ADVERTISEMENT

ವೈದ್ಯ ಕಾಲೇಜು: ಗುಣಮಟ್ಟದಲ್ಲಿ ರಾಜಿ ಅಸಾಧ್ಯ‌ ಎಂದ ಸುಪ್ರೀಂ ಕೋರ್ಟ್

ವೃತ್ತಿಪರ ಸಂಸ್ಥೆಗಳಲ್ಲಿ ಅದಕ್ಷತೆಗೆ ಇಲ್ಲ ಅವಕಾಶ

​ಪ್ರಜಾವಾಣಿ ವಾರ್ತೆ
Published 24 ಫೆಬ್ರುವರಿ 2021, 19:11 IST
Last Updated 24 ಫೆಬ್ರುವರಿ 2021, 19:11 IST
ಸುಪ್ರೀಂ ಕೋರ್ಟ್‌
ಸುಪ್ರೀಂ ಕೋರ್ಟ್‌   

ನವದೆಹಲಿ: ಹೊಸ ವೈದ್ಯಕೀಯ ಕಾಲೇಜು ಆರಂಭ ಮತ್ತು ವಿದ್ಯಾರ್ಥಿಗಳ ಸಂಖ್ಯೆ ಹೆಚ್ಚಳಕ್ಕೆ ಇರುವ ಸಮಯದ ಗಡುವು ಮತ್ತು ಗುಣಮಟ್ಟ ಮಾನದಂಡಗಳನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು ಎಂದು ಸುಪ್ರೀಂ ಕೋರ್ಟ್‌ ಬುಧವಾರ ಹೇಳಿದೆ. ಗುಣಮಟ್ಟದ ಮಾನದಂಡಗಳ ಬಗೆಗಿನ ನಿರ್ಲಕ್ಷ್ಯವು ದೇಶದಲ್ಲಿ ವೈದ್ಯಕೀಯ ಶಿಕ್ಷಣವನ್ನು ಕಾಡುತ್ತಿದೆ ಎಂದು ಅಭಿಪ್ರಾಯಪಟ್ಟಿದೆ.

ವೈದ್ಯಕೀಯ ಕಾಲೇಜು ಆರಂಭಿಸಲು2004ರಲ್ಲಿಯೇ ಅನುಮತಿ ಪಡೆದರೂ ಲೋಪಗಳನ್ನು ಸರಿಪಡಿಸಲು ಕೇರಳದ ಟ್ರಸ್ಟ್‌ ಒಂದಕ್ಕೆ ಸಾಧ್ಯವಾಗಿರಲಿಲ್ಲ. ಪಾಲಕ್ಕಾಡ್‌ನ ವಾಲಯಾರ್‌ನಲ್ಲಿ 300 ಹಾಸಿಗೆಗಳ 76 ವೈದ್ಯರು ಮತ್ತು 380 ನರ್ಸ್‌ಗಳಿರುವ ಆಸ್ಪತ್ರೆಯನ್ನು 2006ರಲ್ಲಿಯೇ ಸ್ಥಾಪಿಸಲಾಗಿದೆ ಎಂದು ಟ್ರಸ್ಟ್‌ ಹೇಳಿಕೊಂಡಿದೆ. 2020–21ನೇ ಸಾಲಿಗೆ ವಿದ್ಯಾರ್ಥಿಗಳಿಗೆ ಪ್ರವೇಶ ಕಲ್ಪಿಸಲು ಅವಕಾಶ ನೀಡಬೇಕು ಎಂದು ಟ್ರಸ್ಟ್‌, ಸುಪ್ರೀಂ ಕೋರ್ಟ್‌ಗೆ ಅರ್ಜಿ ಸಲ್ಲಿಸಿತ್ತು. ನ್ಯಾಯಮೂರ್ತಿ ಎ.ಎಂ. ಖಾನ್ವಿಲ್ಕರ್‌ ನೇತೃತ್ವದ ಪೀಠವು ಈ ಅರ್ಜಿಯನ್ನು ವಜಾ ಮಾಡಿದೆ.

ವೈದ್ಯಕೀಯ ಪದವೀಧರರು ವೈದ್ಯರಾಗಿ ಕೆಲಸ ಮಾಡಲು ಅಗತ್ಯವಾದ ಕೌಶಲಗಳನ್ನು ಹೊಂದಿರಬೇಕು ಎಂಬುದನ್ನು ವೃತ್ತಿಪರ ಕಾಲೇಜುಗಳು ಖಾತರಿಪಡಿಸಬೇಕು. ಹೀಗಾಗಿ, ಗುಣಮಟ್ಟದ ವಿಚಾರದಲ್ಲಿ ಕಟ್ಟುನಿಟ್ಟಿನ ಧೋರಣೆ ಅನುಸರಿಸಬೇಕು ಎಂದು ನ್ಯಾಯಾಲಯವು ಹೇಳಿದೆ.

ADVERTISEMENT

‘ಮೌಲ್ಯಮಾಪನದ ಕಳಪೆ ವ್ಯವಸ್ಥೆ, ವೈದ್ಯಕೀಯ ಕಾಲೇಜುಗಳ ಸಂಖ್ಯೆಯಲ್ಲಿ ಹೆಚ್ಚಳ, ರೋಗಿಗಳು ಮತ್ತು ವೈದ್ಯಕೀಯ ಉಪಕರಣಗಳ ಕೊರತೆ, ವಿಶೇಷವಾಗಿ ಖಾಸಗಿ ಕಾಲೇಜುಗಳಲ್ಲಿ ಪ್ರವೇಶಾತಿಯಲ್ಲಿ ಪ್ರತಿಭೆಯ ಅಪ
ಮೌಲ್ಯೀಕರಣ, ಶುಲ್ಕ ಹೆಚ್ಚಳ, ದುರ್ಬಲವಾದ ಮೌಲ್ಯಮಾಪನ ಮತ್ತು ಮಾನ್ಯತೆ ವ್ಯವಸ್ಥೆಗಳು ವೈದ್ಯಕೀಯ ಶಿಕ್ಷಣ ವ್ಯವಸ್ಥೆಯನ್ನು ಕಾಡುತ್ತಿವೆ’ ಎಂದು ಅಭಿಪ್ರಾಯಪಟ್ಟಿದೆ.

‘ಇಂತಹ ಅದಕ್ಷ ಕಾಲೇಜುಗಳು ಕಾರ್ಯನಿರ್ವಹಿಸಲು ಅವಕಾಶ ಕೊಟ್ಟರೆ ಭವಿಷ್ಯದ ವಿದ್ಯಾರ್ಥಿ ಸಮುದಾಯವನ್ನೇ ಗಂಡಾಂತರಕ್ಕೆ ಒಳಪಡಿಸಿದಂತಾಗುತ್ತದೆ. ಇಂತಹ ಕಾಲೇಜುಗಳಲ್ಲಿ ಕಲಿತ ವಿದ್ಯಾರ್ಥಿಗಳು ಅಸಮರ್ಥ ವೈದ್ಯರಾಗಿ, ಅಂತಿಮವಾಗಿ ಸಮಾಜಕ್ಕೆದೊಡ್ಡ ಅಪಾಯವಾಗಿ ಪರಿವರ್ತನೆಯಾಗಬಹುದು’ ಎಂದು ಪೀಠವು ಹೇಳಿದೆ. ಕಾಲೇಜು ಆರಂಭಿಸಲು ಟ್ರಸ್ಟ್‌ಗೆ 2004ರಲ್ಲಿಯೇ ಷರತ್ತುಬದ್ಧ ಅನುಮತಿ ನೀಡಲಾಗಿತ್ತು. 17 ವರ್ಷ ಕಳೆದರೂ ಲೋಪಗಳನ್ನು ಸರಿಪಡಿಸಿಕೊಳ್ಳಲು ಟ್ರಸ್ಟ್‌ಗೆ ಸಾಧ್ಯವಾಗಿಲ್ಲ ಎಂದು ತರಾಟೆಗೆ ತೆಗೆದುಕೊಂಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.