ADVERTISEMENT

ನೆನಪುಗಳ ಮೆಲುಕಿನಲ್ಲಿ ಅಂತಃಕರಣದ ನವೀಕರಣ

ಮೇಘನಾ ಕಂಡಂತೆ ಗುಲ್ಜಾರ್

ಪದ್ಮನಾಭ ಭಟ್ಟ‌
Published 25 ಜನವರಿ 2019, 3:56 IST
Last Updated 25 ಜನವರಿ 2019, 3:56 IST
ಗುಲ್ಜಾರ್
ಗುಲ್ಜಾರ್   

ಜೈಪುರ:ಕವಿ, ಗೀತ ಸಾಹಿತಿ, ನಿರ್ದೇಶಕ – ಹೀಗೆ ಹಲವು ಆಯಾಮಗಳ ಜನಪ್ರಿಯ ಪ್ರಭೆಯನ್ನು ಹೊಂದಿರುವ ಗುಲ್ಜಾರ್ ಆ ವೇದಿಕೆಯ ಮೇಲೆ ‘ತಾಯ್ತನ’ದ ಆರ್ದ್ರತೆಯಲ್ಲಿ ಕುಳಿತಿದ್ದರು. ತಲ್ವಾರ್, ರಾಝಿಯಂಥ ಉಜ್ವಲ ಸಿನಿಮಾಗಳನ್ನು ನಿರ್ದೇಶಿಸಿದ್ದ ಮೇಘನಾ ಕೂಡ ಪಕ್ಕದಲ್ಲಿ ಅಪ್ಪನ ಅಕ್ಕರೆಯ ‘ಬೋಸ್ಕಿ’ಯಾಗಿ ಬಾಲ್ಯದ ನೆನಪುಗಳಿಗೆ ಜಾರಿದರು.

ಜೈಪುರ ಸಾಹಿತ್ಯೋತ್ಸವದ ಮೊದಲ ದಿನ ಮುಖ್ಯವೇದಿಕೆಯಲ್ಲಿ ನಡೆದ ಮೊದಲ ಗೋಷ್ಠಿ, ತಂದೆ–ಮಗಳ ಅನನ್ಯ ಸಂಬಂಧವನ್ನು ನೆನಪುಗಳ ಮೂಲಕ ನವೀಕರಿಸಿತು. ‘ಬಿಕಾಸ್ ಹೀ ಈಸ್’ ಇದು ಮೇಘನಾ ಬರೆದ ಗುಲ್ಜಾರ್ ಆತ್ಮಚರಿತ್ರೆ. ಇದೇ ಪುಸ್ತಕವನ್ನು ನೆಪವಾಗಿಟ್ಟುಕೊಂಡು ಶಂತನು ರಾಯ್ ಚೌಧರಿ ನಡೆಸಿದ ಮಾತುಕತೆಯಲ್ಲಿ ಹಲವು ಭಾವುಕ ಗಳಿಗೆಗಳು ಹಾದುಹೋದವು.

‘ಚಿಕ್ಕ ವಯಸ್ಸಿನಲ್ಲಿ ಯಾರಿಗೂ ತಮ್ಮ ತಂದೆ–ತಾಯಿಗಳ ಸಾಮಾಜಿಕ ವ್ಯಕ್ತಿತ್ವದ ಪರಿಚಯ ಇರುವುದಿಲ್ಲ. ನನಗೂ ಹಾಗೆಯೇ ಆಗಿತ್ತು. ಚಿಕ್ಕಂದಿನಲ್ಲಿ ಗುಲ್ಜಾರ್ ಎಂಥ ದೊಡ್ಡ ಕವಿ ಎನ್ನುವುದು ತಿಳಿದಿರಲಿಲ್ಲ. ಆಗ ಅವರು ನನ್ನ ತಂದೆ ಮಾತ್ರ ಆಗಿದ್ದರು. ಆದರೆ ತಾಯಿತನದ ಎಲ್ಲ ಗುಣಗಳೂ ಅವರಿಗಿದ್ದವು’ ಎಂದ ಮೇಘನಾ, ಗುಲ್ಜಾರ್ ಚಿಕ್ಕ ವಯಸ್ಸಿನಲ್ಲಿ ತಮ್ಮನ್ನು ತಾಯಿಸ್ಥಾನದಲ್ಲಿ ನಿಂತು ಪೋಷಿಸಿದ ಗಳಿಗೆಗಳನ್ನು ನೆನಪಿಸಿಕೊಂಡರು.

ADVERTISEMENT

ಇದಕ್ಕೆ ಪ್ರತಿಕ್ರಿಯಿಸುತ್ತಾ ‘ಯಾರೂ ಹುಟ್ಟಿನಿಂದಲೇ ತಂದೆಯಾಗಿರುವುದಿಲ್ಲ; ತಾಯಿಯೂ ಆಗಿರುವುದಿಲ್ಲ. ಮಗಳು ಹುಟ್ಟಿದ ಮೇಲೆಯೇ ನಾನು ತಂದೆಯಾಗಲು ಕಲಿತಿದ್ದು. ತಾಯಿತನವನ್ನು ರೂಢಿಸಿಕೊಂಡಿದ್ದು. ನಾನು ಈಗಲೂ ಒಬ್ಬ ಒಳ್ಳೆಯ ತಾಯಿ ಎಂದು ಹೆಮ್ಮೆಯಿಂದ ಹೇಳಿಕೊಳ್ಳುತ್ತೇನೆ’ ಎಂದರು ಗುಲ್ಜಾರ್. ಮಗಳನ್ನು ಮೊದಲ ಬಾರಿಗೆ ಎತ್ತಿಕೊಂಡಾಗ ಅವರಿಗೆ ಚೀನಾದ ಸಾಂಪ್ರದಾಯಿಕ ರೇಷ್ಮೆ ವಸ್ತ್ರವನ್ನು ಮುಟ್ಟಿದ ಅನುಭವ ಆಯಿತಂತೆ. ಹಾಗಾಗಿ ಅಕ್ಕರೆಯಿಂದ ಬೋಸ್ಕಿ ಎಂದು ಕರೆದರು. ಇಂದಿಗೂ ಮೇಘನಾ, ಗುಲ್ಜಾರ್ ಪಾಲಿಗೆ ಮುದ್ದಿನ ಬೋಸ್ಕಿಯೇ.

ಮೇಘನಾ ಮೊದಲ ಭಾರಿಗೆ ಕವನ ಬರೆದ ಪ್ರಸಂಗವೂ ಸ್ವಾರಸ್ಯಕರವಾದದ್ದು. ಒಮ್ಮೆ ತಂದೆಯ ಬಳಿ ಯಾವುದೋ ಕಾರಣಕ್ಕೆ ಹಣ ಕೇಳಿದ್ದರು. ಗುಲ್ಜಾರ್ ಮಗಳ ಮಾತನ್ನು ನಿರ್ಲಕ್ಷಿಸಿ ಹೊರಗೆ ಹೋಗಿದ್ದರು. ವಾಪಸ್ ಮನೆಗೆ ಬರುವಷ್ಟರಲ್ಲಿ ಅವರ ಮೇಜಿನ ಮೇಲೆ ಕವನದ ಸಾಲುಗಳಿದ್ದವು. ‘ಮೈ ಫಾದರ್ ಈಸ್ ವೆರಿ ಕನ್ನಿಂಗ್/ ಐ ಆ್ಯಮ್ ಆಸ್ಕ್ ಫಾರ್ ಮನಿ ಆ್ಯಂಡ್ ಹೀ ಈಸ್ ರನ್ನಿಂಗ್’ – ಇವು ಮೇಘನಾ ಬರೆದ ಮೊದಲ ಪದ್ಯದ ಸಾಲುಗಳು.

ತಂದೆಯ ಆತ್ಮಚರಿತ್ರೆ ಬರೆಯುವಾಗ ಎದುರಾದ ಸವಾಲುಗಳ ಕುರಿತು ಮಾತನಾಡಿದ ಅವರು, ‘ಇದು ಆತ್ಮಚರಿತ್ರೆ ಎನ್ನುವುದಕ್ಕಿಂತ ಹೆಚ್ಚಾಗಿ ಎಲ್ಲರಿಗೂ ಗೊತ್ತಿರುವ ವ್ಯಕ್ತಿಯೊಬ್ಬರನ್ನು ಮಗಳ ಕಣ್ಣಿನಿಂದ ನೋಡುವ ಪ್ರಯತ್ನ. ಹೀಗೆ ಬರೆಯುವಾಗ ಎಷ್ಟೋ ಸಂಗತಿಗಳನ್ನು ಬರೆಯಲು ನನಗೆ ಮುಜುಗರ ಅನಿಸಿದ್ದಿದೆ. ಆದರೆ ಈ ಕಾರಣಕ್ಕೆ ನನಗೆ ಗೊತ್ತಿರುವ ಸತ್ಯವನ್ನು ಬರೆಯದೇ ಹೋದರೆ ಅಪ್ರಾಮಾಣಿಕಳಾಗುತ್ತೇನೆ. ಹಾಗಾಗಿ ಅವರ ಬದುಕಿನ ಹಲವು ಸನ್ನಿವೇಶಗಳನ್ನು ಸಾಧ್ಯವಾದಷ್ಟೂ ವಸ್ತುನಿಷ್ಠವಾಗಿ ಬರೆಯಲು ಯತ್ನಿಸಿದ್ದೇನೆ’ ಎಂದ ಅವರು, ಗುಲ್ಜಾರ್ ದಾಂಪತ್ಯದಲ್ಲಿ ಬಿರುಕು ಮೂಡಿದ ಪ್ರಸಂಗವನ್ನೂ ಪುಸ್ತಕದಲ್ಲಿ ಉಲ್ಲೇಖಿಸಿದ್ದಾಗಿ ತಿಳಿಸಿದರು.

‘ನನ್ನ ತಂದೆ ತಾಯಿ ಇಬ್ಬರೂ ಖ್ಯಾತನಾಮರು. ನನ್ನ ವೃತ್ತಿಜೀವನದ ಮೊದಲ ಕೆಲವು ವರ್ಷಗಳು ಕಷ್ಟದಾಯಕವಾಗಿದ್ದವು. ಆದರೆ ಎಂದಿಗೂ ನಾನು ತಂದೆಯ ಸಹಾಯ ಕೇಳಲಿಲ್ಲ. 2008ರಲ್ಲಿ ಬಿಡುಗಡೆಯಾದ ‘ತಲ್ವಾರ್’ ಸಿನಿಮಾ ಯಶಸ್ಸು ಕಂಡ ನಂತರವೇ ಸಮಾಧಾನದ ನಿಟ್ಟುಸಿರು ಬಿಟ್ಟೆ’ ಎಂದು ಗುಲ್ಜಾರ್ ನೆರಳಿನಿಂದ ಪ್ರಯತ್ನಪೂರ್ವಕವಾಗಿ ತಪ್ಪಿಸಿಕೊಂಡು ತಮ್ಮದೇ ದಾರಿ ಹುಡುಕಿಕೊಂಡ ಬಗೆಯನ್ನು ವಿವರಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.