ADVERTISEMENT

ಬಿಸಿಗಾಳಿಗೆ ದೆಹಲಿ ತತ್ತರ: 46 ಡಿಗ್ರಿ ತಲುಪುವ ಸಾಧ್ಯತೆ– ಆರೆಂಜ್ ಅಲರ್ಟ್

ಪಿಟಿಐ
Published 29 ಏಪ್ರಿಲ್ 2022, 9:52 IST
Last Updated 29 ಏಪ್ರಿಲ್ 2022, 9:52 IST
ಪಿಟಿಐ ಚಿತ್ರ
ಪಿಟಿಐ ಚಿತ್ರ   

ನವದೆಹಲಿ: ದೇಶದ ರಾಜಧಾನಿ ದೆಹಲಿಯ ಹಲವೆಡೆ ಉಷ್ಣಾಂಶ 46 ಡಿಗ್ರಿ ಸೆಲ್ಸಿಯಸ್ ದಾಟುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಹೇಳಿದೆ.

ಸಫ್ತಾರ್‌ಜಂಗ್‌ನಲ್ಲಿರುವ ದೆಹಲಿಯ ಹವಾಮಾನ ಪರಿವೀಕ್ಷಣಾ ಕೇಂದ್ರದಲ್ಲಿ ಗುರುವಾರ 43.7 ಡಿಗ್ರಿ ಸೆಲ್ಸಿಯಸ್ ಗರಿಷ್ಠ ಉಷ್ಣಾಂಶ ದಾಖಲಾಗಿತ್ತು. 12 ವರ್ಷಗಳಲ್ಲೇ ಏಪ್ರಿಲ್ ತಿಂಗಳಲ್ಲಿ ದಾಖಲಾದ ಅತ್ಯಧಿಕ ತಾಪಮಾನ ಇದಾಗಿದೆ.

ಏಪ್ರಿಲ್ 18, 2010ರಂದು 43.7 ಡಿಗ್ರಿ ಸೆಲ್ಸಿಯಸ್ ಗರಿಷ್ಠ ತಾಪಮಾನ ದಾಖಲಾಗಿತ್ತು.

ADVERTISEMENT

ರಾಜಧಾನಿ ದೆಹಲಿಯಲ್ಲಿ ಈವರೆಗಿನ ಏಪ್ರಿಲ್ ತಿಂಗಳ ಗರಿಷ್ಠ ತಾಪಮಾನ 45.6 ಡಿಗ್ರಿ ಸೆಲ್ಸಿಯಸ್ ಆಗಿದ್ದು, ಏಪ್ರಿಲ್ 29, 1941ರಂದು ದಾಖಲಾಗಿತ್ತು.

‘ಸಫ್ತಾರ್‌ಜಂಗ್ ಹವಾಮಾನ ಪರಿವೀಕ್ಷಣಾ ಕೇಂದ್ರದಲ್ಲಿ ಇಂದು(ಶುಕ್ರವಾರ) 0.5 ಡಿಗ್ರಿ ಸೆಲ್ಸಿಯಸ್‌ನಿಂದ 1 ಡಿಗ್ರಿ ಸೆಲ್ಸಿಯಸ್ ತಾಪಮಾನ ಹೆಚ್ಚಾಗುವ ಸಾಧ್ಯತೆ ಇದೆ. ಗರಿಷ್ಠ ತಾಪಮಾನ 46 ಡಿಗ್ರಿ ಸೆಲ್ಸಿಯಸ್ ಮುಟ್ಟಬಹುದು’ ಎಂದು ಹಿರಿಯ ವಿಜ್ಞಾನಿ ಆರ್‌.ಕೆ. ಜೆನಮಣಿ ಹೇಳಿದ್ದಾರೆ.

ಹರಿಯಾಣ, ದೆಹಲಿ, ಪಶ್ಚಿಮ ಯುಪಿ ಮತ್ತು ಮಧ್ಯಪ್ರದೇಶದಲ್ಲಿ ಅಧಿಕ ತಾಪಮಾನ ದಾಖಲಾಗುವ ಸಾಧ್ಯತೆ ಇದೆ ಎಂದು ಅವರು ಹೇಳಿದ್ದಾರೆ.

ತೀವ್ರ ಬಿಸಿ ಗಾಳಿ ಆತಂಕದ ಹಿನ್ನೆಲೆಯಲ್ಲಿ ದೆಹಲಿಯ ಹಲವು ಭಾಗಗಳಲ್ಲಿ ಶುಕ್ರವಾರ ಮತ್ತು ಶನಿವಾರ ಆರೆಂಜ್ ಅಲರ್ಟ್ ಘೋಷಿಸಲಾಗಿದೆ.

ಹವಾಮಾನ ಮುನ್ಸೂಚನೆಗಳಿಗಾಗಿ ಹವಾಮಾನ ಇಲಾಖೆ ಗ್ರೀನ್(ಯಾವುದೇ ಕ್ರಮದ ಅಗತ್ಯವಿಲ್ಲ), ಯೆಲ್ಲೋ(ಎಚ್ಚರಿಕೆ ವಹಿಸಿ), ಆರೆಂಜ್(ಪರಿಸ್ಥಿತಿ ಎದುರಿಸಲು ಸಜ್ಜಾಗಿ), ರೆಡ್(ತಕ್ಷಣ ಕಾರ್ಯೋನ್ಮುಖರಾಗಿ) ಎಂಬ 4 ಕಲರ್ ಕೋಡ್‌ಗಳನ್ನು ಬಳಸುತ್ತಿದೆ.

ತಾಪಮಾನ ಹೆಚ್ಚಳ ಮತ್ತು ವಿದ್ಯುತ್ ಬೇಡಿಕೆ ಹೆಚ್ಚಳದ ನಡುವೆ ಅನಿಯಮಿತ ವಿದ್ಯುತ್ ಕಡಿತದ ಬಗ್ಗೆ ದೆಹಲಿ ಸರ್ಕಾರ ಜನರಿಗೆ ಸೂಚನೆ ನೀಡಿದೆ.

ಬೇಸಿಗೆ ಹಿನ್ನೆಲೆಯಲ್ಲಿ 1,000 ಮಿಲಿಯನ್ ಗ್ಯಾಲನ್ ಕುಡಿಯುವ ನೀರನ್ನು ಸರಬರಾಜು ಮಾಡಲಾಗುತ್ತಿದೆ ಎಂದು ಸಿಎಂ ಅರವಿಂದ್ರ ಕೇಜ್ರಿವಾಲ್ ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.