಾಬಾದ್: ಸಹಾಯಕ ಪ್ರಾಧ್ಯಾಪಕರ ವಿರುದ್ಧ ಮೀ–ಟೂ ಆರೋಪ ಮಾಡಿದ್ದ ಇಲ್ಲಿನ ಸಿಂಬಾಯ್‌ಸಿಸ್ ಲಾ ಸ್ಕೂಲ್‌ನ ಇಬ್ಬರು ವಿದ್ಯಾರ್ಥಿನಿಯರನ್ನು ಕಾಲೇಜಿನ ಹಾಸ್ಟೆಲ್‌ನಿಂದ ಶುಕ್ರವಾರ ಹೊರಹಾಕಲಾಗಿದೆ.

ಅಪೂರ್ವ ಯರಬಹಳ್ಳಿ ಹಾಗೂ ಸ್ನಿಗ್ಧ ಜಯಕೃಷ್ಣನ್ ಅವರುಸಹ ಪ್ರಾಧ್ಯಾಪಕ ಶ್ರೀನಿವಾಸ ಮೇತುಕು ವಿರುದ್ಧ ಲೈಂಗಿಕ ಕಿರುಕುಳ ಆರೋಪ ಮಾಡಿದ್ದರು. ಈ ಸಂಬಂಧ ಕೇಂದ್ರ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಸಚಿವೆ ಮೇನಕಾ ಗಾಂಧಿ, ರಾಷ್ಟ್ರೀಯ ಮಹಿಳಾ ಆಯೋಗ, ಕೆಲವು ಸಂಘಟನೆಗಳಿಗೆ ಏಪ್ರಿಲ್ ತಿಂಗಳಿನಲ್ಲಿ ಇವರು ಪತ್ರ ಬರೆದಿದ್ದರು. ಅಲ್ಲದೇವಿಭಾಗದ ಮುಖ್ಯಸ್ಥರಾದ ಶಶಿಕಲಾ ಗುರುಪುರ್ ವಿರುದ್ಧ ನಂದಿಗ್ರಾಮ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದರು.

ಈ ಸಂಬಂಧ ಪ್ರತಿಕ್ರಿಯೆ ನೀಡಿದ್ದ ಸಿಂಬಾಯ್‌ಸಿಸ್‌ ಸ್ವಾಯತ್ತ ವಿಶ್ವವಿದ್ಯಾಲಯದ ರಿಜಿಸ್ಟ್ರಾರ್ ಡಾ. ಶೇಜುಲ್ ಅವರು, ‘ಮೆತುಕು ಅವರಿಗೆ ನಿರ್ದೇಶಕರು ಎಚ್ಚರಿಕೆ ನೀಡಿದ್ದಾರೆ. ಜೊತೆಗೆ ಅವರ ಮೇಲೆ ಹೊರಿಸಿರುವ ಇತರ ಆರೋಪಗಳು ಸುಳ್ಳು’ ಎಂದಿದ್ದರು.

ADVERTISEMENT

ಇದಾದ ಬಳಿಕ ಇದೇ ಅಕ್ಟೋಬರ್‌ನಲ್ಲಿ ತಮ್ಮ ಇನ್‌ಸ್ಟಾಗ್ರಾಂ ಖಾತೆಯ ಕೆಲವು ಸ್ಕ್ರೀನ್‌ಶಾಟ್‌ಗಳನ್ನು ಅಪೂರ್ವ ಅವರು ಫೇಸ್‌ಬುಕ್‌ನಲ್ಲಿ ಪೋಸ್ಟ್ ಮಾಡಿದ್ದರು. ‘ಶ್ರೀನಿವಾಸ್ ಅವರು ನನ್ನ ಸ್ತನಗಳನ್ನು ದಿಟ್ಟಿಸಿ ನೋಡಿ, ಅಸಹ್ಯ ರೀತಿಯಲ್ಲಿ ನಡೆದುಕೊಂಡರು’ ಎಂದು ಬರೆದುಕೊಂಡಿದ್ದರು.

ಪೋಸ್ಟ್‌ಗಳನ್ನು ತೆಗೆದುಹಾಕಿ ಕ್ಷಮೆ ಕೇಳುವಂತೆ ವಿದ್ಯಾರ್ಥಿ ವ್ಯವಹಾರ ವಿಭಾಗದ ಮುಖ್ಯಸ್ಥೆ ಪೂಜಾ ಮಲ್ಹಾನ್ ಅವರು ಅಪೂರ್ವ ಅವರಿಗೆ ಎಚ್ಚರಿಕೆ ನೀಡಿದ್ದರು ಎನ್ನಲಾಗಿದೆ.

ಮುಂದಿನ ಕ್ರಮ ತೆಗೆದುಕೊಳ್ಳುವವರೆಗೆ ಕ್ಯಾಂಪಸ್‌ ಅನ್ನು ಖಾಲಿ ಮಾಡುವಂತೆ ವಿದ್ಯಾರ್ಥಿನಿಯರಿಗೆ ಸೂಚಿಸಿ, ಅಕ್ಟೋಬರ್ 26ರವರೆಗೆ ಗಡುವು ನೀಡಲಾಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.