ADVERTISEMENT

ಕಾಶ್ಮೀರ ನೋವಿನಲ್ಲಿದೆ; ದೆಹಲಿಯ ಜಂತರ್ ಮಂತರ್‌ನಲ್ಲಿ ಮೆಹಬೂಬಾ ಮುಫ್ತಿ ಧರಣಿ

ಪಿಟಿಐ
Published 6 ಡಿಸೆಂಬರ್ 2021, 12:23 IST
Last Updated 6 ಡಿಸೆಂಬರ್ 2021, 12:23 IST
ಮೆಹಬೂಬಾ ಮುಫ್ತಿ
ಮೆಹಬೂಬಾ ಮುಫ್ತಿ   

ನವದೆಹಲಿ: ಜಮ್ಮು ಮತ್ತು ಕಾಶ್ಮೀರದ ಮಾಜಿ ಮುಖ್ಯಮಂತ್ರಿ ಮೆಹಬೂಬಾ ಮುಫ್ತಿ, ಕೇಂದ್ರಾಡಳಿತ ಪ್ರದೇಶದ ಜನರ ಮೇಲಿನ ದಬ್ಬಾಳಿಕೆಯನ್ನು ಖಂಡಿಸಿ ದೆಹಲಿಯ ಜಂತರ್ ಮಂತರ್‌ನಲ್ಲಿ ಸೋಮವಾರ ಧರಣಿ ನಡೆಸಿದ್ದು, ಅಮಾಯಕರ ಹತ್ಯೆಯನ್ನು ತಕ್ಷಣವೇ ನಿಲ್ಲಿಸಬೇಕೆಂದು ಒತ್ತಾಯಿಸಿದ್ದಾರೆ.

ಮೆಹಬೂಬಾ ಮುಫ್ತಿ ಅವರು 'ಕಾಶ್ಮೀರ ನೋವಿನಲ್ಲಿದೆ' ಎಂಬ ಭಿತ್ತಿಪತ್ರದೊಂದಿಗೆ ಪಕ್ಷದ ಬೆಂಬಲಿಗರೊಂದಿಗೆ ಪ್ರತಿಭಟನೆಯನ್ನು ನಡೆಸಿದರು.

ಕಾಶ್ಮೀರದಲ್ಲಿ ಪ್ರತಿಭಟನೆಯನ್ನು ನಡೆಸಲು ಎಂದಿಗೂ ಅನುಮತಿಸದ ಕಾರಣ ರಾಷ್ಟ್ರ ರಾಜಧಾನಿಯಲ್ಲಿ ಧರಣಿ ನಡೆಸಲು ನಿರ್ಧರಿಸಿರುವುದಾಗಿ ಜಮ್ಮು ಮತ್ತು ಕಾಶ್ಮೀರ ಪೀಪಲ್ಸ್ ಡೆಮಾಕ್ರಟಿಕ್ ಪಕ್ಷದ (ಪಿಡಿಪಿ) ಅಧ್ಯಕ್ಷೆ ಮೆಹಬೂಬಾ ಮುಫ್ತಿ ತಿಳಿಸಿದ್ದಾರೆ.

ಪ್ರತಿ ಬಾರಿಯೂ ಕಾಶ್ಮೀರದಲ್ಲಿ ಧರಣಿ ಯೋಜಿಸಿದಾಗ ಪೊಲೀಸರು ಗೃಹ ಬಂಧನದಲ್ಲಿರಿಸುತ್ತಿದ್ದರು ಎಂದು ಆರೋಪಿಸಿದ್ದಾರೆ.

'ಕಾಶ್ಮೀರವು ಕಾರಾಗೃಹವಾಗಿ ಮಾರ್ಪಾಟ್ಟಿದ್ದು, ಜನರಿಗೆ ತಮ್ಮ ಅಭಿಪ್ರಾಯಗಳನ್ನು ವ್ಯಕ್ತಪಡಿಸುವುದನ್ನು ನಿರಾಕರಿಸಲಾಗಿದೆ. 2019ರಿಂದ ಎಲ್ಲವನ್ನು ದಮನ ಮಾಡಲಾಗಿದೆ. ಕೆಲವು ಪ್ರಾಯೋಜಿತ ಮಾಧ್ಯಮಗಳ ಬೆಂಬಲದೊಂದಿಗೆ ಸರ್ಕಾರವು ಕಣಿವೆ ರಾಜ್ಯದಲ್ಲಿ ಎಲ್ಲವೂ ಸರಿಯಾಗಿದೆ ಎಂದು ಚಿತ್ರಿಸುವಲ್ಲಿ ನಿರತವಾಗಿದೆ' ಎಂದು ಹೇಳಿದ್ದಾರೆ.

2019ರಲ್ಲಿ ಜಮ್ಮು ಮತ್ತು ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ನೀಡುವ ಸಂವಿಧಾನದ 370ನೇ ವಿಧಿಯನ್ನು ಕೇಂದ್ರ ಸರ್ಕಾರ ರದ್ದುಗೊಳಿಸಿತ್ತು.

'ಕಾಶ್ಮೀರದಲ್ಲಿ ಎನ್‌ಕೌಂಟರ್ ನಡೆದಾಗ, ಉಗ್ರಗಾಮಿ ಕೊಲ್ಲಲ್ಪಟ್ಟಾಗ ಯಾರೂ ಪ್ರಶ್ನಿಸುವುದಿಲ್ಲ. ಆದರೆ ಅಮಾಯಕ ನಾಗರಿಕರ ಹತ್ಯೆಯಾದಾಗ ಜನರು ಹೊರಗೆ ಬಂದು ಪ್ರಶ್ನಿಸುತ್ತಾರೆ. ನಾಗಾಲ್ಯಾಂಡ್‌ನಲ್ಲಿ 13 ನಾಗರರಿಕರನ್ನು ಗುಂಡಿಕ್ಕಿ ಹತ್ಯೆ ಮಾಡಿದ್ದನ್ನು ನೀವೇ ನೋಡಿದ್ದೀರಿ. ಕೂಡಲೇ ಎಫ್‌ಐಆರ್ ದಾಖಲಿಸಲಾಗಿದೆ. ಆದರೆ ಕಾಶ್ಮೀರದಲ್ಲೂ ಹೀಗೇಕೆ ಆಗುವುದಿಲ್ಲ? ವಿಚಾರಣೆಯಿಂದ ಹೆಚ್ಚೇನು ಲಾಭವಿಲ್ಲದಿದ್ದರೂ ಸರ್ಕಾರ ಏಕೆ ಕ್ರಮ ಕೈಗೊಳ್ಳುತ್ತಿಲ್ಲ' ಎಂದು ಪ್ರಶ್ನಿಸಿದ್ದಾರೆ.

ದೇಶದ ಜನತೆ ಈಗಲಾದರೂ ಎಚ್ಚೆತ್ತುಕೊಳ್ಳದಿದ್ದರೆ ಮಹಾತ್ಮ ಗಾಂಧಿ, ಬಿ.ಆರ್. ಅಂಬೇಡ್ಕರ್ ಅವರ ಭಾರತವು ನಾಥೂರಾಂ ಗೋಡ್ಸೆಯ ದೇಶವಾಗಿ ಪರಿವರ್ತನೆಯಾಗುವ ದಿನ ದೂರವಿಲ್ಲ ಎಂದು ಎಚ್ಚರಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.