ADVERTISEMENT

ಶಿಲ್ಲಾಂಗ್‌ ಎನ್‌ಪಿಪಿಗೆ ಬೆಂಬಲ: ಶಾಸಕನ ಕಚೇರಿಗೆ ಬೆಂಕಿ

ಮೇಘಾಲಯ: ಎಚ್‌ಎಸ್‌ಪಿಡಿಪಿ ಪ‍ಕ್ಷದ ಕಾರ್ಯಕರ್ತರಿಂದ ಕೃತ್ಯ

ಪಿಟಿಐ
Published 5 ಮಾರ್ಚ್ 2023, 6:08 IST
Last Updated 5 ಮಾರ್ಚ್ 2023, 6:08 IST

ಶಿಲ್ಲಾಂಗ್‌ (ಪಿಟಿಐ): ಮೇಘಾಲಯದಲ್ಲಿ ಹೊಸ ಸರ್ಕಾರ ರಚನೆಗೆ ಮುಂದಾಗಿರುವ ನ್ಯಾಷನಲಿಸ್ಟ್‌ ಪೀಪಲ್ಸ್ ಪಾರ್ಟಿ (ಎನ್‌ಪಿಪಿ) ಹಾಗೂ ಬಿಜೆಪಿಗೆ ಬೆಂಬಲ ನೀಡುವುದಾಗಿ ಹೇಳಿದ್ದ ಹಿಲ್‌ ಸ್ಟೇಟ್‌ ಪೀಪಲ್ಸ್‌ ಡೆಮಾಕ್ರಟಿಕ್‌ ಪಾರ್ಟಿಯ (ಎಚ್‌ಎಸ್‌ಪಿಡಿಪಿ) ಶಾಸಕ ಮೆಥೋಡಿಯಸ್‌ ಡಕಾರ್‌ ಅವರ ಕಚೇರಿಗೆ ಶುಕ್ರವಾರ ರಾತ್ರಿ ಬೆಂಕಿ ಹಚ್ಚಲಾಗಿದೆ. ಅವರ ಪಕ್ಷದ ಕಾರ್ಯಕರ್ತರೇ ಈ ಕೃತ್ಯ ಎಸಗಿದ್ದಾರೆ.

ಮೇಘಾಲಯದಲ್ಲಿ ಕಾನ್ರಾಡ್‌ ಕೆ. ಸಂಗ್ಮಾ ನೇತೃತ್ವದ ಎನ್‌ಪಿಪಿ ಅತಿದೊಡ್ಡ ಪಕ್ಷವಾಗಿ ಹೊರಹೊಮ್ಮಿದೆ. ಈ ಪಕ್ಷವು ಒಟ್ಟು 26 ಕ್ಷೇತ್ರಗಳಲ್ಲಿ ಜಯಗಳಿಸಿದೆ. ಆದರೆ ಸರಳ ಬಹುಮತಕ್ಕೆ 32 ಸ್ಥಾನಗಳ ಅಗತ್ಯವಿದ್ದು, ಎರಡು ಕ್ಷೇತ್ರಗಳಲ್ಲಿ ಗೆದ್ದಿದ್ದ ಬಿಜೆಪಿ ಈ ಪಕ್ಷಕ್ಕೆ ಬೆಂಬಲ ಘೋಷಿಸಿದೆ. ಇಬ್ಬರು ಪಕ್ಷೇತರ ಶಾಸಕರ ಜೊತೆಗೆ ಎಚ್‌ಎಸ್‌ಪಿಡಿಪಿ ಶಾಸಕರಾದ ಮೆಥೋಡಿಯಸ್‌ ಮತ್ತು ಶಾಕ್ಲಿಯರ್‌ ವಾಜ್ರಿ ಅವರೂ ಎನ್‌ಪಿಪಿಗೆ ಬೆಂಬಲ ಸೂಚಿಸಿದ್ದಾರೆ.

‘ಮೆಥೋಡಿಯಸ್‌ ಮತ್ತು ಶಾಕ್ಲಿಯರ್‌ ಅವರ ನಿರ್ಧಾರವು ಸ್ವಪಕ್ಷೀಯ ಕಾರ್ಯಕರ್ತರನ್ನು ಕೆರಳಿಸಿತ್ತು. ಶುಕ್ರವಾರ ರಾತ್ರಿ ಲಾಯ್‌ತುಮ್‌ಖರಾಹ ಪ್ರದೇಶದಲ್ಲಿರುವ ಮೆಥೋಡಿಯಸ್‌ ಅವರ ಕಚೇರಿಗೆ ತೆರಳಿದ್ದ ಉದ್ರಿಕ್ತರು ಬೆಂಕಿ ಹಚ್ಚಿದ್ದರು. ವಿಷಯ ತಿಳಿದ ಕೂಡಲೇ ಸ್ಥಳಕ್ಕೆ ಧಾವಿಸಿದ್ದ ಅಗ್ನಿ ಶಾಮಕ ದಳದ ಸಿಬ್ಬಂದಿ ಬೆಂಕಿ ನಂದಿಸಿದ್ದರು’ ಎಂದು ಎನ್‌ಪಿಪಿಯ ಹಿರಿಯ ನಾಯಕ ‍ಪ್ರೆಸ್ಟೋನ್‌ ತಿನ್‌ಸೋಂಗ್‌ ಶನಿವಾರ ಹೇಳಿದ್ದಾರೆ.

ADVERTISEMENT

‘ಹಿನ್ನಿಯೆವಟ್ರೇಪ್‌ ಇಂಟಿಗ್ರೇಟೆಡ್‌ ಟೆರಿಟೋರಿಯಲ್‌ ಸಂಘಟನೆ (ಎಚ್‌ಐಟಿಒ) ಹಾಗೂ ಹಿನ್ನಿಯೆವಟ್ರೇಪ್‌ ಯೂತ್‌ ಕೌನ್ಸಿಲ್‌ನ (ಎಚ್‌ವೈಸಿ) ಕಾರ್ಯಕರ್ತರು ಕೃತ್ಯ ಎಸಗಿದ್ದಾರೆ. ದುಷ್ಕರ್ಮಿಗಳು ಶಾಸಕರಿಗೆ ನೀಡಲಾಗಿರುವ ಸಾಂವಿಧಾನಿಕ ಹಕ್ಕನ್ನು ಕಸಿಯಲು ಮುಂದಾಗಿದ್ದಾರೆ. ಇಂತಹ ಚಟುವಟಿಕೆಗಳಿಗೆ ನಾವು ಅವಕಾಶ ನೀಡುವುದಿಲ್ಲ. ಇದು ಜನರ ಹಕ್ಕುಗಳಿಗೆ ವಿರುದ್ಧವಾದುದು’ ಎಂದಿದ್ದಾರೆ.

ಎಚ್‌ಎಸ್‌ಪಿಡಿಪಿಯು ಟಿಎಂಸಿ ಮತ್ತು ಕಾಂಗ್ರೆಸ್‌ ನೇತೃತ್ವದ ಒಕ್ಕೂಟಕ್ಕೆ ಬೆಂಬಲ ನೀಡುವುದಾಗಿ ಘೋಷಿಸಿತ್ತು. ಆದರೆ ಪಕ್ಷದ ಇಬ್ಬರು ಶಾಸಕರು ಎನ್‌ಪಿಪಿ ಜೊತೆ ಕೈ ಜೋಡಿಸಿದ್ದರು.

ಎಚ್‌ಎಸ್‌ಪಿಡಿಪಿಯ ಕಾರ್ಯಕರ್ತರು ಶನಿವಾರ ಮೊಟ್‌ಫರಣಾ ಪ್ರದೇಶದಲ್ಲಿ ಪ್ರತಿಭಟನೆ ನಡೆಸಿದ್ದು, ಶಾಸಕರ ಪ್ರತಿಕೃತಿ ದಹಿಸಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.