ADVERTISEMENT

ಸಾಧಾರಣ ಪ್ರತಿಭೆಯುಳ್ಳವರ ನೇಮಕದಿಂದ ಯುವಕರ ಭವಿಷ್ಯ ಹಾಳು: ವರುಣ್ ಗಾಂಧಿ

ಜೆಎನ್‌ಯು ನೂತನ ಕುಲಪತಿ ನೇಮಕ ಕುರಿತು ಅಸಮಾಧಾನ

ಪಿಟಿಐ
Published 8 ಫೆಬ್ರುವರಿ 2022, 12:04 IST
Last Updated 8 ಫೆಬ್ರುವರಿ 2022, 12:04 IST
ವರುಣ್‌ ಗಾಂಧಿ
ವರುಣ್‌ ಗಾಂಧಿ   

ನವದೆಹಲಿ: ಜವಾಹರಲಾಲ್‌ ನೆಹರೂ ವಿಶ್ವವಿದ್ಯಾಲಯದ (ಜೆಎನ್‌ಯು) ನೂತನ ಕುಲಪತಿಯಾಗಿ ಶಾಂತಿಶ್ರೀ ಧೂಲಿಪುಡಿ ಪಂಡಿತ್‌ ಅವರನ್ನು ನೇಮಕ ಮಾಡಿರುವುದನ್ನು ಬಿಜೆಪಿ ಸಂಸದ ವರುಣ್‌ ಗಾಂಧಿ ಟೀಕಿಸಿದ್ದಾರೆ.

‘ಸಾಧಾರಣ ಯೋಗ್ಯತೆ ಉಳ್ಳವರನ್ನು ಉನ್ನತ ಶಿಕ್ಷಣ ಸಂಸ್ಥೆಗಳಿಗೆ ನೇಮಕ ಮಾಡುವುದರಿಂದ ನಮ್ಮ ಮಾನವ ಸಂಪನ್ಮೂಲ ಹಾಗೂ ಯುವಕರ ಭವಿಷ್ಯ ಹಾಳಾಗುತ್ತದೆ’ ಎಂದು ಅವರು ಟ್ವೀಟ್‌ ಮಾಡಿದ್ದಾರೆ.

ತಮ್ಮನ್ನು ಜೆಎನ್‌ಯು ಕುಲಪತಿಯನ್ನಾಗಿ ನೇಮಕ ಮಾಡಿದ ನಂತರ ಶಾಂತಿಶ್ರೀ ಅವರು ಬಿಡುಗಡೆ ಮಾಡಿರುವ ಪತ್ರಿಕಾ ಪ್ರಕಟಣೆಯನ್ನು ತಮ್ಮ ಟ್ವೀಟ್‌ನಲ್ಲಿ ಹಂಚಿಕೊಂಡಿರುವ ವರುಣ್‌ ಗಾಂಧಿ, ಆ ಪ್ರಕಟಣೆಯಲ್ಲಿನ ವ್ಯಾಕರಣಕ್ಕೆ ಸಂಬಂಧಿಸಿದ ದೋಷಗಳನ್ನು ಉಲ್ಲೇಖಿಸಿದ್ದಾರೆ.

ADVERTISEMENT

ಜಾಗತಿಕ ಗುಣಮಟ್ಟ ಹೊಂದಿರುವ ದೇಶದ ಕೆಲವೇ ಉನ್ನತ ಶಿಕ್ಷಣ ಸಂಸ್ಥೆಗಳಿಗೆ ಸೂಕ್ತರಾದವರನ್ನು ನೇಮಕ ಮಾಡಬೇಕು. ಅವರು ಈ ಸಂಸ್ಥೆಗಳನ್ನು ಸಮರ್ಥವಾಗಿ ಮುನ್ನಡೆಸುವವರಾಗಿರಬೇಕು. ದೂರದೃಷ್ಟಿ ಇಲ್ಲದವರು, ಕಡಿಮೆ ಸಂವಹನ ಸಾಮರ್ಥ್ಯ ಅಥವಾ ಅರ್ಹತೆವುಳ್ಳವರ ನೇಮಕ ಶೈಕ್ಷಣಿಕ ಕ್ಷೇತ್ರದ ಮೇಲೆ ದೂರಗಾಮಿ ಪರಿಣಾಮ ಬೀರುತ್ತದೆ ಎಂದೂ ಅವರು ಅಭಿಪ್ರಾಯಪಟ್ಟಿದ್ದಾರೆ.

ಜೆಎನ್‌ಯು ಕುಲಪತಿಯಾಗಿ ನೇಮಕಗೊಂಡಿರುವ 59 ವರ್ಷದ ಶಾಂತಿಶ್ರೀ ಪಂಡಿತ್‌ ಅವರು, ಇದೇ ವಿ.ವಿ. ಮಾಜಿ ವಿದ್ಯಾರ್ಥಿಯೂ ಆಗಿದ್ದಾರೆ. ಅವರು ‘ಅಂತರರಾಷ್ಟ್ರೀಯ ಸಂಬಂಧಗಳು’ ವಿಷಯದ ಮೇಲೆ ಎಂ.ಫಿಲ್‌ ಹಾಗೂ ಪಿಎಚ್‌.ಡಿ ಪದವಿ ಪಡೆದಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.