ಪಾಕಿಸ್ತಾನ, ಭಾರತ
(ಐಸ್ಟೋಕ್ ಚಿತ್ರ)
ನವದೆಹಲಿ: ಪಹಲ್ಗಾಮ್ ದಾಳಿಯ ಬಳಿಕ ಪಾಕಿಸ್ತಾನ ಜೊತೆಗಿನ ಸಂಬಂಧ ವಿಷಮಗೊಂಡಿರುವ ನಡುವೆಯೇ ಯಾವುದೇ ಸನ್ನಿವೇಶ ಎದುರಿಸಲು ಸಜ್ಜಾಗಿ ಎಂದು ಹಲವು ರಾಜ್ಯಗಳಿಗೆ ಕೇಂದ್ರ ಗೃಹ ಸಚಿವಾಲಯವು ಸೂಚಿಸಿದೆ. ಈ ಸ್ವರಕ್ಷಣೆ ತಾಲೀಮು ಸಂದರ್ಭದಲ್ಲಿ, ವಾಯುದಾಳಿಯ ಎಚ್ಚರಿಕೆ ನೀಡುವ ಸೈರನ್ ಮೊಳಗಿಸುವಂತೆ ಹೇಳಲಾಗಿದೆ. ಬುಧವಾರ ನಡೆಯಲಿರುವ ಈ ತಾಲೀಮಿನಲ್ಲಿ ಸ್ವರಕ್ಷಣೆಯ ಕ್ರಮಗಳನ್ನು ಸೇರಿಸಿಕೊಳ್ಳಬೇಕು ಎಂದೂ ಸೂಚಿಸಲಾಗಿದೆ.
ದೇಶದ ಮೇಲೆ ಯಾವುದೇ ರೀತಿಯ ಸೇನಾ ದಾಳಿ ನಡೆದರೆ ನಾಗರಿಕರ ಸುರಕ್ಷತೆಯನ್ನು ಖಾತರಿಪಡಿಸಲು ಈ ತಾಲೀಮು ವ್ಯವಸ್ಥೆ ಮಾಡಲಾಗಿದೆ ಎಂದು ಮೂಲಗಳು ಹೇಳಿವೆ.
ವಿದ್ಯಾರ್ಥಿಗಳಿಗೂ ತರಬೇತಿ ನೀಡಬೇಕು. ಪ್ರಮುಖ ಘಟಕಗಳು ತಟ್ಟನೆ ಕಾಣಿಸದಂತೆ ಬಣ್ಣ ಬಳಿಯಬೇಕು, ತೆರವು ಕಾರ್ಯಾಚರಣೆಯ ಯೋಜನೆ ರೂಪಿಸಬೇಕು ಮತ್ತು ಅದರ ತಾಲೀಮು ಕೂಡ ಮಾಡಬೇಕು ಎಂಬ ನಿರ್ದೇಶನಗಳನ್ನು ನೀಡಲಾಗಿದೆ.
ಪಹಲ್ಗಾಮ್‌ನಲ್ಲಿ ಏ.22ರಂದು ಭಯೋತ್ಪಾದಕ ದಾಳಿ ನಡೆದ ಬಳಿಕ ಪ್ರಧಾನಿ ನರೇಂದ್ರ ಮೋದಿ ಅವರು ರಕ್ಷಣಾ ಅಧಿಕಾರಿಗಳು ಸೇರಿದಂತೆ ಹಲವರ ಜತೆ ಉನ್ನತ ಮಟ್ಟದ ಸರಣಿ ಸಭೆಗಳನ್ನು ನಡೆಸುತ್ತಿದ್ದಾರೆ.
‘ಭಯೋತ್ಪಾದಕ ಕೃತ್ಯ ಎಸಗಿದವರ ಊಹೆಗೂ ನಿಲುಕದ ಪ್ರತಿಕ್ರಿಯೆಯನ್ನು ಭಾರತ ನೀಡಲಿದೆ’ ಎಂದು ಪ್ರಧಾನಿ ಮೋದಿ ಅವರು ಎಚ್ಚರಿಕೆ ನೀಡಿದ್ದರು.
ಪಾಕಿಸ್ತಾನವು ಭಾರತ ವಿರೋಧಿ ಕಾರ್ಯಾಚರಣೆಯನ್ನು ಹೀಗೆಯೇ ಮುಂದುವರಿಸಿದರೆ ಅದು ಸಂಪೂರ್ಣ ನಾಶವಾಗಲಿದೆ
-ಅನುರಾಗ್ ಠಾಕೂರ್ ಕೇಂದ್ರದ ಮಾಜಿ ಸಚಿವ
ಪಹಲ್ಗಾಮ್ ದಾಳಿಗೆ ಪುಟಿನ್ ಖಂಡನೆ
ಪ್ರಧಾನಿ ನರೇಂದ್ರ ಮೋದಿ ಮತ್ತು ರಷ್ಯಾ ಅಧ್ಯಕ್ಷ ವ್ಲಾದಿಮಿರ್ ಪುಟಿನ್ ಅವರು ದೂರವಾಣಿ ಮೂಲಕ ಸೋಮವಾರ ಮಾತುಕತೆ ನಡೆಸಿದರು. ಈ ಸಂದರ್ಭದಲ್ಲಿ ಪುಟಿನ್ ಅವರು ಕಾಶ್ಮೀರದ ಪಹಲ್ಗಾಮ್‌ನಲ್ಲಿ ನಡೆದ ಭಯೋತ್ಪಾದಕ ದಾಳಿಯನ್ನು ಖಂಡಿಸಿದರು. ಭೀಕರ ದಾಳಿ ನಡೆಸಿದವರಿಗೆ ಮತ್ತು ಅದಕ್ಕೆ ಕುಮ್ಮಕ್ಕು ನೀಡಿದವರಿಗೆ ಕಠಿಣ ಶಿಕ್ಷೆಯಾಗಬೇಕು ಎಂದು ಹೇಳಿದರು. ಪಹಲ್ಗಾಮ್ ದಾಳಿಯಲ್ಲಿ ಮೃತಪಟ್ಟ ಮುಗ್ಧ ಜನರ ಸಾವಿಗೆ ಸಂತಾಪ ವ್ಯಕ್ತಪಡಿಸಿದ ಅವರು ಭಯೋತ್ಪಾದನೆ ವಿರುದ್ಧದ ಭಾರತದ ಹೋರಾಟಕ್ಕೆ ರಷ್ಯಾವು ಸಂಪೂರ್ಣ ಬೆಂಬಲ ನೀಡಲಿದೆ ಎಂದರು ಎಂದು ವಿದೇಶಾಂಗ ಸಚಿವಾಲಯದ ವಕ್ತಾರ ರಣಧೀರ್ ಜೈಸ್ವಾಲ್ ತಿಳಿಸಿದರು. ಭಾರತ–ರಷ್ಯಾದ ವಿಶೇಷವಾದ ರಾಜತಾಂತ್ರಿಕ ಸಂಬಂಧ ವೃದ್ಧಿಗಾಗಿ ಬದ್ಧತೆಯಿಂದ ಕೆಲಸ ಮಾಡುವುದಾಗಿ ಪುಟಿನ್ ಹೇಳಿದರು. ಬಾಹ್ಯ ಪ್ರಭಾವವು ಉಭಯ ದೇಶಗಳ ಸಂಬಂಧದ ಮೇಲೆ ಯಾವುದೇ ಪರಿಣಾಮ ಬೀರುವುದಿಲ್ಲ ಎಂದು ಪುಟಿನ್ ಮತ್ತು ಮೋದಿ ಅವರು ಒತ್ತಿ ಹೇಳಿದರು. ಭಾರತ ಭೇಟಿಗೆ ಒಪ್ಪಿಗೆ: ಈ ವರ್ಷ ಭಾರತದಲ್ಲಿ ನಡೆಯಲಿರುವ ಭಾರತ–ರಷ್ಯಾ ವಾರ್ಷಿಕ ಶೃಂಗಸಭೆಗೆ ಭೇಟಿ ನೀಡುವಂತೆ ಪ್ರಧಾನಿ ಮೋದಿ ಅವರು ನೀಡಿದ ಆಹ್ವಾನವನ್ನು ಪುಟಿನ್ ಅವರು ಸ್ವೀಕರಿಸಿದರು.
ಜಪಾನ್ ಬೆಂಬಲ
ಜಪಾನ್‌ನ ರಕ್ಷಣಾ ಸಚಿವ ಜನರಲ್ ನಕತಾನಿ ಅವರನ್ನು ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರು ಸೋಮವಾರ ಬರಮಾಡಿಕೊಂಡರು. ರಕ್ಷಣಾ ಸಹಕಾರ ಪ್ರಾದೇಶಿಕ ಭದ್ರತೆ ಭಯೋತ್ಪಾದನೆ ನಾಶ ಮುಂದಾದ ವಿಚಾರಗಳ ಕುರಿತು ಉಭಯ ದೇಶಗಳ ನಾಯಕರು ಮಾತುಕತೆ ನಡೆಸಿದರು. ನಕತಾನಿ ಅವರು ಪಹಲ್ಗಾಮ್ ದಾಳಿಯನ್ನು ಖಂಡಿಸಿದರು. ಭಯೋತ್ಪಾದನೆ ವಿರುದ್ಧ ಭಾರತದ ಹೋರಾಟಕ್ಕೆ ಬೆಂಬಲ ನೀಡುವುದಾಗಿ ಘೋಷಿಸಿದರು.
ದಾಳಿ ನಡೆಸಿದರೆ ಅಣ್ವಸ್ತ್ರ ಪ್ರಯೋಗ: ಪಾಕ್
ಮಾಸ್ಕೊ: ‘ಸಿಂಧೂ ನದಿ ನೀರಿನ ಹರಿವಿಗೆ ಅಡ್ಡಿಪಡಿಸಿದರೆ ಅಥವಾ ಯಾವುದೇ ರೀತಿಯ ದಾಳಿ ನಡೆಸಿದರೆ ಅಣ್ವಸ್ತ್ರ ಸೇರಿದಂತೆ ತನ್ನ ಸಂಪೂರ್ಣ ಬಲದಿಂದ ಪ್ರತಿಕ್ರಿಯೆ ನೀಡಲಾಗುವುದು’ ಎಂದು ರಷ್ಯಾದಲ್ಲಿರುವ ಪಾಕಿಸ್ತಾನದ ರಾಯಭಾರಿ ಮುಹಮ್ಮದ್ ಖಾಲಿದ್ ಜಮಾಲಿ ತಿಳಿಸಿದ್ದಾರೆ. ‘ನಮ್ಮ ಮೇಲಿನ ಯಾವುದೇ ರೀತಿಯ ಆಕ್ರಮಣವನ್ನು ಸಮರ್ಥವಾಗಿ ಎದುರಿಸಲು ಸಜ್ಜಾಗಿದ್ದೇವೆ. ಸಾಂಪ್ರದಾಯಿಕ ಪರಮಾಣು ಅಸ್ತ್ರಗಳನ್ನು ಒಳಗೊಂಡಂತೆ ಪೂರ್ಣ ಬಲವನ್ನು ಬಳಸುತ್ತೇವೆ’ ಎಂದು ಅವರು ರಷ್ಯಾದ ಸರ್ಕಾರಿ ಸುದ್ದಿ ಸಂಸ್ಥೆಗೆ ನೀಡಿದ ಸಂದರ್ಶನದಲ್ಲಿ ಎಚ್ಚರಿಸಿದ್ದಾರೆ. ‘ಫತಾಹ್ ಸರಣಿ’ ಕ್ಷಿಪಣಿ ಪರೀಕ್ಷೆ: ಇಸ್ಲಾಮಾಬಾದ್: 120 ಕಿ.ಮೀ. ದೂರ ಸಾಗಬಲ್ಲ ಸಾಮರ್ಥ್ಯದ ‘ಫತಾಹ್ ಸರಣಿ’ ಕ್ಷಿಪಣಿಯ ಪರೀಕ್ಷಾರ್ಥ ಪ್ರಯೋಗವನ್ನು ಪಾಕಿಸ್ತಾನವು ಯಶಸ್ವಿಯಾಗಿ ಸೋಮವಾರ ನಡೆಸಿತು. ಪಾಕಿಸ್ತಾನದ ಕಾರ್ಯತಂತ್ರ ವಿಭಾಗದ ಹಿರಿಯ ಅಧಿಕಾರಿಗಳು ಎಂಜಿನಿಯರ್‌ಗಳು ವಿಜ್ಞಾನಿಗಳು ಹಾಗೂ ಸೇನೆಯ ಹಿರಿಯ ಅಧಿಕಾರಿಗಳ ಸಮ್ಮುಖದಲ್ಲಿ ಈ ಪರೀಕ್ಷಾರ್ಥ ಪ್ರಯೋಗ ನಡೆಸಲಾಯಿತು. 450 ಕಿ.ಮೀ ದೂರ ಸಾಗಬಲ್ಲ ಸಾಮರ್ಥ್ಯದ ‘ಅಬ್ದಾಲಿ’ ಗುರಿ ನಿರ್ದೇಶಿತ ಕ್ಷಿಪಣಿಯ ಪರೀಕ್ಷಾರ್ಥ ಪ್ರಯೋಗವನ್ನು ಪಾಕಿಸ್ತಾನವು ಇತ್ತೀಚೆಗಷ್ಟೇ ಯಶಸ್ವಿಯಾಗಿ ನಡೆಸಿತ್ತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.